ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೂಚಿಸಿದರು.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಿದ್ದು, ಸಾವಿರಾರು ಕುಟುಂಬಗಳಿಗೆ ಅನುಕೂಲ ಕಲ್ಪಿಸಿವೆ. ಈ ಯೋಜನೆಗಳ ಪ್ರಯೋಜನ ಅರ್ಹರಿಗೆ ಸಮರ್ಪಕವಾಗಿ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ಬಸ್ ಸಂಚಾರ ವ್ಯವಸ್ಥೆ ಸುಧಾರಿಸಲು ಸೂಚನೆ
ಶಕ್ತಿ ಯೋಜನೆಯಡಿ ಅರ್ಹ ಮಹಿಳಾ ಪ್ರಯಾಣಿಕರಿಗೆ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು. ಪಡುಬಿದ್ರೆ–ನಿಟ್ಟೆ ಹಾಗೂ ಪಳ್ಳಿ–ಬೆಳ್ವೆ ಮಾರ್ಗಗಳಲ್ಲಿ ಬಸ್‌ಗಳ ಸಮಯ ಬದಲಾವಣೆ ಮಾಡಿ ಸಂಚಾರ ಆರಂಭಿಸುವಂತೆ ಹಿಂದಿನ ಸಭೆಗಳಲ್ಲಿ ಸೂಚಿಸಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಆರ್‌ಟಿಒ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.
ಬೈಂದೂರು ವ್ಯಾಪ್ತಿಯಲ್ಲಿ ಕೆಲವು ಬಸ್‌ಗಳು ನಿಲ್ದಾಣ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಪ್ರಯಾಣಿಕರನ್ನು ಇಳಿಸಿ ತೆರಳುತ್ತಿರುವುದರಿಂದ ನಿಲ್ದಾಣಗಳಲ್ಲಿ ಕಾಯುವವರಿಗೆ ತೊಂದರೆಯಾಗುತ್ತಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಳಸಬೇಕು. ನಿಗಮದ ಎಲ್ಲ ಬಸ್‌ಗಳು ನಿಲ್ದಾಣ ಪ್ರವೇಶಿಸಿ, ಪ್ರಯಾಣಿಕರನ್ನು ಹತ್ತಿಸಿಕೊಂಡ ಬಳಿಕವೇ ಮುಂದಕ್ಕೆ ತೆರಳಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಕುರಿತು ಬಸ್ ಚಾಲಕರು ಮತ್ತು ನಿರ್ವಾಹಕರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡದಂತೆ ನಿಗಮದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಇ-ಕೆವೈಸಿ ಪೂರ್ಣಗೊಳಿಸಲು ಸೂಚನೆ
ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೇ ಶೇ. 84ರಷ್ಟು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಾರ್ವಜನಿಕರು ‘ಅನ್ನಸೇವೆ’ ಮೊಬೈಲ್ ಆ್ಯಪ್ ಮೂಲಕವೂ ಇ-ಕೆವೈಸಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ 3,32,021 ಕುಟುಂಬಗಳ ಪೈಕಿ 10,667 ಕುಟುಂಬಗಳ ಸಮೀಕ್ಷೆ ಬಾಕಿಯಿದ್ದು, ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸಬೇಕು. ಯುವನಿಧಿ ಯೋಜನೆಯ ಪ್ರಯೋಜನಗಳ ಕುರಿತು ಕೌಶಲ್ಯಾಭಿವೃದ್ಧಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಪ್ರಗತಿ
ಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಸೆಪ್ಟೆಂಬರ್‌ವರೆಗೆ 4.74 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದಕ್ಕಾಗಿ 194.32 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ 2,13,236 ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2,000 ರೂ. ನೀಡಲಾಗುತ್ತಿದ್ದು, ಈವರೆಗೆ 1,451.36 ಕೋಟಿ ರೂ. ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,32,021 ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಉಚಿತ ವಿದ್ಯುತ್ ಸೌಲಭ್ಯಕ್ಕಾಗಿ 788.02 ಕೋಟಿ ರೂ. ವ್ಯಯಿಸಲಾಗಿದೆ.
ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಒಟ್ಟು 8,24,049 ಫಲಾನುಭವಿಗಳಿಗೆ ಆಹಾರ ಧಾನ್ಯದ ಬದಲಾಗಿ ಈವರೆಗೆ 427.36 ಕೋಟಿ ರೂ. ಪಾವತಿಸಲಾಗಿದೆ. ಯುವನಿಧಿ ಯೋಜನೆಯಡಿ 5,401 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, 5,016 ಫಲಾನುಭವಿಗಳಿಗೆ ಡಿಬಿಟಿ ಮೂಲಕ 13.67 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ನ. 24ರಂದು ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶ
ಜಿಲ್ಲೆಯಲ್ಲಿ ನವೆಂಬರ್ 24ರಂದು ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಅಶೋಕ್ ಕುಮಾರ್ ಕೊಡವೂರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಸತೀಶ್ ಹಾಗೂ ಸಂತೋಷ್ ಕುಲಾಲ್, ತಾಲೂಕು ಮಟ್ಟದ ಸಮಿತಿ ಅಧ್ಯಕ್ಷರಾದ ಡಾ. ಸುನೀತಾ ಶೆಟ್ಟಿ, ನವೀನ್ ಚಂದ್ರ ಅಡ್ವೆ, ಮೋಹನ್ ಪೂಜಾರಿ, ಅಜಿತ್ ಹೆಗ್ಡೆ ಹಾಗೂ ಶಂಕರ ಶೇರಿಗಾರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







