ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಮಾನಹಾನಿಕರ ‘ಡೀಪ್‌ಫೇಕ್’ (Deepfake) ಕಂಟೆಂಟ್‌ಗಳನ್ನು ಹರಡಿರುವ ತಂತ್ರಜ್ಞಾನ ದೈತ್ಯ ಕಂಪನಿಗಳಾದ ಮೆಟಾ, ಗೂಗಲ್, ಎಕ್ಸ್ (ಟ್ವಿಟರ್) ಹಾಗೂ ಅಪರಿಚಿತ ವ್ಯಕ್ತಿಗಳ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಲು ಬಾಂಬೆ ಹೈಕೋರ್ಟ್ ಇಂದು ಅನುಮತಿ ನೀಡಿದೆ.
ಕೇಂದ್ರ ಸರ್ಕಾರದ ಇ20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದಿಂದ ಗಡ್ಕರಿ ಹಾಗೂ ಅವರ ಕುಟುಂಬವು ವೈಯಕ್ತಿಕವಾಗಿ ಆರ್ಥಿಕ ಲಾಭ ಪಡೆದಿದೆ ಎಂದು ಬಿಂಬಿಸುವ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಹಾಗೂ ತಿರುಚಲಾದ ವಿಡಿಯೊಗಳಿಗೆ ಸಂಬಂಧಿಸಿದಂತೆ ಈ ದಾವೆ ಹೂಡಲಾಗಿದೆ. ಗಡ್ಕರಿ ಸಲ್ಲಿಸಿರುವ ಅರ್ಜಿಯ ಪ್ರಕಾರ, ಈ ವಿಡಿಯೊಗಳು ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಹಾಗೂ ಮಾನಹಾನಿಕರವಾಗಿದ್ದು, ಸಚಿವರ ಸಾರ್ವಜನಿಕ ವರ್ಚಸ್ಸು ಹಾಗೂ ಘನತೆಗೆ ತೀವ್ರ ಧಕ್ಕೆ ಉಂಟುಮಾಡಿವೆ.
ಕಾನೂನುಬಾಹಿರ ಕಂಟೆಂಟ್‌ಗಳನ್ನು ಸೃಷ್ಟಿಸುವ ಅಥವಾ ಆನ್‌ಲೈನ್‌ನಲ್ಲಿ ಹರಡುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡುವ ‘ಜಾನ್ ಡೋ’ (John Doe) ನಿಯಮದಡಿ (ನ್ಯಾಯಾಲಯವು ಹೆಸರು/ಗುರುತು ಇನ್ನೂ ತಿಳಿದಿಲ್ಲದ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧವೂ ತಾತ್ಕಾಲಿಕವಾಗಿ ಆದೇಶ ನೀಡಬಹುದು. ಭಾರತದಲ್ಲಿ ಇದನ್ನು ವಿಶೇಷವಾಗಿ ಕಾಪಿರೈಟ್ ಉಲ್ಲಂಘನೆ ಮತ್ತು ಆನ್‌ಲೈನ್ ಪೈರಸಿ ಪ್ರಕರಣಗಳಲ್ಲಿ ಬಳಸಲಾಗುತ್ತದೆ) ಹಾಗೂ ಸಾಮಾಜಿಕ ಜಾಲತಾಣ ಕಂಪನಿಗಳ ವಿರುದ್ಧ ದಾವೆ ಮುಂದುವರಿಸಲು ಹೈಕೋರ್ಟ್ ಗಡ್ಕರಿ ಅವರಿಗೆ ಅನುಮತಿ ನೀಡಿದೆ.
ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಣ ಯೋಜನೆಯ ಕುರಿತು ತಪ್ಪು ಮಾಹಿತಿಗಳನ್ನು ಹರಡುವ ಎಐ ರಚಿತ ವಿಡಿಯೊಗಳು, ತಿರುಚಲಾದ ದೃಶ್ಯಗಳು ಮತ್ತು ದಾರಿತಪ್ಪಿಸುವ ಪೋಸ್ಟ್‌ಗಳನ್ನು ಡಿಜಿಟಲ್ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ವಾಸ್ತವವಾಗಿ ಈ ಯೋಜನೆಗೂ, ತಮ್ಮ ವೈಯಕ್ತಿಕ ಅಥವಾ ಕುಟುಂಬದ ಹಿತಾಸಕ್ತಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಈ ನೀತಿಯಿಂದ ಆರ್ಥಿಕ ಲಾಭವಾಗಿದೆ ಎಂದು ಸುಳ್ಳು ಕಂಟೆಂಟ್‌ಗಳ ಮೂಲಕ ಬಿಂಬಿಸಲಾಗಿದೆ ಎಂದು ಗಡ್ಕರಿ ವಾದಿಸಿದ್ದಾರೆ.
ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾದ ಡೀಪ್‌ಫೇಕ್ ವಿಡಿಯೊಗಳ ವಿರುದ್ಧ ಕೇಂದ್ರ ಸಚಿವರೊಬ್ಬರು ಹೂಡಿರುವ ಅತಿ ದೊಡ್ಡ ಹಾಗೂ ಉನ್ನತ ಮಟ್ಟದ ಕಾನೂನು ಹೋರಾಟ ಇದಾಗಿದೆ. ಕೃತಕ ಬುದ್ಧಿಮತ್ತೆಯ ಮೂಲಕ ರಚಿಸಲಾದ ತಿರುಚಿದ ಕಂಟೆಂಟ್‌ಗಳನ್ನು ಪತ್ತೆಹಚ್ಚುವ, ತೆಗೆದುಹಾಕುವ ಹಾಗೂ ಹರಡುವುದನ್ನು ತಡೆಯುವ ವಿಚಾರದಲ್ಲಿ ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆ ಬಗ್ಗೆ ಈ ಪ್ರಕರಣವು ವ್ಯಾಪಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.





