ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿದಂತೆ ದೇಶಾದ್ಯಂತ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ವಿಶೇಷವಾದ ಕಠಿಣ ಕಾನೂನು ರೂಪಿಸಬೇಕೆಂದು ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.
ತಮ್ಮ ತೋಟದಲ್ಲಿ ಕೃಷಿ ಮಹಿಳೆಯೊಂದಿಗೆ ಮಾತನಾಡಿದ ಅವರು, ನೀಟ್, ಜೆಇಇ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 10 ಕೋಟಿ ದಂಡದಂತಹ ಕಾನೂನು ಜಾರಿಗೊಳಿಸಿರುವುದು ಸ್ವಾಗತಾರ್ಹ. ಆದರೆ ಈ ಕಾನೂನು ಪರಿಣಾಮಕಾರಿಯಾಗಿ ಹಾಗೂ ಶಾಶ್ವತವಾಗಿ ಜಾರಿಯಾದಾಗ ಮಾತ್ರ ಅದರ ಉದ್ದೇಶ ಸಾರ್ಥಕವಾಗಲಿದೆ ಎಂದರು.
ದೇಶದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ, ಕೆಲವೊಮ್ಮೆ ಮಿಗಿಲಾಗಿ ಸಾಧನೆ ಮಾಡುತ್ತಿದ್ದರೂ, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಮತ್ತು ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಎರಡು ವರ್ಷದ ಬಾಲಕಿಯಿಂದ 80 ವರ್ಷದ ವೃದ್ಧೆಯರವರೆಗೆ ಮಹಿಳೆಯರ ಮೇಲೆ ನಡೆಯುವ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಯುವಕರ ಭವಿಷ್ಯವನ್ನು ರಕ್ಷಿಸಲು ಪರೀಕ್ಷಾ ಅಕ್ರಮಗಳ ವಿರುದ್ಧ ಕಾನೂನು ಜಾರಿಯಾದಂತೆ, ಹೆಣ್ಣುಮಕ್ಕಳ ಸುರಕ್ಷತೆಗೂ ಸಮಾನ ಆದ್ಯತೆ ನೀಡಿ ಪರಿಣಾಮಕಾರಿ ಕಾನೂನು ಜಾರಿಗೊಳಿಸುವ ಮೂಲಕ ದೇಶದ ಭವಿಷ್ಯವನ್ನು ಕಾಪಾಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಕುಂಠಿತ; ತೀವ್ರ ಬರದ ಛಾಯೆ:ರೈತರಲ್ಲಿ ಆತಂಕ
ಈ ಸಂದರ್ಭದಲ್ಲಿ ಐತಾಂಡಹಳ್ಳಿ ಶೈಲಜ, ರತ್ನಮ್ಮ, ಗೌರಮ್ಮ, ಗೀತಾ, ಶಾಂತಮ್ಮ, ಸುನಿತಾ, ಚೌಡಮ್ಮ, ಶೋಭಾ, ಪವಿತ್ರಾ, ಸವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.





