ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026 ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಡುಪಿ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 10,14,143 ಮತದಾರರು ಸ್ಥಾನ ಪಡೆದಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಜಿಲ್ಲೆಯಲ್ಲಿ 10,63,876 ಮತದಾರರಿದ್ದು, ಇದೀಗ 49,733 ಮತದಾರರ ಇಳಿಕೆಯಾಗಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಎಸ್‌ಐಆರ್ ಪ್ರಕ್ರಿಯೆಯ ವಿವರಗಳನ್ನು ನೀಡಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಬಳಿಕ ಅತ್ಯಂತ ಕಡಿಮೆ ಮತದಾರರ ಇಳಿಕೆ ಕಂಡ ಜಿಲ್ಲೆಗಳ ಪೈಕಿ ಉಡುಪಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆಗೆ ಹೋಲಿಸಿದರೆ ಶೇ.4.67ರಷ್ಟು ಇಳಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.6.95 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.7.35ರಷ್ಟು ಇಳಿಕೆಯಾಗಿದೆ.
ಜೂನ್ 16ರಂದು ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುವ ಮೊದಲು ಜಿಲ್ಲೆಯಲ್ಲಿ 10,63,876 ಮತದಾರರಿದ್ದರು. ಆಗಸ್ಟ್ 24ರಂದು ಪ್ರಕಟಗೊಂಡ ಕರಡು ಪಟ್ಟಿಯಲ್ಲಿ 10,00,545 ಮತದಾರರು ಸ್ಥಾನ ಪಡೆದಿದ್ದರು. ಕರಡು ಪಟ್ಟಿ ಪ್ರಕಟವಾದ ಬಳಿಕ 17,334 ಮಂದಿಯ ಹೆಸರು ಸೇರ್ಪಡೆಯಾಗಿದ್ದು, ವಿವಿಧ ಕಾರಣಗಳಿಂದ 3,736 ಮಂದಿಯ ಹೆಸರು ಕೈಬಿಡಲಾಗಿದೆ. ಈ ಮೂಲಕ ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 13,598 ಮತದಾರರ ಹೆಚ್ಚಳವಾಗಿದೆ.
ಎಸ್‌ಐಆರ್ ಗಣತಿ ಹಂತದಲ್ಲಿ ವಿವಿಧ ಕಾರಣಗಳಿಂದ 63,331 ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇವರಲ್ಲಿ 4,145 ಮಂದಿ ಲಭ್ಯವಿಲ್ಲದವರು, 29,361 ಮಂದಿ ಸ್ಥಳಾಂತರಗೊಂಡವರು, 21,262 ಮಂದಿ ಮೃತಪಟ್ಟವರು ಹಾಗೂ 8,374 ಮಂದಿ ನಕಲಿ ಅಥವಾ ದ್ವಿರುಕ್ತಿ ಹೆಸರುಗಳನ್ನು ಹೊಂದಿದವರಾಗಿದ್ದಾರೆ. ಉಳಿದ 189 ಹೆಸರುಗಳನ್ನು ಇತರ ಕಾರಣಗಳಿಂದ ಕೈಬಿಡಲಾಗಿದೆ.
ತಾಲೂಕುವಾರು ವಿವರದಂತೆ ಬೈಂದೂರಿನಲ್ಲಿ 14,280, ಕುಂದಾಪುರದಲ್ಲಿ 11,634, ಉಡುಪಿಯಲ್ಲಿ 17,726, ಕಾಪುವಿನಲ್ಲಿ 10,034 ಹಾಗೂ ಕಾರ್ಕಳದಲ್ಲಿ 9,657 ಹೆಸರುಗಳನ್ನು ತೆಗೆದುಹಾಕಲಾಗಿದೆ.
