ಭೀಕರ ಮಳೆಗೆ ಬಹುಮಹಡಿ ಕಟ್ಟಡ ಕುಸಿದು ಆರು ಮಂದಿ ಸಾವನ್ನಪ್ಪಿ, ಒಬ್ಬರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಮುಂಬೈನ ಮನ್ಖುರ್ಡ್ ಪ್ರದೇಶದಲ್ಲಿ ನಡೆದಿದೆ. ಮುಂಬೈ ನಗರ ಮತ್ತು ನೆರೆಯ ಥಾಣೆ, ಪಾಲ್ಘರ್ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ರಸ್ತೆಗಳು ನೀರಿನಿಂದ ತುಂಬಿದ್ದು, ಹಲವು ಕಡೆ ಕಟ್ಟಡಗಳಿಗೆ ಹಾನಿಯಾಗಿದೆ.
ಕಟ್ಟಡ ‘ಚಾಲ್ ಸಂಖ್ಯೆ 5’ ಕುಸಿದಿದ್ದು, ಸದ್ಯ ಅವಶೇಷಗಳ ಅಡಿಯಲ್ಲಿ ಒಬ್ಬ ವ್ಯಕ್ತಿ ಸಿಲುಕಿರುವ ಶಂಕೆಯಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯಾಚರಣೆಯಲ್ಲಿ ತೊಡಗಿದೆ. ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಚುರುಕಾಗಲಿದೆ ಮುಂಗಾರು ಮಳೆ ಅಬ್ಬರ; ಕರ್ನಾಟಕದಲ್ಲಿ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಕಾರ, ನಾಲ್ಕು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಶತಾಬ್ದಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನೊಬ್ಬ ವ್ಯಕ್ತಿಯನ್ನು ರಾಜವಾಡಿ ಆಸ್ಪತ್ರೆಗೆ ಸಾಗಿಸಲಾಗಿತ್ತು, ಎಲ್ಲರೂ ಸಾವನ್ನಪ್ಪಿದ್ದಾರೆ. ಒಬ್ಬ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಮುಂಬೈನಲ್ಲಿ ದಿನವಿಡೀ ಸುರಿದ ಮಳೆಯಿಂದಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನಗಳ ಮಾರ್ಗ ಬದಲಾವಣೆ ಮತ್ತು ಹಾರಾಟ ರದ್ದತಿ ಮಾಡಲಾಗಿದೆ.
ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಬಿಎಂಸಿ ಸೋಮವಾರ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ನಾಗರಿಕ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ.
ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಮುಂಬೈನಾದ್ಯಂತ ಹಲವಾರು ರಸ್ತೆಗಳು ಮುಳುಗಿ, ಸಂಚಾರ ಅಸ್ತವ್ಯಸ್ತವಾಗಿದೆ. ನಗರದ ವಿವಿಧ ಭಾಗಗಳಿಂದ ಮರಗಳು ಬಿದ್ದು ನೀರು ನಿಂತಿದೆ. ಕುರ್ಲಾದಲ್ಲಿ ಅಂಗಡಿಯೊಂದರ ಮೇಲೆ ಮರ ಬಿದ್ದು 63 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಒಂದು ವಾರದ ಹಿಂದೆಯೂ ಮುಂಬೈನಲ್ಲಿ ಮರ ಬಿದ್ದು ಒಬ್ಬರು ಸಾವನ್ನಪ್ಪಿದ್ದರು.
ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಸರಣಿ ಕಟ್ಟಡ ಕುಸಿತ ಉಂಟಾಗಿದೆ. ನವಿ ಮುಂಬೈನ ವಾಶಿ ಸೆಕ್ಟರ್ 11 ರಲ್ಲಿ, ರಾಮ್ ನಿವಾಸ್ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯಿಂದ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಇನ್ನು ಭಿವಂಡಿಯಲ್ಲಿ ಕಮ್ವರಿ ನದಿ ತುಂಬಿ ಪ್ರವಾಹ ಉಂಟಾಗಿದ್ದು, 17 ವರ್ಷದ ಬಾಲಕ ಮುಳುಗಿ ಸಾವನ್ನಪ್ಪಿದ್ದಾನೆ. ಥಾಣೆ ನಗರದ ದಿವಾ ಪ್ರದೇಶದಲ್ಲಿ, ಎರಡು ಅಂತಸ್ತಿನ ಕಟ್ಟಡದಲ್ಲಿ ಕಾಂಕ್ರೀಟ್ ಮೆಟ್ಟಿಲು ಸ್ಲ್ಯಾಬ್ ಕುಸಿದಿದ್ದು, ಐವರನ್ನು ರಕ್ಷಿಸಲಾಗಿದೆ.




