ಕನ್ನಡ ಕಲಿಕೆ | ವಿದ್ಯಾರ್ಥಿಗಳಿಗಿಂತ ಅಧ್ಯಾಪಕ ಹೆಚ್ಚು ಕೆಲಸ ಮಾಡಬೇಕಾಗುತ್ತದೆ: ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ

Date:

ಬೇರೆ ಬೇರೆ ಕಾರಣಕ್ಕೆ ಕನ್ನಡೇತರರು ಕರ್ನಾಟಕಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕನ್ನಡ ಸಾಹಿತ್ಯ, ಭಾಷೆ ಮತ್ತು ಕರ್ನಾಟಕ ಸಂಸ್ಕೃತಿಯ ಬಗೆಗೂ ದೇಶವಿದೇಶಗಳಲ್ಲಿ ಆಸಕ್ತಿ ಹೆಚ್ಚುತ್ತಿದೆ. ಅಮೆರಿಕಾ ಮತ್ತು ಯುರೋಪಿನ ವಿದ್ವಾಂಸರು ಹಳಗನ್ನಡ ನಡುಗನ್ನಡ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಲು ಆಸಕ್ತಿ ತೋರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರಿಗೆಲ್ಲ ಸಂಕ್ಷಿಪ್ತ ಅವಧಿಯಲ್ಲಿ ಕನ್ನಡ ಕಲಿಸಲು ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ಕನ್ನಡಿಗರ ಕರ್ತವ್ಯ. ಆದರೆ ಕಾರಣಾಂತರಗಳಿಂದ ಈ ವಿಷಯದಲ್ಲಿ ಕರ್ನಾಟಕ ಹಿಂದೆ ಬಿದ್ದಿದೆ. ಬೆಂಗಳೂರು ಸಿಲಿಕಾನ್‌ ವ್ಯಾಲಿಯಾಗಿ ಬೆಳೆದಿದ್ದರೂ ಕನ್ನಡ ಕಲಿಕೆಗೆ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಮಗಿನ್ನೂ ಸಾಧ್ಯವಾಗಿಲ್ಲ. ಕನ್ನಡ ಕಲಿಸುವ ನಮ್ಮ ಪಠ್ಯ ಪುಸ್ತಕಗಳು ಇನ್ನೂ ಉತ್ತಮವಾಗಬೇಕಾಗಿವೆ.

ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆಯವರು ಮೈಸೂರಿನಲ್ಲಿ ನಡೆಸಿದ ಕನ್ನಡ ಕಲಿಕೆಯ ಪ್ರಯೋಗವೊಂದು ಈಗಾಗಲೇ ಹಲವರ ಗಮನ ಸೆಳೆದಿದೆ. ನವದೆಹಲಿಯ ಅಮೆರಿಕನ್‌ ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಸ್ಟಡೀಸ್‌ ಮೂಲಕ ಕನ್ನಡ ಕಲಿಯಲು ಆಗಮಿಸಿದ ಜರ್ಮನಿಯ ಮತ್ತು ಅಮೇರಿಕಾದ ಇಬ್ಬರು ವಿದ್ಯಾರ್ಥಿನಿಯರಿಗೆ ಅವರು ಎರಡು ತಿಂಗಳಲ್ಲಿ ಕನ್ನಡ ಮಾತಾಡಲು ಮತ್ತು ಓದಲು ಕಲಿಸಿದ್ದಾರೆ.

