ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು, ಸರ್ವಾಧಿಕಾರಿ ಧೋರಣೆಯ ಪ್ರತೀಕ

Date:

ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು 14.2ರಷ್ಟು ಹಾಗೂ ಎರಡನೆಯ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಸಮುದಾಯವೆಂದೇ ಕರೆಯಲ್ಪಡುವ ಮುಸ್ಲಿಂ ಅಲ್ಪಸಂಖ್ಯಾತರಿಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿಯಂತೆ 2ಬಿ ಕ್ಯಾಟಗರಿಯಲ್ಲಿ ಶೇ 4ರಷ್ಟು ಮೀಸಲಾತಿಯನ್ನು 1995 ರಲ್ಲಿ ನೀಡಲಾಗಿತ್ತು, ಇದು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರು ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ಜಾರಿಗೆ ತರಲು ಪ್ರಯತ್ನಿಸಿದ್ದರು, ಅದನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದರಿಂದ ಕೆಲವು ದಿನಗಳ ಕಾಲ ತಡೆಹಿಡಿಯಲಾಗಿತ್ತು. ನಂತರ ನ್ಯಾಯಾಲಯದ ಆದೇಶದಂತೆ ಶೇ50 ರ ಮಿತಿಗೆ ಒಳಪಟ್ಟು 1995ರಲ್ಲಿ ಜಾರಿಗೊಳಿಸಲಾಗಿತ್ತು. ಇದಕ್ಕೆ ಪೂರಕವಾಗಿ ಅಂದಿನ ಸರಕಾರ ಕೆ.ರಹಮಾನ ಖಾನ್‌ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿತ್ತು, ಆ ಸಮಿತಿಯು ಸಹ ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ ಎಂದು ವರದಿ ನೀಡಿದೆ.

ಈಗ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಜಾತಿಗಳ, ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸುವ ದೃಷ್ಠಿಯಲ್ಲಿ ಮುಸ್ಲಿಮರಿಗೆ ಮೀಸಲಿದ್ದ ಶೇ 4 ರ ಮೀಸಲಾತಿಯನ್ನು ರದ್ದುಗೊಳಿಸಿ, ಅದನ್ನು ಒಕ್ಕಲಿಗ ಸಮುದಾಯಕ್ಕೆ ನಿಗದಿಗೊಳಿಸಲಾಗಿದ್ದ 3ಎ ಕೆಟಗರಿಯ ಶೇ4ರ ಮೀಸಲಾತಿಗೆ ಶೇ 2ರಷ್ಟು ಸೇರಿಸಿ ಒಟ್ಟು ಶೇ 6ಕ್ಕೆ ಹೆಚ್ಚಿಸಿ 2ಸಿ ಎಂದು ಹಾಗೂ ಲಿಂಗಾಯತ ಸಮುದಾಯದ 3ಬಿ ಕೆಟಗರಿಗೆ ಇದ್ದ ಶೇ 5ರ ಮೀಸಲಾತಿಗೆ ಶೇ 2 ರಷ್ಟು ಸೇರಿಸಿ ಒಟ್ಟು ಶೇ7ಕ್ಕೆ ಹೆಚ್ಚಿಸಿ 2ಡಿ ಎಂದು ಮೀಸಲಾತಿ ಮರುನಿಗದಿಗೊಳಿಸಿದೆ. ಇದು ಈ ರಾಜ್ಯದಲ್ಲಿ ಮುಸ್ಲಿಮರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪ್ರವೇಶ ಪಡೆಯಲು ಇದ್ದಂತಹ ಒಂದು ದಾರಿಯನ್ನು ಬಂದ್‌ ಮಾಡಲಾಗಿದೆ.

