ವಿಶ್ವ ಪ್ರಕೃತಿ ಸಂರಕ್ಷಣೆ ದಿನ ಹಾಗೂ ಬುದ್ಧ ಪೂರ್ಣಿಮೆಯ ಅಂಗವಾಗಿ ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮದಲ್ಲಿ ಬೌದ್ಧಿಸತ್ವ ನವ ಯುವಕ ತರಣ ಸಂಘ ವತಿಯಿಂದ “ಒಂದು ಗಿಡ ಹಚ್ಚಿ, ಒಂದು ಜೀವ ಉಳಿಸಿ” ಎಂಬ ಘೋಷಣೆಯೊಂದಿಗೆ ಬಸ್ ನಿಲ್ದಾಣ ಆವರಣದಲ್ಲಿ ಮಂಗಳವಾರ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ಮುಂದಿನ ಪೀಳಿಗೆಗೆ ಹಸಿರು ಮತ್ತು ಆರೋಗ್ಯಕರ ಪರಿಸರವನ್ನು ಉಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖಂಡರು ತಿಳಿಸಿದರು.
ಇದೆ ವೇಳೆ ಶ್ರೀಧರ್ ವಗ್ಗಿ ಮಾತನಾಡಿ, ‘ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ತಥಾಗತ ಗೌತಮ ಬುದ್ಧರು ಬೋಧಿಸಿದ ಕರುಣೆ, ಅಹಿಂಸೆ ಹಾಗೂ ಪ್ರಕೃತಿ ಸ್ನೇಹಿ ಜೀವನ ಮೌಲ್ಯಗಳನ್ನು ಸ್ಮರಿಸಿಕೊಂಡು, ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆ ಮಾಡುವ ಸಂಕಲ್ಪ ಮಾಡಬೇಕು’ ಎಂದು ಅವರು ಕರೆ ನೀಡಿದರು.
‘ವಿಶ್ವ ಪ್ರಕೃತಿ ಸಂರಕ್ಷಣೆ ದಿನದ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು ಪರಿಸರ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮರಗಳ ಸಂರಕ್ಷಣೆಯಿಂದಲೇ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟು ಅವುಗಳನ್ನು ಪೋಷಿಸಬೇಕು’ ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಅ.5ರಿಂದ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ
ಕಾರ್ಯಕ್ರಮದಲ್ಲಿ ಬಕ್ಕಪ್ಪ, ಶಾರದಾ, ಘಳಪ್ಪ ಮೇತ್ರಿ, ಮಲ್ಲೇಶ್ ಟಿ. ವಗ್ಗಿ, ಬಕ್ಕಪ್ಪ ಬನಳ್ಳಿ, ಶರಣಪ್ಪ ಮೇತ್ರಿ, ಜಗಪ್ಪ ವಗ್ಗಿ ಹಾಗೂ ತುಳಜಪ್ಪ ಕಟ್ಟಿಮನಿ ಸೇರಿದಂತೆ ಹಲವರು ಭಾಗವಹಿಸಿ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಕೈಗೊಂಡರು.





