ದೇಶದಲ್ಲಿ ಗೋಹತ್ಯೆ, ಗೋಮಾಂಸ ರಫ್ತು ಹಾಗೂ ಗೋ ರಕ್ಷಣೆಯ ವಿಚಾರವು ಹಲವು ದಶಕಗಳಿಂದ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಚರ್ಚೆಗಳ ಕೇಂದ್ರಬಿಂದುವಾಗಿದೆ. ಸಾಮಾನ್ಯವಾಗಿ ಹಿಂದೂಪರ ಸಂಘಟನೆಗಳು ಹಾಗೂ ಗೋ ರಕ್ಷಣಾ ವೇದಿಕೆಗಳಿಂದ ಕೇಳಿಬರುತ್ತಿದ್ದ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಬೇಡಿಕೆಗೆ ಇದೀಗ ದೇಶದ ಹಲವು ಪ್ರಮುಖ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಸಂಘಟನೆಗಳು ಸಹ ಧ್ವನಿಗೂಡಿಸಿರುವುದು ಹೊಸ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಯಾಗಿ ಗಮನ ಸೆಳೆದಿದೆ.
ಜಮೀಯತ್-ಉಲಮಾಯೆ-ಹಿಂದ್‌ನ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ, ಅಜ್ಮೀರ್ ಷರೀಫ್‌ನ ಸೈಯದ್ ಸರ್ವರ್ ಚಿಷ್ಟಿ ಸೇರಿದಂತೆ ಹಲವಾರು ಮುಸ್ಲಿಂ ಧಾರ್ಮಿಕ ನಾಯಕರು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಕಳೆದ ಮೇ 28ರಂದು ನಡೆದ ಈದ್-ಉಲ್-ಅದಾ ಹಬ್ಬದ ಮುನ್ನವೇ ಈ ಬೇಡಿಕೆ ಹೊರಬಿದ್ದಿದ್ದರಿಂದ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಮುಸ್ಲಿಂ ಸಮುದಾಯದ ವಿರುದ್ಧ ನಡೆಯುತ್ತಿರುವ ಗುಂಪು ದಾಳಿ, ದ್ವೇಷ ರಾಜಕಾರಣ ಹಾಗೂ ಸಾಮಾಜಿಕ ಉದ್ವಿಗ್ನತೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಸಹಕಾರಿಯಾಗಬಹುದು ಎಂಬುದು ಈ ಸಂಘಟನೆಗಳ ವಾದವಾಗಿದೆ.

ಮೌಲಾನಾ ಅರ್ಷದ್ ಮದನಿ ನೇತೃತ್ವದಲ್ಲಿ ಹಲವು ಸಂಘಟನೆಗಳು ಈ ವಿಚಾರದಲ್ಲಿ ಒಗ್ಗಟ್ಟಿನ ನಿಲುವು ತಾಳಿವೆ. ಸಮುದಾಯದೊಳಗೆ ಈ ಬೇಡಿಕೆಯ ಕುರಿತು ಸಹಮತ ಮೂಡಿಸುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಪತ್ರಿಕೆಗಳು ವರದಿ ಮಾಡಿತ್ತು.
ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಿಝ್ವಿ ಸೇರಿದಂತೆ ಹಲವು ಸಂಘಟನೆಗಳು ಈ ಬೇಡಿಕೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿವೆ. ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿದರೆ ದೇಶಾದ್ಯಂತ ಗೋಹತ್ಯೆಗೆ ಸಂಬಂಧಿಸಿದ ನೀತಿಗಳಲ್ಲಿ ಏಕರೂಪತೆ ತರಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಆಲ್ ಇಂಡಿಯಾ ಕುರೇಷಿ ಜಮಾತ್, ಆಲ್ ಇಂಡಿಯಾ ಶಿಯಾ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಹಲವು ಸಂಘಟನೆಗಳು ಕೂಡ ಇದೇ ನಿಲುವನ್ನು ಬೆಂಬಲಿಸಿವೆ.

