ನಗರದಲ್ಲಿ ಅಂಗಡಿ ನಾಮಫಲಕಗಳ ಕುರಿತು ಸರಿಯಾದ ಕಾರ್ಯವಿಧಾನ ಮತ್ತು ಮಾರ್ಗ ಸೂಚಿಗಳನ್ನು ನಾಗರಿಕರಿಗೆ ಅರಿವು ಮೂಡಿಸುವ ಮೂಲಕ ಕೆಜಿಎಫ್ ನಗರದಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡಬೇಕೆಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷ ಎಲ್ ಬಾಬು ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕೆಜಿಎಫ್ ನಗರ ಸಭೆಯ ಪೌರಾಯುಕ್ತರು ಅಂಗಡಿ ಮಾಲೀಕರಿಗೆ ಪೂರ್ವ ಮಾಹಿತಿ ಮತ್ತು ಸರಿಯಾದ ಸೂಚನೆ ನೀಡದೆ. ಖಾಲಿ ವಿಧಾನಗಳನ್ನು ಅನುಸರಿಸಿದೆ ತಮಿಳು ಮತ್ತು ಕನ್ನಡಿಗರ ಮದ್ಯೆ ಸೌಹಾರ್ದತೆಯನ್ನು ಕೆಡವಿದ್ದಾರೆ.
ಕೆ.ಜಿ.ಎಫ್. ನಗರದಲ್ಲಿ ಬಹುಸಂಖ್ಯಾತರಾಗಿ ವಾಸಿಸುತ್ತಿರುವವರು ತಮಿಳರು. 1982ನೇ ವರ್ಷದಲ್ಲಿ ಸುಮಾರು 100 ತಮಿಳು ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಪ್ರಸ್ತುತ ಒಂದು ತಮಿಳು ಶಾಲೆಯೂ ಕಾರ್ಯನಿರ್ವಹಿಸುತ್ತಿಲ್ಲ.
ಇಲ್ಲಿನ ತಮಿಳರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಲಿಸುತ್ತಿದ್ದಾರೆ. ಕನ್ನಡ ಭಾಷೆಯನ್ನು ಕಲಿಯುವುದು, ಮಾತನಾಡುವುದು ಹಾಗೂ ಬೋಧಿಸುವ ಕಾರ್ಯಗಳಲ್ಲಿಯೂ ತಮಿಳರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಕೆ.ಜಿ.ಎಫ್. ನಗರದಲ್ಲಿ ಭಾಷಾ ಆಧಾರಿತ ಯಾವುದೇ ಸಮಸ್ಯೆ ಸಾರ್ವಜನಿಕರ ಮಧ್ಯೆ ಇಲ್ಲ. ಕನ್ನಡಿಗರು ಮತ್ತು ತಮಿಳರು ದೀರ್ಘಕಾಲದಿಂದ ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ಕೆಲವರು ತಮ್ಮ ಸ್ವಾರ್ಥಪರ ಉದ್ದೇಶಗಳಿಗಾಗಿ ಭಾಷಾ ಭಾವನೆಗಳನ್ನು ಕೆರಳಿಸಿ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ.
ಇದಲ್ಲದೆ, ಕೆ.ಜಿ.ಎಫ್. ನಗರದ ಅನೇಕ ಅಂಗಡಿಗಳು ಮತ್ತು ಸಂಸ್ಥೆಗಳ ಹೆಸರು ಫಲಕಗಳಲ್ಲಿ ತಮಿಳು ಭಾಷೆ ಕಾಣಿಸದಿರುವ ಸ್ಥಿತಿಗೆ ಆ ಸಂಸ್ಥೆಗಳ ಮಾಲೀಕರೇ ಕಾರಣರಾಗಿದ್ದಾರೆ.
ಈ ಸಂದರ್ಭದಲ್ಲಿ, ನಗರಸಭೆ ಆಯುಕ್ತರಾದ ಶ್ರೀ ಶ್ರೀಧರ್ ಅವರು ಸೂಕ್ತ ಪೂರ್ವ ಸೂಚನೆ ಅಥವಾ ಕಾನೂನುಬದ್ಧ ನೋಟಿಸ್ ನೀಡದೆ ಹೆಸರು ಫಲಕಗಳನ್ನು ತೆರವುಗೊಳಿಸುವ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ..? ಕೋಲಾರ | ಕೃಷಿ ಹೊಂಡಗಳಿಗೆ ತಂತಿ ಬೇಲಿ ಅಳವಡಿಕೆ ಕಡ್ಡಾಯ ಅಭಿಯಾನ : ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಮಂಜುಳಾ
ಇಂತಹ ಕ್ರಮಗಳು ಸಾರ್ವಜನಿಕರಲ್ಲಿ ಅಸಮಾಧಾನ ಮತ್ತು ಅನಗತ್ಯ ಉದ್ವಿಗ್ನತೆಯನ್ನು ಉಂಟುಮಾಡುವ ಅಪಾಯವಿದೆ. ವಿಶೇಷವಾಗಿ ಕನ್ನಡಿಗರು ಮತ್ತು ತಮಿಳರ ನಡುವಿನ ಸೌಹಾರ್ದ ಸಂಬಂಧಗಳಿಗೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದುದರಿಂದ, ಕೆ.ಜಿ.ಎಫ್. ಪ್ರದೇಶದ ಸಾಮಾಜಿಕ ಸೌಹಾರ್ದತೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ಎಲ್ ಬಾಬು ಒತ್ತಾಯಿಸಿದ್ದಾರೆ.