ಈಗಾಗಲೇ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ.18 ರಿಂದ ಶೇ. 24ಕ್ಕೆ ಹೆಚ್ಚಿಸಿರುವದರಿಂದ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ.50 ರ ಮಿತಿಯನ್ನು ದಾಟಿದ್ದು, ಈಗ ಅದು ಒಟ್ಟು ಶೇ.56 ರಷ್ಟಾಗಿದೆ. ಒಕ್ಕಲಿಗ ಸಮುದಾಯ ಬೇಡಿಕೆಯಂತೆ ಶೇ.6ಕ್ಕೆ ಹಾಗೂ ಲಿಂಗಾಯತ ಸಮುದಾಯದ ಬೇಡಿಕೆಯಂತೆ ಶೇ.7 ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದಲ್ಲಿ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ.60ಕ್ಕೆ ಬರುತ್ತಿತ್ತು, ಹೇಗೋ ಶೇ. 50ರ ಮಿತಿಯನ್ನು ದಾಟಲು ಸಂವಿಧಾನದ ಶೆಡ್ಯೂಲ್ 9 ಕ್ಕೆ ಸೇರಿಸಬೇಕಿದೆ. ಶೇ.56ರ ಬದಲಾಗಿ ಶೇ.60ಕ್ಕೆ ಸಂವಿಧಾನ ತಿದ್ದುಪಡಿ ಮಾಡಬಹುದಾಗಿತ್ತು. ಇದರಿಂದ ಮುಸ್ಲಿಮರ ಮೀಸಲಾತಿಗೆ ಯಾವುದೇ ಧಕ್ಕೆಯಾಗುತ್ತಿರಲಿಲ್ಲ. ಆದರೆ ಸರಕಾರಕ್ಕೆ ಮುಸ್ಲಿಂರನ್ನು ತೊಂದರೆಗೆ ಸಿಲುಕಿಸುವ ಉದ್ದೇಶವಿದ್ದುದ್ದರಿಂದ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿದೆ.

ದೇಶದಲ್ಲಿ 2011ರ ಜನಗಣತಿಯಂತೆ 13.8 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದರುವ ಬಗ್ಗೆ ಕೇಂದ್ರ ಸರಕಾರಗಳು ರಚಿಸಿದ ಹಲವು ಸಮಿತಿಗಳು ವಿವರವಾದ ವರದಿಗಳನ್ನು ನೀಡಲಾಗಿದೆ. ಅದರಲ್ಲಿ ವಿಶೇಷವಾಗಿ ನ್ಯಾ.ರಾಜೇಂದ್ರ ಸಾಚಾರ ಸಮಿತಿ ಹಾಗೂ ನ್ಯಾ.ರಂಗನಾಥ ಮಿಶ್ರಾ ಆಯೋಗ ನೀಡಿರುವ ವರದಿಗಳು ಪ್ರಮುಖವಾಗಿವೆ. ದೇಶದಲ್ಲಿ ಅತೀ ಕೆಳಮಟ್ಟದ ಜೀವನ ನಡೆಸುತ್ತಿರುವ ಸಮುದಾಯಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವುದೇ ಮುಸ್ಲಿಂ ಸಮುದಾಯವಾಗಿದೆ. ಅಲ್ಲದೇ ಶೈಕ್ಷಣಿಕವಾಗಿ ಅತೀ ಕಡಿಮೆ ಸಾಕ್ಷರತೆ ಹೊಂದಿರುವುದು ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆ ಅತಿ ಹೆಚ್ಚು ಇದೇ ಸಮುದಾಯದಿಂದ ಇರುವುದು ಎಂದು ವರದಿಯಾಗಿದೆ. ಸರಕಾರಿ ಸಾಮ್ಯದ ನೌಕರಿಗಳಲ್ಲಿ ಅತೀ ಕಡಿಮೆ ಜನರಿಗೆ ಅವಕಾಶ ಸಿಕ್ಕಿರುವುದು ಮತ್ತು ಇನ್ನೂ ಕೆಲವು ಕಡೆ ಅವಕಾಶವೇ ಸಿಕ್ಕಿಲ್ಲವೆಂದು ವರದಿ ನೀಡಲಾಗಿದೆ.

