ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ವಿರಾಜಪೇಟೆ, ಸಿದ್ದಾಪುರ ಭಾಗಗಳಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆಯಾಗಿದ್ದು ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರು ಸಾಧಾರಣ ಮಳೆಗೆ ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ರಸ್ತೆ ಗುಂಡಿಗಳಿಂದ ಪಾದಾಚಾರಿಗಳು ವಾಹನ ಸವಾರರು ಪಜೀತಿಗೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಚುರುಕುಗೊಂಡಿದ್ದು, 1479 ಕ್ಯೂಸೆಕ್ ನೀರು ಇಂದು ಜಲಾಶಯಕ್ಕೆ ಹರಿದು ಬರಲಿದೆ. ಪ್ರಸ್ತುತ 180 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.
ಜಲಾಶಯದಲ್ಲಿ ಸದ್ಯ 2.7 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಟ್ಟು ನೀರು ಸಂಗ್ರಹ ಸಾಮರ್ಥ್ಯ 8.5 ಟಿಎಂಸಿ ಆಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕಾವೇರಿ ನದಿಯ ನೀರಿನ ಮಟ್ಟವೂ ಏರಿಕೆಯಾಗುತ್ತಿರುವುದರಿಂದ ನೀರಿನ ಸಮಸ್ಯೆ ಬಗೆಹರಿದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಬೆಳಗಾವಿ ನಗರದಲ್ಲಿ ಬುಧವಾರ ರಾತ್ರಿಯಿಂದ ಆರಂಭವಾದ ಮಳೆ ದಿನವಿಡೀ ಸುರಿದಿತ್ತು, ಮಳೆಯಿಂದಾಗಿ 5ಕ್ಕೂ ಹೆಚ್ಚು ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು, ಬೈಲಹೊಂಗಲ, ಮುನವಳ್ಳಿ, ಹುಕ್ಕೇರಿಯಲ್ಲೂ ಉದುರು ಮಳೆಯಾಗಿತ್ತು.
ಶುಕ್ರವಾರವೂ ಅಲ್ಲಲ್ಲಿ ಲಘು ಮಳೆಯಾಗಿದ್ದು, ರೈತರಲ್ಲಿ ಹೊಸ ನಿರೀಕ್ಷೆ ಗರಿಗೆದರಿದೆ. ಮಳೆ ಕೊರತೆಯಿಂದ ಆತಂಕದಲ್ಲಿದ್ದ ರೈತರು ಮುಂದಿನ ಒಂದು ವಾರ ಹೀಗೆಯೇ ಮಳೆ ಮುಂದುವರೆದರೆ ಕೃಷಿ ಚಟುವಟಿಕೆಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.