ಕರಡು ಪಟ್ಟಿ ಪ್ರಕಟವಾದ ಬಳಿಕ ಕೈಬಿಡಲಾದ 3,736 ಹೆಸರುಗಳಲ್ಲಿ 35 ಮಂದಿ ಮೃತಪಟ್ಟವರು, 2,620 ಮಂದಿ ಸ್ಥಳಾಂತರಗೊಂಡವರು, ನಾಲ್ಕು ನಕಲಿ ಅಥವಾ ದ್ವಿರುಕ್ತಿ ಹೆಸರುಗಳು ಹಾಗೂ 1,077 ಮಂದಿ ಇತರ ಕಾರಣಗಳಿಗೆ ಸಂಬಂಧಿಸಿದವರಾಗಿದ್ದಾರೆ.

47 ಮಂದಿ ವಿದೇಶಿ ಪೌರತ್ವ ಹೊಂದಿರುವವರು ಪತ್ತೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ 47 ಮಂದಿ ಭಾರತೀಯ ನಾಗರಿಕರಲ್ಲದವರು ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇವರಲ್ಲಿ ನೇಪಾಳದ 37 ಮಂದಿ, ಬ್ರಿಟನ್‌ನ ಮೂವರು, ಅಮೆರಿಕದ ನಾಲ್ವರು ಹಾಗೂ ಕೆನಡಾ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬರು ಸೇರಿದ್ದಾರೆ.
ಬ್ರಹ್ಮಾವರದಲ್ಲಿ ಇಬ್ಬರು ನೇಪಾಳದವರು, ಉಡುಪಿಯಲ್ಲಿ 26 ಮಂದಿ, ಕಾಪುವಿನಲ್ಲಿ 17 ಮಂದಿ ಹಾಗೂ ಕಾರ್ಕಳದಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾದ ತಲಾ ಒಬ್ಬರು ಪತ್ತೆಯಾಗಿದ್ದಾರೆ. ನೇಪಾಳದವರನ್ನು ಹೊರತುಪಡಿಸಿ ಉಳಿದವರಲ್ಲಿ ಹೆಚ್ಚಿನವರು ಸ್ಥಳೀಯರಾಗಿದ್ದು, ಆಯಾ ದೇಶಗಳ ಪೌರತ್ವ ಪಡೆದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
11,261 ಯುವ ಮತದಾರರು
ಎಸ್‌ಐಆರ್ ಪ್ರಕ್ರಿಯೆ ವೇಳೆ ಯುವ ಮತದಾರರ ನೋಂದಣಿಯಲ್ಲಿಯೂ ಹೆಚ್ಚಳವಾಗಿದೆ. ಕರಡು ಪಟ್ಟಿಯಲ್ಲಿ 5,914 ಯುವ ಮತದಾರರಿದ್ದು, ಪ್ರಕ್ರಿಯೆಯ ಬಳಿಕ ಹೊಸದಾಗಿ 5,347 ಯುವ ಮತದಾರರು ನೋಂದಣಿಯಾಗಿದ್ದಾರೆ. ಅಂತಿಮ ಪಟ್ಟಿಯಲ್ಲಿ ಒಟ್ಟು 11,261 ಯುವ ಮತದಾರರಿದ್ದಾರೆ.
ಜಿಲ್ಲೆಯಲ್ಲಿ 21 ಮಂದಿ ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಗಣತಿ ನಮೂನೆ ಪಡೆಯಲು ಹಾಗೂ ದಾಖಲೆಗಳನ್ನು ನೀಡಲು ನಿರಾಕರಿಸಿದ್ದಾರೆ. ಇವರಲ್ಲಿ ಉಡುಪಿಯ ಒಂಬತ್ತು ಮಂದಿ ಮತ್ತು ಕಾಪುವಿನ 12 ಮಂದಿ ಸೇರಿದ್ದಾರೆ.