ನ್ಯಾ.ರಂಗನಾಥ ಮಿಶ್ರಾ ಆಯೋಗ ನೀಡಿರುವ ವರದಿಯ ಶಿಫಾರಸ್ಸಿನಂತೆ ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲಾತಿ ನೀಡಬೇಕು ಅದರಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 10 ರಷ್ಟು ಮೀಸಲಾತಿ ನೀಡಿಬೇಕೆಂದು ಹೇಳಲಾಗಿದೆ. ಅದೇ ರೀತಿ ನ್ಯಾ.ರಾಜೇಂದ್ರ ಸಾಚಾರ ಸಮಿತಿಯ ವರದಿಯು ಸಹ ಇದನ್ನೇ ಉಲ್ಲೇಖಿಸಿದೆ. ಅಲ್ಲದೇ ಮಂಡಲ್ ಆಯೋಗದ ವರದಿಯಲ್ಲಿಯೂ ಸಹ ಹಿಂದುಳಿದ ವರ್ಗಗಳಿಗೆ ನೀಡಲಾಗುವ ಶೇ. 27ರ ಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಶೇ.8.4ರಷ್ಟು ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಬೇಕು. ಅದರಲ್ಲಿ ಶೇ. 6 ರಷ್ಟು ಮುಸ್ಲಿಂ ಅಲ್ಪಸಂಖ್ಯಾತರಿಗೆ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿತ್ತು. ಆದರೆ, ಮಂಡಲ್ ಆಯೋಗದ ವರದಿ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಅಂದಿನ ಸರಕಾರ ಅಲ್ಪಸಂಖ್ಯಾತರ ಮೀಸಲಾತಿಯ ಶಿಫಾರಸ್ಸು ಬದಿಗಿಟ್ಟು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿರುವ ಕಾರಣ, ನ್ಯಾ.ರಾಜೇಂದ್ರ ಸಾಚಾರ ಸಮಿತಿಯು ಅಲ್ಪಸಂಖ್ಯಾತರ ಸ್ಥಿತಿಗತಿ ಅತ್ಯಂತ ಕೆಟ್ಟದಾಗಿದೆ ಎಂದು ಹೇಳಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲವೆಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಸಂವಿಧಾನದ ಅನುಚ್ಛೇಧ 15(4) ಹಾಗೂ 16(4)ರಲ್ಲಿ ಉಲ್ಲೇಖಿಸಲಾದ ಮೀಸಲಾತಿಯ ಅಂಶವು ದೇಶದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ದೇಶದ ನಾಗರಿಕರಿಗೆ (Socially and educationally backward classes of citizens of the Country)ಮೀಸಲಾತಿ ನೀಡಬಹುದಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ ಎಲ್ಲಿಯೂ ಯಾವ ಜಾತಿಗೆ, ಯಾವ ಸಮುದಾಯಕ್ಕೆ, ಯಾವ ಧರ್ಮಕ್ಕೆ ನೀಡಬೇಕೆನ್ನುವುದಿಲ್ಲ ಎನ್ನುವುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ತಡೆಯಾಜ್ಞೆಯನ್ನು ರದ್ದು ಎಂದು ಅರ್ಥೈಸುವುದು ಯಾವ ನ್ಯಾಯ?

