ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ತನ್ವೀರ್ ಸೇಠ್ ಅವರಿಗೆ ಸಂಪುಟ ದರ್ಜೆಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಂತಹ ಪ್ರಮುಖ ಜವಾಬ್ದಾರಿ ನೀಡಬೇಕು ಎಂದು ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ತನ್ವೀರ್ ಸೇಠ್ ಅವರು ನರಸಿಂಹರಾಜ ಕ್ಷೇತ್ರದಿಂದ ಹಲವು ಬಾರಿ ಆಯ್ಕೆಯಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸಿರುವ ಅವರು ಈ ಹಿಂದೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪಕ್ಷದ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರಗಳಲ್ಲಿ ಅಪಾರ ಅನುಭವ ಹೊಂದಿರುವ ತನ್ವೀರ್ ಸೇಠ್ ಅವರಿಗೆ ಅವರ ರಾಜಕೀಯ ಅನುಭವಕ್ಕೆ ತಕ್ಕಂತಹ ಸೂಕ್ತ ಜವಾಬ್ದಾರಿ ನೀಡಬೇಕು. ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ವಿವಿಧ ಸಮುದಾಯಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಅವರ ಅನುಭವವನ್ನು ಪಕ್ಷದ ಸಂಘಟನೆ ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಶಬ್ಬೀರ್ ಅಹ್ಮದ್ ತಿಳಿಸಿದ್ದಾರೆ.
ಇತ್ತೀಚೆಗೆ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ, ಅವರ ಅನುಭವಕ್ಕೆ ಸೂಕ್ತ ಜವಾಬ್ದಾರಿ ನೀಡಬೇಕು ಎಂಬ ಬೇಡಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಇದನ್ನು ಓದಿದ್ದೀರಾ..?ಕೋಲಾರ | ಟಿ.ಚನ್ನಯ್ಯ ಜನ್ಮ ಶತಮಾನೋತ್ಸವಕ್ಕೆ ಮಹಾನುಭಾವನಿಂದ ಅಡ್ಡಿ: ಎಸ್.ಎನ್. ನಾರಾಯಣಸ್ವಾಮಿ
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾಗಿ ತನ್ವೀರ್ ಸೇಠ್ ಅವರು ಸಲ್ಲಿಸಿರುವ ಸೇವೆ ಮತ್ತು ಹೊಂದಿರುವ ಅನುಭವವನ್ನು ಪರಿಗಣಿಸಿ, ಅವರಿಗೆ ಸಂಪುಟ ದರ್ಜೆಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆ ಸೇರಿದಂತೆ ಸೂಕ್ತ ಜವಾಬ್ದಾರಿ ನೀಡುವ ಬಗ್ಗೆ ಪಕ್ಷದ ನಾಯಕತ್ವ ಗಮನಹರಿಸಬೇಕು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸಿಪಾಯಿಯಾಗಿ ಸೇವೆ ಸಲ್ಲಿಸಿರುವ ತನ್ವೀರ್ ಸೇಠ್ ಅವರ ಅನುಭವ ಮತ್ತು ಸೇವೆಯನ್ನು ಪಕ್ಷದ ನಾಯಕತ್ವ ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಶಬ್ಬೀರ್ ಅಹ್ಮದ್ ಮನವಿ ಮಾಡಿದ್ದಾರೆ.