ಕರಡು ಪಟ್ಟಿಯ ಬಳಿಕ 59,080 ಅರ್ಜಿಗಳ ಸ್ವೀಕಾರ
ಕರಡು ಪಟ್ಟಿ ಪ್ರಕಟವಾದ ಬಳಿಕ ಮತದಾರರ ಸೇರ್ಪಡೆ, ಹೆಸರು ಕೈಬಿಡುವಿಕೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 59,080 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 3,193 ಅರ್ಜಿಗಳು ತಿರಸ್ಕೃತಗೊಂಡಿದ್ದು, 55,887 ಅರ್ಜಿಗಳು ಸ್ವೀಕೃತಗೊಂಡಿವೆ.
ಫಾರ್ಮ್-6ರ ಮೂಲಕ ಹೆಸರು ಸೇರ್ಪಡೆಗೆ 14,712 ಅರ್ಜಿಗಳು ಬಂದಿದ್ದು, 14,351 ಅಂಗೀಕಾರಗೊಂಡಿವೆ. ಅನಿವಾಸಿ ಭಾರತೀಯರ ನೋಂದಣಿಗೆ ಸಂಬಂಧಿಸಿದ ಫಾರ್ಮ್-6ಎ ಅಡಿಯಲ್ಲಿ ಬಂದ 349 ಅರ್ಜಿಗಳಲ್ಲಿ 265 ಅಂಗೀಕಾರಗೊಂಡಿವೆ. ಹೆಸರು ಕೈಬಿಡಲು ಸಲ್ಲಿಸಲಾದ ಫಾರ್ಮ್-7ರ 5,043 ಅರ್ಜಿಗಳಲ್ಲಿ 3,736 ಸ್ವೀಕೃತಗೊಂಡಿವೆ. ಮತದಾರರ ವಿವರಗಳ ವರ್ಗಾವಣೆ ಅಥವಾ ತಿದ್ದುಪಡಿಗೆ ಸಂಬಂಧಿಸಿದ ಫಾರ್ಮ್-8ರ 38,976 ಅರ್ಜಿಗಳಲ್ಲಿ 37,535 ಅಂಗೀಕಾರಗೊಂಡಿವೆ.
ಕರಡು ಪಟ್ಟಿಯ ಬಳಿಕ ಒಟ್ಟು 17,334 ಮತದಾರರು ಸೇರ್ಪಡೆಯಾಗಿದ್ದು, ಇವರಲ್ಲಿ 8,540 ಪುರುಷರು ಮತ್ತು 8,794 ಮಹಿಳೆಯರು ಸೇರಿದ್ದಾರೆ.
ಅಂತಿಮ ಮತದಾರರ ಪಟ್ಟಿ: ಮಹಿಳೆಯರ ಸಂಖ್ಯೆ ಹೆಚ್ಚು
ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ 4,91,109 ಪುರುಷರು, 5,23,023 ಮಹಿಳೆಯರು ಹಾಗೂ 11 ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು 10,14,143 ಮತದಾರರಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ವಿವರದಂತೆ ಬೈಂದೂರಿನಲ್ಲಿ 2,30,309, ಕುಂದಾಪುರದಲ್ಲಿ 2,03,103, ಉಡುಪಿಯಲ್ಲಿ 2,07,598, ಕಾಪುವಿನಲ್ಲಿ 1,87,952 ಹಾಗೂ ಕಾರ್ಕಳದಲ್ಲಿ 1,85,181 ಮತದಾರರಿದ್ದಾರೆ.
ಮತದಾರರು ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಅರ್ಹ ನಾಗರಿಕರು ಹೆಸರು ನೋಂದಾಯಿಸದಿದ್ದರೆ ಅಥವಾ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಅರ್ಜಿ ಸಲ್ಲಿಸಬಹುದು. ಚುನಾವಣಾ ನೋಂದಣಾಧಿಕಾರಿಯ ತೀರ್ಪಿನಿಂದ ಅಸಮಾಧಾನಗೊಂಡವರು ನಿಯಮಾನುಸಾರ ಜಿಲ್ಲಾ ಚುನಾವಣಾಧಿಕಾರಿ ಬಳಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.