ಬಸವರಾಜ ಬೊಮ್ಮಾಯಿಯವರು ಧಾರ್ಮಿಕ ಮುಸ್ಲಿಂ ಅಲ್ಪಸಂಖ್ಯಾತರಿಗೆ ಆಂಧ್ರಪ್ರದೇಶ ಸರಕಾರ ನೀಡಿದ್ದ ಶೇ 5ರ ಮೀಸಲಾತಿಯು ಸರ್ವೋಚ್ಛ ನ್ಯಾಯಾಲಯವು ರದ್ದುಗೊಳಿಸಿದೆ ಎಂದು ಹೇಳಿರುವುದು ಸಹ ಸತ್ಯಕ್ಕೆ ದೂರವಾದ ವಿಷಯವಾಗಿದೆ. ಆಂಧ್ರಪ್ರದೇಶ ಸರಕಾರ 2005ರಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇ 5ರ ಮೀಸಲಾತಿಗೆ ಸರ್ವೋಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆಯನ್ನು ರದ್ದು ಎಂದು ಅರ್ಥೈಸುವುದು ಯಾವ ನ್ಯಾಯ? ಆ ಪ್ರಕರಣ ಇಂದಿಗೂ ಸರ್ವೋಚ್ಛ ನ್ಯಾಯಾಲಯದ ಮುಂದಿದೆ. ಅದೇ ರೀತಿ ತಮಿಳನಾಡಿನಲ್ಲಿ, ಕೇರಳದಲ್ಲಿ, ತೆಲಂಗಾಣದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ಹಿಂದುಳಿದ ವರ್ಗಗಳ ಅಡಿಯಲ್ಲಿ ನೀಡಲಾಗಿದೆ. ಅದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೇ ತರಾತುರಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಒಂದು ಸಮುದಾಯದ ಮೀಸಲಾತಿಯನ್ನೇ ರದ್ದುಗೊಳಿಸಿರುವ ಅಕ್ಷಮ್ಯ ಅಪರಾಧ.

ಸರಕಾರ ಈಗ ತೆಗೆದುಕೊಂಡಿರುವ ಮೀಸಲಾತಿ ರದ್ದತಿ ನಿರ್ಣಯವು ದ್ವೇಷದಿಂದ ಕೂಡಿದ್ದು, ಮುಸ್ಲಿಂ ಸಮುದಾಯ ಬಿಜೆಪಿ ಪಕ್ಷಕ್ಕೆ ಮತದಾನ ಮಾಡುವದಿಲ್ಲ ಎನ್ನುವ ಏಕೈಕ ಕಾರಣದಿಂದ ಮೀಸಲಾತಿಯನ್ನು ರದ್ದು ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಈಗಾಗಲೇ ಈ ಸಮುದಾಯ ಏನನ್ನು ತಿನ್ನಬೇಕು, ಯಾವ ಬಟ್ಟೆಯನ್ನು ಧರಿಸಬೇಕು, ಎಲ್ಲಿ ವ್ಯಾಪಾರ ಮಾಡಬೇಕು ಇತ್ಯಾದಿ ವಿಷಯಗಳನ್ನು ಮುನ್ನಲೆಗೆ ತಂದು ಮುಸ್ಲಿಮರನ್ನು ನಿಯಂತ್ರಿಸಲು ಪ್ರಯತ್ನಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಅದರಂತೆ ಇನ್ನು ಮುಂದೆ ಮುಸ್ಲಿಂ ಸಮುದಾಯ ಸುಲಭವಾಗಿ ಶಿಕ್ಷಣ ಪಡೆಯಬಾರದು ಮತ್ತು ಸುಲಭವಾಗಿ ಸರಕಾರಿ ಸೇವೆಗೆ ಸೇರಬಾರದೆನ್ನುವ ಏಕೈಕ ದುರುದ್ದೇಶದಿಂದ ಈ ನಿರ್ಣಯ ಕೈಗೊಂಡಿರುವುದು ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ.

ಒಂದು ಸಮುದಾಯದ ಮೀಸಲಾತಿ ರದ್ದುಗೊಳಿಸಲು ಯಾವುದೇ ಕಾರಣ ಸರಕಾರದ ಮುಂದೆ ಇರಲಿಲ್ಲ, ಯಾವುದೇ ವರದಿಗಳು ಇರಲಿಲ್ಲ ಹಾಗೂ ಸರಕಾರಿ ಸೇವೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮುಸ್ಲಿಮರು ಸೇರಿದ್ದಾರೆ ಎನ್ನುವ ಅಂಕಿಅಂಶಗಳಿಲ್ಲ. ಎಷ್ಟು ಪ್ರಮಾಣದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವ ವರದಿಗಳಿಲ್ಲ. ಇಂತಹ ಸಂದರ್ಭದಲ್ಲಿ ಮೀಸಲಾತಿಯನ್ನೇ ರದ್ದುಗೊಳಿಸುವುದು ಒಂದು ಸರಕಾರದ ಧೋರಣೆಯಾಗಬಾರದಿತ್ತು. ಮತ್ತು ಇಂತಹ ನಿರ್ಣಯ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ತೆಗೆದುಕೊಳ್ಳಲಾಗಿದೆ. ಮುಸ್ಲಿಂ ಸಮುದಾಯವನ್ನು ಇನ್ನು ಮುಂದೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಡಿಯಲ್ಲಿ ಇರುವ ಮೀಸಲಾತಿಗೆ ಸೇರಿಸಲಾಗುವುದು ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಯಾಕೆಂದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದ ಸಮುದಾಯದ ಜೊತೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಿರುವುದು ಯಾವ ಮಾನದಂಡದಡಿಯಲ್ಲಿ ಎನ್ನುವುದು ಪ್ರಶ್ನೆಯಾಗಿದೆ.

ಈಗ ಮುಸ್ಲಿಂ ಸಮುದಾಯ ತಾಳ್ಮೆಯಿಂದ ಪ್ರಗತಿಪರರು, ಬುದ್ದಿಜೀವಿಗಳು, ಕಾನೂನು ಸಲಹೆಗಾರರ ಜೊತಗೆ ಚರ್ಚಿಸಿ ಯಾವ ರೀತಿ ಕಾನೂನಾತ್ಮಕ ಹೋರಾಟ ಮಾಡಬಹುದಾಗಿದೆ ಎಂದು ಒಂದು ನಿರ್ಣಯಕ್ಕೆ ಬರಬೇಕು. ಯಾವುದೇ ಅತಿರೇಕದ ನಿರ್ಣಯ ಕೈಗೊಳ್ಳದಿರುವುದೇ ಉತ್ತಮವೆಂದು ಹೇಳಬಹುದಾಗಿದೆ.

ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಹಿತ್ಯ ಜಗತ್ತಿನ ಅಂತರ್ಜಲ ಎಸ್‌ ದಿವಾಕರ್

ಎಸ್‌ ದಿವಾಕರ್ ಅವರು ಎಂಬತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ‘ಎಸ್‌ ದಿವಾಕರ್...

ಹೊಸ ಓದು | ಜಡಗೊಂಡ ಓದುಗನನ್ನು ಬೆಚ್ಚಿ ಬೀಳಿಸುವ ‘ನಿಷೇಧ’: ಹ ಮಾ ರಾಮಚಂದ್ರ ಬರೆಹ

ಸಾಹಿತ್ಯ ಎನ್ನುವುದು ಕಠಿಣ ಶಬ್ದಗಳಲ್ಲಿ ಕಳೆದುಹೋಗದೆ, ಜನರ ಹೃದಯಕ್ಕೆ ತಲುಪುವಂತಾಗಬೇಕು, ಬತ್ತಿದೆದೆಗಳಲ್ಲಿ...

ಜಾತಿ ಆಧಾರಿತ ಸಮೀಕ್ಷಾ ವರದಿಗೆ ವಿರೋಧ ಯಾಕೆ?

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತನ್ನ ಸಮೀಕ್ಶಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ....

ಜಾತಿ ಗಣತಿಗೆ ವಿರೋಧ; ನಿರ್ದಯಿ ಸಾಮಾಜಿಕ ದ್ರೋಹ

ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ...