ಪ್ಯಾಲೇಸ್ತೀನ್‌ನ ಗಾಜಾ ನಗರದಲ್ಲಿ ಪ್ಯಾಲೆಸ್ತೀನಿಯರು ವಸತಿ ಪಡೆದಿದ್ದ ಶಾಲೆಯೊಂದರ ಮೇಲೆ ಇಸ್ರೇಲಿ ಪಡೆ ನಡೆಸಿದ ದಾಳಿಯಲ್ಲಿ ಸುಮಾರು 90ರಿಂದ 100 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದ ಸಿವಿಲ್ ಡಿಫೆನ್ಸ್ ಏಜೆನ್ಸಿ ಹೇಳಿದೆ.
“ಸಾವಿನ ಸಂಖ್ಯೆ ಈಗ 90 ರಿಂದ 100ಕ್ಕೆ ಏರಿಕೆಯಾಗಿದೆ. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿರಾಶ್ರಿತ ಪ್ಯಾಲೆಸ್ತೀನಿಯರು ಶಾಲೆಯಲ್ಲಿ ವಸತಿ ಪಡೆದಿದ್ದರು. ಆ ಶಾಲೆಯ ಮೇಲೆ ಮೂರು ಇಸ್ರೇಲಿ ರಾಕೆಟ್‌ಗಳಿಂದ ದಾಳಿ ಮಾಡಲಾಗಿದೆ. ಹೆಚ್ಚಿನ ಜನರು ಹುತಾತ್ಮರಾಗಿದ್ದಾರೆ” ಎಂದು ಏಜೆನ್ಸಿ ವಕ್ತಾರ ಮಹ್ಮದ್ ಬಾಸ್ಸಲ್ ಹೇಳಿದ್ದಾರೆ.
ಶಾಲೆಯಲ್ಲಿ ಸುಮಾರು 250 ಮಹಿಳೆಯರು ಮತ್ತು ಮಕ್ಕಳು ಇದ್ದರು. ಅವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ದರಾಜ್ ಬಳಿಯ ಅಲ್-ತಬಿನ್ ಶಾಲೆಯಲ್ಲಿ ನಿಯೋಜಿಸಲಾಗಿದ್ದ ‘ಹಮಾಸ್ ಕಮಾಂಡ್’ ಮತ್ತು ‘ಕಂಟ್ರೋಲ್ ಸೆಂಟರ್’ಅನ್ನು ತಮ್ಮ ಸೇನೆಯು ಹೊಡೆದುಹಾಕಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
“ನಿಖರ ಯುದ್ಧಸಾಮಗ್ರಿಗಳ ಬಳಕೆ, ವೈಮಾನಿಕ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿ ಸೇರಿದಂತೆ ನಾಗರಿಕರಿಗೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಇಸ್ರೇಲ್ ಹೇಳಿಕೊಂಡಿದೆ.
2023ರ ಅಕ್ಟೋಬರ್ 7ರಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆಯು ನಿರಂತರವಾಗಿ ದಾಳಿ ಮಾಡುತ್ತಿದೆ. ಇಸ್ರೇಲ್ ದಾಳಿಯಿಂದ ಗಾಜಾದಲ್ಲಿ ಭಾರೀ ವಿನಾಶ ಸಂಭವಿಸಿದೆ. 37,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಅವರಲ್ಲಿ ಸಾವಿರಾರು ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ಇಡೀ ಗಾಜಾ ಪಟ್ಟಿ ನಕರದ ಕೂಪವಾಗಿದೆ.