ಈ ಕುರಿತು ಈದಿನ.ಕಾಮ್ ಜೊತೆ ತಮ್ಮ ಅನುಬವಗಳನ್ನು ಹಂಚಿಕೊಂಡ ಬಿಳಿಮಲೆ, “ಈ ವಿದ್ಯಾರ್ಥಿಗಳು ಯಾಕೆ ಕನ್ನಡ ಕಲಿಯ ಬಯಸಿದ್ದಾರೆ? ಎಂಬುದನ್ನು ಅವರು ಇಲ್ಲಿಗೆ ಬರುವ ಒಂದು ತಿಂಗಳ ಮೊದಲೇ ತಿಳಿದುಕೊಂಡಿದ್ದೆ. ಜರ್ಮನಿಯ ಅನ್ನಿ ಕ್ಯಾಥರೀನಾಳು ಯೋಗ ಮತ್ತು ಆಯುರ್ವೇದದ ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಯಿತು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಕಮಲಿನಿಗೆ ಕರ್ನಾಟಕದ ಸಹಕಾರೀ ಚಳುವಳಿ ಮತ್ತು ರೈತ ಹೋರಾಟಗಳ ಬಗ್ಗೆ ಸಂಶೋಧನೆ ನಡೆಸಬೇಕಾಗಿತ್ತು. ಹೀಗಾಗಿ ಇವರಿಬ್ಬರಿಗೂ ಪಠ್ಯಕ್ರಮ ಸಿದ್ಧಪಡಿಸುವಾಗ ಅವರ ಆಸಕ್ತಿಯ ಕ್ಷೇತ್ರದ ಪದಗಳನ್ನೇ ಪಟ್ಟಿ ಮಾಡಿದೆ” ಎಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಜರ್ಮನಿ ವಿದ್ಯಾರ್ಥಿನಿಗೆ ಪಾಠಮಾಡುವಾಗ ವ್ಯಾಕರಣದ ಜೊತೆಗೆ, ದೇಹ, ಮನಸ್ಸು. ಯೋಗ. ಚೈತನ್ಯ, ಆರೋಗ್ಯ, ಗುರು, ಪತಂಜಲಿ, ಸೂತ್ರ ಮೊದಲಾದ ಪದಗಳನ್ನು ಬಳಸಿದರೆ, ಕಮಲಿನಿಗೆ ರೈತ, ಚಳುವಳಿ, ಸಹಕಾರ, ಬೆಲೆ, ಮಾರುಕಟ್ಟೆ, ರೈತ ಸಂಘ, ಇತ್ಯಾದಿ ಪದಗಳನ್ನು ಪರಿಚಯಿಸಿದೆ. ಇದರಿಂದ ಅವರಿಬ್ಬರ ಸಂಶೋಧನೆಗೂ ಬಲಬಂತು, ಕನ್ನಡವೂ ಕಲಿತಂತಾಯಿತು. ಈ ಕೆಲಸ ಸಾಧ್ಯಮಾಡಲು ನಾನು ಒಂದು ತಿಂಗಳು ವ್ಯಯಿಸಬೇಕಾಯಿತು. ಸುಮಾರು 260 ಪುಟಗಳ ಕೈಪಿಡಿಯನ್ನು ಸಿದ್ಧಮಾಡಿದ್ದೆ. ಪುಣ್ಯಕೋಟಿಯ ಕತೆಯೂ ಸೇರಿದಂತೆ, ೧೦ ವೀಡಿಯೋಗಳನ್ನು ಡೌನ್‌ ಲೋಡ್‌ ಮಾಡಿಕೊಂಡೆ. ವಿದ್ಯಾರ್ಥಿಗಳಿಗೆ ಆಸಕ್ತಿಗೆ ಪೂರಕವಾಗಿ ವಿದ್ವಾಂಸರಿಂದ ಉಪನ್ಯಾಸಗಳನ್ನೂ ಎರ್ಪಡಿಸಲು ಯೋಜಿಸಿದ್ದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಿಂತ ಅಧ್ಯಾಪಕ ಹೆಚ್ಚು ಕೆಲಸ ಮಾಡಿದಾಗ ಮಾತ್ರ ಇಂಥ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ” ಎಂದರು.

“ಬೆಳಗ್ಗೆ ಒಂಬತ್ತು ಗಂಟೆಯಿಂದ ಮಧ್ಯಾಹ್ನ ಒಂದರವರೆಗೆ ಕನ್ನಡ ಕಲಿಕೆಯು ತರಗತಿಯ ಒಳಗೆ ನಡೆದರೆ, ಊಟದ ಆನಂತರ ವಿದ್ಯಾರ್ಥಿಗಳನ್ನು ಮೈಸೂರು ನಗರದ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ತರಕಾರಿ ಮಾರುಕಟ್ಟೆಗಳು, ಅಂಗಡಿಗಳು, ವಸ್ತು ಪ್ರದರ್ಶನಗಳು, ಮೈಸೂರು ವಿಶ್ವವಿದ್ಯಾಲಯದ ಜಾನಪದ ವಸ್ತು ಸಂಗ್ರಹಾಲಯ, ಅರಮನೆ, ಆರ್ಟ್‌ ಗ್ಯಾಲರಿ, ಪುಸ್ತಕದ ಅಂಗಡಿಗಳು, ಹೋಟೆಲ್‌ ಗಳು, ಚಾಮುಂಡಿ ಬೆಟ್ಟ, ಇತ್ಯಾದಿ ಪ್ರದೇಶಗಳಿಗೆ ಹೋದಾಗ ಅಲ್ಲಿ ಜನರು ಮಾತಾಡುವ ಕನ್ನಡ ಕಿವಿಗೆ ಬೀಳುತ್ತದೆ. ಅನೇಕ ನಾಮಫಲಕಗಳನ್ನು ಓದಲಾಗುತ್ತದೆ. ವಿದ್ಯಾರ್ಥಿಗಳು ಶ್ರವಣಬೆಳಗೊಳಕ್ಕೆ ಹೋಗಿ ಗೋಮಟೇಶ್ವರನ್ನು ನೋಡಿದ್ದಾರೆ, ಚಂದ್ರಗಿರಿ ಬೆಟ್ಟಕ್ಕೆ ಹತ್ತಿ ಕೆಲವು ಶಾಸನಗಳನ್ನು ಓದಿದ್ದಾರೆ. ಮೇಲುಕೋಟೆಗೆ ಹೋಗಿ ಚೆಲುವ ನಾರಾಯಣನನ್ನು ಪ್ರೀತಿಸಿದ ನಾಚಿಯಾರ್‌ ಕತೆಗೆ ಕಿವಿಕೊಟ್ಟಿದ್ದಾರೆ. ಹೀಗೆ ಕನ್ನಡ ಕಲಿಕೆಯು ತರಗತಿಗಳಾಚೆ ಚಾಚಿಕೊಳ್ಳುತ್ತದೆ. ಇಡೀ ಊರೇ ಕನ್ನಡ ಕಲಿಯುವ ತರಗತಿಯಾಗುತ್ತದೆ” ಎಂದು ಅವರು ಹೇಳಿದ್ದಾರೆ.

“ವಿದ್ಯಾರ್ಥಿಗಳು ರಂಗಾಯಣದಲ್ಲಿ ಎರಡು ನಾಟಕಗಳನ್ನೂ, ಜಾನಪದ ಉತ್ಸವವನ್ನೂ ನೋಡಿ, ತಮ್ಮ ಅನುಭವಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಕುರಿತು ಈದಿನ. ಕಾಂ ಜೊತೆ ಮಾತಾಡಿದ ಕಮಲಿನಿ ಮತ್ತು ಅನ್ನಿ ʼ ಕನ್ನಡ ಕಲಿಯಲು ಮೈಸೂರು ಬಹಳ ಒಳ್ಳೆಯ ಸ್ಥಳ. ಇಲ್ಲಿಯ ಸಂಸ್ಕೃತಿ ತುಂಬಾ ಶ್ರೀಮಂತವಾಗಿದೆ. ಇಲ್ಲಿಯ ಜನರ ಕನ್ನಡವನ್ನು ಅರ್ಥಮಾಡಿಕೊಳ್ಳುವುದು ಸುಲಭ. ಜನರೂ ತುಂಬ ಒಳ್ಳೆಯವರು. ಮೈಸೂರಿನ ಊಟ ಮತ್ತು ತಿಂಡಿಗಳು ತುಂಬ ರುಚಿಕರವಾಗಿವೆ” ಎಂದು ತಿಳಿಸಿದ್ದಾರೆ.

