ಅನೇಕ ವರ್ಷಗಳಿಂದ ಶಿಥಿಲಗೊಂಡಿದ್ದ ನಗರದ ಬಸ್ ನಿಲ್ದಾಣ ಬಳಿಯ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿಗೆ ಶಾಸಕ ಕೊತ್ತೂರು ಮಂಜುನಾಥ್ ಮತ್ತಿತರರು ಭಾನುವಾರ ಗುದ್ದಲಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೊತ್ತೂರು ಜಿ.ಮಂಜುನಾಥ್, ಪುರಾಣ ಪ್ರಸಿದ್ಧ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯವು ಕಳೆದ ೩೫ ವರ್ಷಗಳಿಂದ ಶಿಥಿಲಗೊಂಡಿದ್ದು, ಯಾವುದೇ ಜಾತಿ, ಮತ ಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಒಂದೂವರೆ ವರ್ಷದಲ್ಲಿ ನಿರ್ಮಾಣ ಮಾಡಿ ಭಕ್ತಾಧಿಗಳಿಗೆ ಅರ್ಪಿಸಲು ತೀರ್ಮಾನಿಸಲಾಗಿದೆ.
ಮುಜರಾಯಿ ದೇವಾಲಯವಾಗಿರುವುದರಿಂದ ಸರಕಾರದ ಅನುಮತಿ ಪಡೆದು ಕಾರ್ಯಗಳನ್ನು ಆರಂಭಿಸಲಾಗಿದ್ದು, ಒಂದೂವರೆ ವರ್ಷಗದಲ್ಲಿ ನಿರ್ಮಾಣ ಮಾಡಲು ತೊಡಲಾಗಿದೆ. ದೇವರು ಎಷ್ಟು ಬೇಗ ಈ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ ಎಂದರು.
ದೇವಾಲಯಕ್ಕೆ ಅನುದಾನ ಎಂಬುದು ಇಲ್ಲ. ಯೋಜನೆ ರೂಪಿಸಿದ್ದೇವೆ, ಬದಲಾವಣೆಗಳು ಆಗಲಿವೆ. ದೇವಸ್ಥಾನದ ಜವಾಬ್ದಾರಿಯನ್ನು ಬೇರೆ ಯಾರಿಗೂ ನೀಡುವುದಿಲ್ಲ. ಯಾರು ಬೇಕಾದರೂ ಬಂದು ನೋಡಬಹುದು. ನಾನು ಹಾಗೂ ವೆಂಕಟೇಶ್ ಅವರೇ ಜವಾಬ್ದಾರಿವಹಿಸಿಕೊಳ್ಳುತ್ತಿದ್ದೇವೆ, ದಾನಿಗಳು ಯಾರು ಬೇಕಾದರೂ ಸಹಾಯ ಮಾಡಲು ಖುದ್ದಾಗಿ ನಮ್ಮನ್ನೇ ಸಂಪರ್ಕಿಸಬಹುದಾಗಿದ್ದು, ಒಂದು ವೇಳೆ ದಾನಿಗಳು ನೀಡದಿದ್ದರೂ ನಾವೇ ದೇವಾಲಯ ನಿರ್ಮಿಸಲು ಸಿದ್ಧವಿರುವುದಾಗಿಯೂ ಘೋಷಿಸಿದರು.
ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ, ೩೫ ವರ್ಷಗಳಿಂದ ಶಿಥಿಲಗೊಂಡಿದ್ದ ದೇವಾಲಯವನ್ನು ತೆರವು ಮಾಡಿ, ಎಲ್ಲ ಅಡ್ಡಿ ಆತಂಕ, ತೊಡಕುಗಳನ್ನು ನಿವಾರಿಸಿಕೊಂಡು ಇದೀಗ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದೇವೆ. ದೇವಾಲಯದ ಹೆಸರಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಹಣ ಹೊಡೆಯಲು ಅವಕಾಶ ಸಿಗಬಾರದು ಎನ್ನುವ ನಿಟ್ಟಿನಲ್ಲಿ ಶಾಸಕರು ಹಾಗೂ ವೆಂಕಟೇಶ್ ಅವರಿಗೇ ಎಲ್ಲ ರೀತಿಯ ಜವಾಬ್ದಾರಿಯನ್ನು ಎಲ್ಲರ ನಿರ್ಣಯದಂತೆ ನೀಡಲಾಗಿದೆ ಎಂದರು.
೧ ರೂಪಾಯಿ ನೀಡಿದರೂ ದಾನಿಗಳೇ, ೧ ಕೋಟಿರೂ ನೀಡಿದರೂ ದಾನಿಗಳೇ. ಹೀಗಾಗಿ ಭಕ್ತಾಧಿಗಳು ತಮಗೆ ಅನುಕೂಲವಾದಷ್ಟು ದೇಣಿಗೆಯನ್ನು ದೇವಾಲಯಕ್ಕೆ ನೀಡಬಹುದಾಗಿದ್ದು, ಆಂಜನೇಯಸ್ವಾಮಿಯು ಕೋಲಾರ ನಗರ, ತಾಲೂಕು, ಜಿಲ್ಲೆಗೆ ಒಳಿತನ್ನು ಮಾಡಲಿ ಎಂದು ಆಶಿಸಿದರು.
ಇದೇ ವೇಳೆ ಕೀಲುಕೋಟೆ ಗ್ರಾಮದಿಂದ ೧ ಲಕ್ಷದ ೫ ರೂಗಳ ಚೆಕ್ ವಿತರಿಸಲಾಯಿತು. ಹಿರಿಯ ವಕೀಲ ಕೋದಂಡಪ್ಪ ೧ ಲಕ್ಷರೂ ನಗದು ಸೇರಿದಂತೆ ಅನೇಕ ದಾನಿಗಳು ಪ್ರಥಮ ದಿನದಂದೇ ದೇಣಿಗೆಯನ್ನು ದೇವಾಲಯಕ್ಕೆ ಅರ್ಪಿಸಿದರು.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗುವ ಮೂಲಕ ಮಾಧ್ಯಮ ರಂಗದ ಗೌರವವನ್ನು ಎತ್ತಿಹಿಡಿಯಬೇಕು : ಬಿ.ವಿ. ಗೋಪಿನಾಥ್ – ಈ ದಿನ.ಕಾಮ್
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸತ್ಯನಾರಾಯಣ ಜ್ಯುವೆರ‍್ಸ್ ಮಾಲೀನ ವೆಂಕಟೇಶ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಕಠಾರಿಪಾಳ್ಯ ಗಂಗಣ್ಣ, ಬಾಲು, ಅಮರ್, ಕಾಶಿ, ಜೆ.ಕೆ.ಜಯರಾಂ, ಶ್ರೀಕೃಷ್ಣ, ದಿವಾಕರ್, ನರೇಶ್, ಅಪ್ಸರ್ ಸೇರಿದಂತೆ ಮುಂತಾದವರಿದ್ದರು.




