ಕೋವಿಡ್ ಸಂಬಂಧಿತ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅದರಂತೆ ಕೊಡಗು ಜಿಲ್ಲೆಯಲ್ಲೂ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿ, ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಸಜ್ಜುಗೊಳಿಸಿದೆ.
ಕಳೆದ ಕೆಲವು ವಾರಗಳಿಂದ ದೇಶದ ಕೆಲವೆಡೆ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಆರಂಭಿಸಿದೆ. ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ರೋಗಿಗಳಿಗಾಗಿ ಪ್ರತ್ಯೇಕ ಐಸೊಲೇಷನ್ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು 50 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಲಾಗಿದ್ದು, ಅವುಗಳಲ್ಲಿ 20 ಹಾಸಿಗೆಗಳು ಮಹಿಳೆಯರಿಗೆ, 20 ಹಾಸಿಗೆಗಳು ಪುರುಷರಿಗೆ ಹಾಗೂ ಉಳಿದವುಗಳನ್ನು ತುರ್ತು ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ವೈದ್ಯಕೀಯ ಸಿಬ್ಬಂದಿಯೂ ಸಂಪೂರ್ಣವಾಗಿ ಸನ್ನದ್ಧರಾಗಿದ್ದಾರೆ. ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಜೊತೆಗೆ, ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ಪಿಪಿಇ ಕಿಟ್‌ಗಳು, ಎನ್-95 ಮಾಸ್ಕ್‌ಗಳು, ಔಷಧಿಗಳು ಮತ್ತು ಸ್ಯಾನಿಟೈಸರ್ ಸೇರಿದಂತೆ ಕೋವಿಡ್ ಚಿಕಿತ್ಸೆಗೆ ಬೇಕಾಗುವ ಎಲ್ಲಾ ವೈದ್ಯಕೀಯ ಸಾಮಗ್ರಿಗಳನ್ನು ಈಗಾಗಲೇ ಸಂಗ್ರಹಿಸಿಡಲಾಗಿದೆ. ವೈದ್ಯರ ಪ್ರಕಾರ, ಸದ್ಯ ಜಿಲ್ಲೆಯಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನರು ಯಾವುದೇ ರೀತಿಯ ಆತಂಕ ಅಥವಾ ಭಯಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆದರೆ ಜ್ವರ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಸೇರಿದಂತೆ ಕೋವಿಡ್ ಲಕ್ಷಣಗಳು ಕಂಡುಬಂದರೆ, ನಿರ್ಲಕ್ಷ್ಯ ಮಾಡದೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ವೈರಲ್ ಫೀವರ್‌ನೊಂದಿಗೆ ಬರುವ ರೋಗಿಗಳಿಗೂ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಕೋವಿಡ್ ಶಂಕಿತ ಲಕ್ಷಣಗಳು ಕಂಡುಬಂದರೆ ತಕ್ಷಣ ಕೋವಿಡ್ ಪರೀಕ್ಷೆ ಮಾಡಿ, ಅಗತ್ಯವಿದ್ದರೆ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.





