ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಾಲಯದಲ್ಲಿ ಹುಂಡಿಗೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯ ವಿರುದ್ಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಚಲುವನಾರಾಯಣಸ್ವಾಮಿ ದೇವಾಲಯದ ಬಳಿಕ ಯೋಗನರಸಿಂಹಸ್ವಾಮಿ ದೇವಾಲಯದಲ್ಲಿಯೂ ಕಳವು ನಡೆದಿರುವುದು ಬೆಳಕಿಗೆ ಬಂದಿದ್ದು, ವಜ್ರಾಂಗಿ ಆಭರಣ ಕಳ್ಳತನದ ಬೆನ್ನಲ್ಲೇ ಹುಂಡಿಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣ ದೋಚಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಅರ್ಚಕರು, ನೌಕರರು ಹಾಗೂ ಸಿಬ್ಬಂದಿಯ ಮೇಲೆಯೇ ಅನುಮಾನ ವ್ಯಕ್ತವಾಗಿದೆ.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಶೀಲಾ ಅವರು ನೀಡಿದ ದೂರಿನ ಆಧಾರದ ಮೇಲೆ ದೇವಸ್ಥಾನದ ಪಾರುಪತ್ತೆಗಾರ ಶ್ರೀಧರ್, ಅರ್ಚಕ ನಾರಾಯಣ ಭಟ್ಟ, ಪರಿಚಾರಕ ತಿರುವೆಂಗಡಾಚಾರ್ ಹಾಗೂ ಕಾವಲುಗಾರರಾದ ಗಂಗಾಧರ್ ಮತ್ತು ಬಸವರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ವೇಳೆ, ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ಮರೆಮಾಚಿ, ರಾಂಗ್ ಕನೆಕ್ಷನ್ ನೀಡಿ ಡಿವಿಆರ್ ಅನ್ನು ಸುಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ದೇವಾಲಯದಲ್ಲಿ ಅಳವಡಿಸಲಾಗಿದ್ದ ಗುಪ್ತ ಸಿಸಿ ಕ್ಯಾಮೆರಾವನ್ನೂ ಕಳವು ಮಾಡಿರುವ ಆರೋಪ ಕೇಳಿಬಂದಿದೆ.
ಈ ಕಳವು ಪ್ರಕರಣವು 2026ರ ಜನವರಿ 11ರಂದು ನಡೆದಿದ್ದು, ಘಟನೆ ಬಳಿಕ ಸಂಬಂಧಪಟ್ಟವರಿಗೆ ಇಒ ನೋಟಿಸ್ ಜಾರಿಗೊಳಿಸಿದ್ದರು. ಆದರೆ ನೋಟಿಸ್‌ಗೆ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ತಡವಾಗಿ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.
ಈ ವಿಶೇಷ ಸುದ್ದಿ ಓದಿದ್ದೀರಾ?ಕೊಡಗಿನಲ್ಲಿ ಮಳೆ ಕೊರತೆ: ಕಾಫಿ, ಮೆಣಸು ಇಳುವರಿ ಕುಂಠಿತ, ರೈತರಿಗೆ ಆರ್ಥಿಕ ನಷ್ಟ
ದೂರಿನ ಆಧಾರದ ಮೇಲೆ ಇದೀಗ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






