ಸೇಡಂ ಪಟ್ಟಣದಲ್ಲಿ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ವಿತರಣೆಯಲ್ಲಿ ನಿರಂತರ ವಿಳಂಬವಾಗುತ್ತಿದ್ದು, ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಗ್ಯಾಸ್ ಏಜೆನ್ಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸೇನೆ ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದೆ.
ದಲಿತ ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ ಎಚ್. ರನ್ನೆಲ್ಲಾ ಮಾತನಾಡಿ, ಸೇಡಂನ ಸವಿತಾ ಇಂಡಿಯನ್ ಗ್ಯಾಸ್ ಏಜೆನ್ಸಿ ವಿರುದ್ಧ ಇದೇ ವಿಚಾರವಾಗಿ 2026ರ ಮೇ 29ರಂದು ದೂರು ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ಕಿಂಗ್ ಮಾಡಿದ 48 ಗಂಟೆಗಳೊಳಗೆ ವಿತರಿಸಬೇಕೆಂಬ ನಿಯಮವಿದ್ದರೂ, “ಸ್ಟಾಕ್ ಇಲ್ಲ”, “ವಾಹನ ಬಂದಿಲ್ಲ” ಎಂಬ ನೆಪ ಹೇಳಿ ವಿತರಣೆಯನ್ನು ವಿಳಂಬಗೊಳಿಸಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ, ಗೃಹಬಳಕೆಯ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಸುಮಾರು ₹2,000ಕ್ಕೆ ವಾಣಿಜ್ಯ ಬಳಕೆಗೆ ಮಾರಾಟ ಮಾಡಲಾಗುತ್ತಿದೆ ಹಾಗೂ ಅಧಿಕೃತ ದರಕ್ಕಿಂತ ಹೆಚ್ಚುವರಿಯಾಗಿ ₹50 ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ದಲಿತ ಸೇನೆಯ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ವಿದ್ಯಾರ್ಥಿ ಹೋರಾಟಕ್ಕೆ ಮೊದಲ ಜಯ; ಅಭಿನಂದನೆ ತಿಳಿಸಿದ ಪ್ರಜಾಸತ್ತಾತ್ಮಕ ಚಿಂತನ ವೇದಿಕೆ
ಈ ಸಂದರ್ಭದಲ್ಲಿ, ತಾಲೂಕು ಅಧ್ಯಕ್ಷ ಮೈಲಾರಿ ಕಾಸ್ಕರ, ಸೇಡಂ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶ್ರೀದತ್ತ ಬಾಂದವಾಣಾ, ಮಾಶಪ್ಪ, ಚಾಂದಪಾಷಾ ಬುರುಗಪಲ್ಲಿ, ವಸಂತ್, ದೇವೇಂದ್ರ, ಮಾರಖಂಟೆಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಸಹಿ ಹಾಕಿದ್ದಾರೆ.





