ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ದಲಿತ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಿಂದ ಕುಂದುಕೊರತೆ ಸಭೆ ನಡೆಯದ ಕಾರಣ ದಲಿತರ ಸಮಸ್ಯೆಗಳು ಸಕಾಲದಲ್ಲಿ ಬಗೆಹರಿಯದೆ ಇನ್ನಷ್ಟು ಹೆಚ್ಚಾಗಿವೆ. ಸಭೆಗಳನ್ನು ಸಕಾಲದಲ್ಲಿ ನಡೆಸಿದ್ದರೆ ಇಂತಹ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಎಂದು ಮುಖಂಡರು ಹೇಳಿದರು. ಪ್ರತಿ ಸಭೆಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರುಹಾಜರಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಗೈರಾಗುವ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ದಲಿತ್ ನಾರಾಯಣ್ ಒತ್ತಾಯಿಸಿದರು.
ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಆರಂಭವಾಗಿ ಎಂಟು ವರ್ಷಗಳಾದರೂ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಭವನ ಇನ್ನೂ ಪೂರ್ಣಗೊಂಡಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಇತ್ತೀಚೆಗೆ ನಕಲಿ ದಾಖಲೆ ಸೃಷ್ಟಿಸಿ ದಲಿತರ ಜಮೀನು ಕಬಳಿಸುವ ಯತ್ನಗಳು ಹೆಚ್ಚಾಗಿವೆ. ಇದಕ್ಕೆ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಹಲವು ವರ್ಷಗಳಿಂದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದು, ದೂರು ನೀಡಲು ಠಾಣೆಗೆ ತೆರಳಿದರೆ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಾರೆ ಎಂದೂ ದೂರಿದರು. ದಲಿತರ ಭೂಮಿಗೆ ಅತಿಕ್ರಮ ಪ್ರವೇಶ ಮಾಡುವವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಲಾಯಿತು. ಅಧಿಕಾರಿಗಳು ನಿಗದಿತ ಸಮಯಕ್ಕೆ ಕುಂದುಕೊರತೆ ಸಭೆ ನಡೆಸಿ ದಲಿತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
This video cannot be played in your browser. Open the video directly
ಸಭೆಯಲ್ಲಿ ತಹಶೀಲ್ದಾರ್ ಕರಿಯನಾಯ್ಕ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಸಿಪಿಐ ಮಾಧ್ಯನಾಯಕ್, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ. ಮರಿಯಪ್ಪ, ದಲಿತ ಮುಖಂಡರಾದ ಶಿವಶಂಕರ್, ದಲಿತ್ ನಾರಾಯಣ್, ರಾಮಚಂದ್ರಯ್ಯ, ಶ್ರೀನಿವಾಸ್, ರಾಜು ವೆಂಕಟಪ್ಪ, ರಾಮಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು





