ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎನ್ನುವ ಕಾರಣಕ್ಕೆ ಸರ್ಕಾರ ಅಂಗನವಾಡಿ ಮಕ್ಕಳಿಗೆ ನಿತ್ಯ ಉಪಾಹಾರದೊಂದಿಗೆ ಮೊಟ್ಟೆಯನ್ನು ನೀಡುತ್ತಿದೆ. ಆದರೆ, ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲೂ ವಂಚನೆ ಎಸಗಿರುವ ಆರೋಪ ಕೊಪ್ಪಳ ಜಿಲ್ಲೆಯಲ್ಲಿ ಕೇಳಿಬಂದಿದೆ.
ಅಂಗನವಾಡಿ ಮಕ್ಕಳಿಗೆ ಕೊಡುವ ಮೊಟ್ಟೆಯನ್ನು ವಾಪಸ್ ಕಸಿದುಕೊಂಡು ವಂಚನೆ ಎಸಗುತ್ತಿದ್ದ ಆರೋಪದ ಮೇಲೆ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ, ಸಹಾಯಕಿ ಶೈನಜಾ ಬೇಗಂ ಅವರನ್ನು ಅಮಾನತು ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದ್ದು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಇಬ್ಬರನ್ನೂ ಅಮಾನತುಗೊಳಿಸಿ ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ವಂಚನೆ ನಡೆದಿದ್ದು, ಮಕ್ಕಳಿಗೆ ಮೊಟ್ಟೆ ಕೊಟ್ಟು ಫೋಟೋ ಕ್ಲಿಕ್ಕಿಸಿ, ಮಕ್ಕಳು ಬಾಯಿಗಿಡುವ ಮುನ್ನವೇ ಮೊಟ್ಟೆ ಕಸಿದುಕೊಂಡಿದ್ದಾರೆ. ಈ ಘಟನೆಯ ವೀಡಿಯೋವನ್ನು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಅವರ ‘ವಿಜಯ ಟೈಮ್ಸ್’ ವರದಿ ಮಾಡಿತ್ತು. ಬಳಿಕ ಅದು ವೈರಲಾಗಿತ್ತು.
ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತು ಮಾಡಲಾಗಿದೆ. ಇನ್ನು ಸ್ಥಳೀಯರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.