ಇಸ್ರೇಲ್ ಸೇನೆಯು ಹಲವಾರು ಪ್ಯಾಲೆಸ್ತೀನಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದೆ. ಇನ್ನೂ ಸಾವಿರಾರು ಪ್ಯಾಲೆಸ್ತೀನಿಯರನ್ನು ಸೆರೆ ಹಿಡಿದಿದೆ. ಹೀಗೆ, ಸೆರೆಸಿಕ್ಕು ಬಂಧನಕ್ಕೊಳಗಾಗಿರುವವರ ಮೇಲೂ ಇಸ್ರೇಲ್ ಪಡೆ ಅತ್ಯಾಚಾರ ಎಸಗುತ್ತಿದೆ. ಇತ್ತೀಚೆಗೆ, ಹಮಾಸ್‌ನ 48 ವರ್ಷದ ವ್ಯಕ್ತಿ ಅರಬ್ ಎಂಬವರನ್ನು ಕುಖ್ಯಾತ Sde Teiman (ಸ್ಡೆ ಟೀಮನ್) ಜೈಲಿನಲ್ಲಿರಿಸಲಾಗಿತ್ತು. ಅಲ್ಲಿ, ಆತನ ಮೇಲೆ ಇಸ್ರೇಲಿ ಸೈನಿಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಒಂಬತ್ತು ಮಂದಿ ಇಸ್ರೇಲಿ ಸೈನಿಕರನ್ನು ಬಂಧಿಸಲಾಗಿದೆ.
‘ಸ್ಡೆ ಟೀಮನ್’ನಲ್ಲಿ ಬಂಧಿಸಲಾಗಿರುವ ಪ್ಯಾಲೆಸ್ತೀನಿ ಬಂಧಿತರ ಮೇಲೆ ಇಸ್ರೇಲಿ ಸೈನಿಕರು ಲೋಹದ ರಾಡ್‌ಗಳು ಮತ್ತು ಅಗ್ನಿಶಾಮಕ ಉಪಕರಣಗಳನ್ನು ಬಳಸಿ ಕ್ರೌರ್ಯ ಎಸಗುತ್ತಿದ್ದಾರೆ. ಅವರ ಗುದನಾಳಗಳಿಗೆ ರಾಡ್‌ಗಳನ್ನು ಹಾಕಿ ಹಿಂಸಿಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ, ಯುದ್ಧ ಆರಂಭವಾದ ಸಮಯದಲ್ಲಿ ತೆರೆಯಲಾದ ಆ ಜೈಲನ್ನು ಮುಚ್ಚುವಂತೆ ಒತ್ತಡಗಳು ಇವೆ. ಹೀಗಾಗಿಯೇ, ಜುಲೈ 15ರಂದು ಜೈಲನ್ನು ಮುಚ್ಚುವಂತೆ ಆದೇಶಿಸಿದ್ದ ಇಸ್ರೇಲಿ ಹೈಕೋರ್ಟ್, ‘ಕಾನೂನುಬಾಹಿರ ಹೋರಾಟಗಾರರ ಬಂಧನವನ್ನು ನಿಯಂತ್ರಿಸಲು ಕಾನೂನಿನಲ್ಲಿ ಸೂಚಿಸಲಾದ ಷರತ್ತುಗಳಿಗೆ ಅನುಗುಣವಾಗಿ Sde Teiman ಜೈಲಿನಲ್ಲಿ ಯಾಕೆ ಸೌಲಭ್ಯಗಳನ್ನು ಒದಗಿಸಲಾಗಿಲ್ಲ ಮತ್ತು ನಿರ್ವಹಿಸಲಾಗುತ್ತಿಲ್ಲ’ ಎಂದು ಪ್ರಶ್ನಿಸಿದೆ.
ಆದಾಗ್ಯೂ, ಜೈಲನ್ನು ಇನ್ನೂ ಮುಚ್ಚಲಾಗಿಲ್ಲ. ಇಂತಹ ಸಮಯದಲ್ಲಿ ಬಂಧಿತ ಪ್ಯಾಲೆಸ್ತೀನಿ ಹೋರಾಟಗಾರನ ಮೇಲೆ ಸೈನಿಕರು ಅತ್ಯಾಚಾರ ಎಸಗಿದ್ದಾರೆ. ಅದನ್ನು ಸಮರ್ಥಿಸಿಕೊಂಡು ಈಗ ತಮ್ಮದೇ ಸರ್ಕಾರದ ವಿರುದ್ಧ ಬಲಪಂಥೀಯ ಯಹೂದಿಗಳು ಗಲಭೆ ಎಬ್ಬಿಸಿದ್ದಾರೆ.