ಎರಡು ತಿಂಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಯಲು ತೋರಿಸಿದ ಆಸಕ್ತಿಯ ಬಗ್ಗೆ ಡಾ. ಬಿಳಿಮಲೆಯವರು ತೃಪ್ತಿ ಹೊಂದಿದ್ದಾರೆ. “ಕನ್ನಡ ಕಲಿಕೆಯನ್ನು ಯಾಂತ್ರಿಕವಾಗಿಸಬಾರದು, ಅದನ್ನು ಸ್ಥಳೀಯ ಸಂಸ್ಕೃತಿಯ ಜೊತೆ ಜೋಡಿಸಿ, ಕಲಿಕೆಯನ್ನು ಸಮೃದ್ಧಗೊಳಿಸಬೇಕು. ಪ್ರತಿದಿನವೂ ಪಾಠವನ್ನು ಹೊಸದುಗೊಳಿಸುತ್ತಲೇ ಮುಂದುವರೆಯಬೇಕು” ಎಂಬುದು ಅವರ ಮಾತು.

ಮೈಸೂರಿನಲ್ಲಿ ಯಶಸ್ವಿಯಾದ ಈ ಕನ್ನಡ ಕಲಿಸುವ ಮಾದರಿಯನ್ನು ಅನುಸರಿಸಿ ಕನ್ನಡೇತರರಿಗೆ, ಅದರಲ್ಲೂ ಮುಖ್ಯವಾಗಿ, ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಕನ್ನಡ ಕಲಿಸುವ ಯೋಜನೆಯನ್ನು ಸರಕಾರ ಅಥವಾ ಸರಕಾರದ ಅಂಗ ಸಂಸ್ಥೆಗಳು ಕೈಗೆತ್ತಿಕೊಂಡರೆ, ಅದರಿಂದ ಕನ್ನಡಕ್ಕೆ ಬಹಳ ಲಾಭವಿದೆ. ಜಾಗತೀಕರಣದ ಬೇಡಿಕೆಗಳಿಗೆ ಕನ್ನಡವನ್ನು ಸಜ್ಜುಗೊಳಿಸುವ ಕೆಲಸ ನಡೆಯಬೇಕಾದ್ದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಪ್ರಾಮಾಣಿಕ ಪ್ರಯತ್ನವನ್ನು ಗುರುತಿಸಿದ ಈದಿನ.ಕಾಂ ಗೆ ಮತ್ತು ಲೇಖಕ ಮೋಹನ್ ಅವರಿಗೆ ಕೃತಜ್ಞತೆಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಕೋಮುವಾದದ ಮಾತುಗಳನ್ನಾಡುವ ಪ್ರಧಾನಿ ದೇಶಕ್ಕೆ ಬೇಕೆ?: ಸಚಿವ ಎಂ ಸಿ ಸುಧಾಕರ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು...

ಶಿವಮೊಗ್ಗ | ಕ್ಷೇತ್ರದ ರಕ್ಷಣೆಗೆ, ಅಭಿವೃದ್ಧಿಗೆ ಆದ್ಯತೆ: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕಾರವು ರಾಜಕಾರಣಿಗಳ ಬಳಿಯಿದೆ. ಸಮಸ್ಯೆಗಳು ಸಾಕಷ್ಟಿವೆ. ಆದರೂ, ಕೆಲವು...

ಯಾದಗಿರಿ | ಅಂಗಡಿ, ಸಂತೆ ಪ್ರದೇಶದಲ್ಲಿ ಎಸ್‌ಯುಸಿಐ ಚುನಾವಣಾ ಪ್ರಚಾರ

ಯಾದಗಿರಿಯಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಚುನಾವಣಾ ಪ್ರಚಾರದ ಅಂಗವಾಗಿ ಇಂದು ನಗರದ...