ಕೋಚಿಮುಲ್ ಕಾಂಗ್ರೆಸ್ ಸರ್ಕಾರದ ಕೃಪಾ ಪೋಷಿತ ನಾಟಕ ಮಂಡಳಿಯಂತೆ ವರ್ತಿಸುತ್ತಿದೆ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಕೆ ವಿ ನಾಗರಾಜು ನೇತೃತ್ವದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ನಿಯೋಗ ಆರೋಪಿಸಿದೆ.
ನಗರದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನು ಭೇಟಿ ಮಾಡಿದ ನಿಯೋಗವು, ಕೋಚಿಮುಲ್ ಆಡಳಿತ ಮಂಡಳಿಗೆ ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದರೂ ಚುನಾವಣೆ ನಡೆಸುತ್ತಿಲ್ಲ. ಕೋಚಿಮುಲ್ ಆಡಳಿತ ಮಂಡಳಿಗೆ ಕೂಡಲೇ ಚುನಾವಣೆ ನಡೆಸುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಕೋಚಿಮುಲ್ ಆಡಳಿತ ಮಂಡಳಿಯ ಅಧಿಕಾರ ಅವಧಿಯು ಕಳೆದ ಮೇ 12 ಕ್ಕೆ ಮುಕ್ತಾಯವಾಗಿದೆ. ಆಡಳಿತ ಮಂಡಳಿಯಲ್ಲಿ ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಅಧಿಕಾರವಿಲ್ಲ. ಈ ಬಗ್ಗೆ ಸರ್ಕಾರವು ಸ್ಪಷ್ಟ ಆದೇಶವನ್ನು ಹೊರಡಿಸಿದೆ. ಹೀಗಿದ್ದರೂ ವಿಶೇಷ ಸಾಮಾನ್ಯ ಸಭೆ ಸೇರಿದಂತೆ ಹಣಕಾಸಿನ ವ್ಯವಹಾರಗಳನ್ನು ನಡೆಸಿದ್ದಾರೆ ಎಂದು ದೂರಿದರು.
ಈ ಹಿಂದೆ ರಿಟರ್ನಿಂಗ್ ಅಧಿಕಾರಿಯಿಂದ ಕರಡು ಮತದಾರರ ಪಟ್ಟಿ ಪ್ರಕಟ ಮಾಡಲಾಗಿತ್ತು. ಆನಂತರ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿ ಮಾ.೨೧ಕ್ಕೆ ಸ್ಥಗಿತಗೊಂಡಿದೆ. ಸ್ಥಗಿತಗೊಂಡ ಹಂತದಿಂದಲೇ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಸೂಚಿಸಿದ್ದರು. ಇದುವರೆಗೂ ಚುನಾವಣೆಗೆ ಸಂಬಂಧಿಸಿದ ಸಣ್ಣ ಪ್ರಯತ್ನವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಲ್ಲ ಎಂದರು.
ಕೋರ್ಟ್ ಆದೇಶದಂತೆ ಚಿತ್ರದುರ್ಗದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆದಿದೆ. ಕೋಚಿಮುಲ್ ಆಡಳಿತ ಮಂಡಳಿಗೆ ಯಾಕೆ ಚುನಾವಣೆ ನಡೆಸಲಿಲ್ಲ. ಜಿಲ್ಲೆಯಲ್ಲಿ ಹೈನುಗಾರಿಕೆಯಿಂದ ಜೀವನ ನಡೆಸುವ ರೈತರನ್ನು ಬೀದಿಗೆ ತರಲಾಗುತ್ತಿದೆ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನಿಯಪ್ಪ ಮಾತನಾಡಿ, ಬಾಗೇಪಲ್ಲಿಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಒಕ್ಕೂಟವನ್ನು ಪ್ರತ್ಯೇಕ ಮಾಡಲು ಅಂಗೀಕಾರವಾಗಿದೆ. ಕೂಡಲೇ ಆಡಳಿತ ಮಂಡಳಿಯನ್ನು ವಜಾ ಮಾಡಿ ಹೈಕೋರ್ಟ್ ಆದೇಶವನ್ನು ಜಾರಿ ಮಾಡಬೇಕು. ಇಲ್ಲದಿದ್ದಲ್ಲಿ ಸಂಸದರು, ಶಾಸಕರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಸಂಬಂಧಿಸಿದವರ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಜರಿದ್ದರು.