ಈ ಬೆಳವಣಿಗೆಯನ್ನು ಕೆಲವರು ಹಿಂದೂ-ಮುಸ್ಲಿಂ ಸಾಮರಸ್ಯದ ಹೊಸ ಅಧ್ಯಾಯವೆಂದು ವಿಶ್ಲೇಷಿಸುತ್ತಿದ್ದಾರೆ. ಶತಮಾನಗಳಿಂದ ಜೊತೆಯಾಗಿ ಬದುಕುತ್ತಿರುವ ಎರಡು ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಬಲಪಡಿಸುವ ಉದ್ದೇಶದಿಂದಲೇ ಈ ಪ್ರಸ್ತಾಪ ಬಂದಿದೆ ಎಂಬ ವಾದವೂ ಕೇಳಿಬರುತ್ತಿದೆ. ಗೋಹತ್ಯೆ ಮತ್ತು ಗೋಮಾಂಸ ರಫ್ತು ವಿಚಾರಗಳಿಂದ ಸಮುದಾಯಗಳ ನಡುವೆ ಉಂಟಾಗುವ ಉದ್ವಿಗ್ನತೆಗಳನ್ನು ತಗ್ಗಿಸುವ ಪ್ರಯತ್ನವೆಂದು ಈ ನಿಲುವನ್ನು ಬೆಂಬಲಿಸುವವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಈ ಬೆಳವಣಿಗೆಗಳ ನಡುವೆಯೇ ಬಿಜೆಪಿ ಸರ್ಕಾರ ಮತ್ತು ಅದರ ಆಡಳಿತದ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ. ಗೋ ರಕ್ಷಣೆಯನ್ನು ಪ್ರಮುಖ ರಾಜಕೀಯ ಅಜೆಂಡಾವಾಗಿ ಮಾಡಿಕೊಂಡು ಹಲವು ಚುನಾವಣೆಗಳಲ್ಲಿ ಯಶಸ್ಸು ಕಂಡ ಬಿಜೆಪಿ, ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೇ ಗೋಮಾಂಸ ಉತ್ಪಾದನೆ ಮತ್ತು ರಫ್ತಿಗೆ ಸಂಬಂಧಿಸಿದ ಹಲವು ವೈರುಧ್ಯಗಳನ್ನು ಎದುರಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ದೇಶದ ಪ್ರಮುಖ ಮಾಂಸ ರಫ್ತು ಕೇಂದ್ರಗಳಾಗಿ ಗುರುತಿಸಲ್ಪಟ್ಟಿವೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಆಡಳಿತವಿರುವ ಹಿನ್ನೆಲೆಯಲ್ಲಿ, ಗೋ ರಕ್ಷಣೆಯ ಕುರಿತು ಹೇಳಿಕೆಗಳು ಮತ್ತು ವಾಸ್ತವ ಪರಿಸ್ಥಿತಿಗಳ ನಡುವೆ ವ್ಯತ್ಯಾಸವಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಗೋವಾ ಸೇರಿದಂತೆ ಕೆಲವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗೋಮಾಂಸ ಸೇವನೆಗೆ ಯಾವುದೇ ಕಾನೂನು ನಿರ್ಬಂಧಗಳಿಲ್ಲದಿರುವುದೂ ಚರ್ಚೆಗೆ ಕಾರಣವಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ತಮ್ಮ ರಾಜ್ಯದಲ್ಲಿ ಖಾಸಗಿ ಮನೆಗಳಲ್ಲಿ ಗೋಮಾಂಸ ಸೇವನೆಗೆ ವಿರೋಧವಿಲ್ಲ ಎಂದು ಹೇಳಿರುವುದು ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಅವರ ಹೇಳಿಕೆಗಳು ಕೂಡ ಈ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅಲ್ಲಿನ ಬಿಜೆಪಿ ನಾಯಕರು ಉತ್ತಮ ತಳಿಯ ಗೋಮಾಂಸ ಒದಗಿಸುವ ಭರವಸೆ ನೀಡಿದ್ದರು ಎಂಬ ಆರೋಪಗಳೂ ಕೇಳಿಬಂದಿವೆ.
ಇದೇ ವೇಳೆ, ಭಾರತ ಜಾಗತಿಕ ಮಟ್ಟದಲ್ಲಿ ಗೋಮಾಂಸ ರಫ್ತಿನಲ್ಲಿ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿರುವುದನ್ನೂ ಗೋ ರಕ್ಷಣಾ ಸಂಘಟನೆಗಳು ಪ್ರಶ್ನಿಸುತ್ತಿವೆ. ಗೋಹತ್ಯೆ ನಿಷೇಧದ ಬಗ್ಗೆ ರಾಜಕೀಯವಾಗಿ ಗಟ್ಟಿಯಾದ ನಿಲುವು ಪ್ರದರ್ಶಿಸುವ ಪಕ್ಷಗಳು ಅಧಿಕಾರದಲ್ಲಿದ್ದರೂ, ಗೋಮಾಂಸ ರಫ್ತು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗಿಲ್ಲ ಎಂಬ ಟೀಕೆಗಳು ಮುಂದುವರಿದಿವೆ.

ಇತಿಹಾಸದ ದೃಷ್ಟಿಯಿಂದಲೂ ಗೋ ರಕ್ಷಣೆಯ ವಿಚಾರದಲ್ಲಿ ಮುಸ್ಲಿಂ ಆಡಳಿತಗಾರರ ಕೆಲವು ಉದಾಹರಣೆಗಳನ್ನು ಈ ಬೇಡಿಕೆಗೆ ಬೆಂಬಲವಾಗಿ ಉಲ್ಲೇಖಿಸಲಾಗುತ್ತಿದೆ. ಮೊಘಲ್ ಚಕ್ರವರ್ತಿಗಳಾದ ಬಾಬರ್, ಹುಮಾಯೂನ್, ಜಹಾಂಗೀರ್, ಷಾಜಹಾನ್ ಹಾಗೂ ಅಕ್ಬರ್ ಅವರು ಕೆಲ ಪ್ರದೇಶಗಳಲ್ಲಿ ಗೋಹತ್ಯೆಗೆ ನಿರ್ಬಂಧ ವಿಧಿಸಿದ್ದರೆಂದು ಇತಿಹಾಸಕಾರರು ದಾಖಲಿಸಿದ್ದಾರೆ. ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಬಹದ್ದೂರ್ ಷಾ ಝಫರ್ ಅವರ ಕಾಲದಲ್ಲಿಯೂ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ಆದೇಶಗಳ ಉಲ್ಲೇಖಗಳು ದೊರೆಯುತ್ತವೆ ಎಂಬ ವಾದಗಳು ಕೇಳಿಬರುತ್ತಿವೆ.
ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಕೇಂದ್ರ ಸರ್ಕಾರದ ಮುಂದೆ ದೇಶವ್ಯಾಪಿ ಗೋಹತ್ಯೆ ನಿಷೇಧ ಕುರಿತ ಯಾವುದೇ ಪ್ರಸ್ತಾವ ಇಲ್ಲ ಎಂದು ಹೇಳಿರುವುದು ಈ ಬೇಡಿಕೆ ಮುಂದಿಟ್ಟಿರುವ ಸಂಘಟನೆಗಳಲ್ಲಿ ಅಸಮಾಧಾನ ಉಂಟುಮಾಡಿದೆ. ಇದರಿಂದ ಗೋ ರಕ್ಷಣೆಯ ಕುರಿತು ಕೇಂದ್ರ ಸರ್ಕಾರದ ನೈಜ ಬದ್ಧತೆಯ ಬಗ್ಗೆ ಪ್ರಶ್ನೆಗಳು ಮತ್ತೆ ಎದ್ದಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವುದು, ದೇಶಾದ್ಯಂತ ಏಕಸಮಾನ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವುದು, ಗೋಮಾಂಸ ರಫ್ತು ನಿಷೇಧಿಸುವುದು ಹಾಗೂ ಗೋಶಾಲೆಗಳಿಗೆ ಹೆಚ್ಚಿನ ನೆರವು ಒದಗಿಸುವಂತೆ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸೇರಿದಂತೆ ಹಲವು ಸಂಘಟನೆಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿವೆ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯ ವಕ್ತಾರ ಮುಸ್ತಾಕ್ ಹೆನ್ನಾಬೈಲ್, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗೋವಿನ ವಿಚಾರಕ್ಕೆ ಸಂಬಂಧಿಸಿದ ರಾಜಕೀಯವು ವಿಲಕ್ಷಣ ಮತ್ತು ವಿಚಿತ್ರ ಸ್ವರೂಪ ಪಡೆದುಕೊಂಡಿದೆ. ದೇಶದಲ್ಲಿರುವ ಮಾಂಸ ರಫ್ತು ಮಾಡುವ 10ಕ್ಕೂ ಹೆಚ್ಚು ದೊಡ್ಡ ರಫ್ತು ಕೇಂದ್ರಗಳನ್ನು ಮುಸ್ಲಿಮರ ನಕಲಿ ಹೆಸರಿನಲ್ಲಿ ಮುಸ್ಲಿಮರಲ್ಲದವರೇ ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದು ಅವರು ದೂರಿದರು. ಅಲ್ಲದೆ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದಿಂದ ವಿದೇಶಗಳಿಗೆ ಅತಿಹೆಚ್ಚು ಗೋಮಾಂಸ ರಫ್ತಾಗುತ್ತಿದೆ. ಗೋವಾ ಹಾಗೂ ಬಹುತೇಕ ಈಶಾನ್ಯ ರಾಜ್ಯಗಳಲ್ಲಿ ಗೋಮಾಂಸ ಸೇವನೆಗೆ ಯಾವುದೇ ಕಾನೂನು ನಿರ್ಬಂಧಗಳಿಲ್ಲದೆ ಅವಕಾಶ ನೀಡಲಾಗಿದೆ. ಗೋವಿನ ವಿಚಾರದಲ್ಲಿ ಅಗತ್ಯವಾದ ಕಾಳಜಿ ಮತ್ತು ಸೂಕ್ಷ್ಮತೆ ತೋರದೆ, ಬಿಜೆಪಿ ನಾಯಕರು ಒಳಗೊಂದು–ಹೊರಗೊಂದು ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಭಾರತವು ಜಗತ್ತಿನ ಗೋಮಾಂಸ ರಫ್ತು ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಗೋಹತ್ಯೆಯನ್ನು ನಿಷೇಧಿಸಿರುವ ನೆರೆಯ ರಾಷ್ಟ್ರ ನೇಪಾಳದ ಮಾದರಿಯನ್ನು ಬಿಜೆಪಿ ಸರ್ಕಾರ ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಹಿಂದೂತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಗೋಹತ್ಯೆ ಹಾಗೂ ಗೋಮಾಂಸ ರಫ್ತು ನಿಷೇಧದ ಕುರಿತ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ನೀಡದೇ, ಈ ವಿಷಯದಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಗೋವಿನ ವಿಚಾರದಲ್ಲಿ ‘ಏಕ ದೇಶ–ಏಕ ಕಾನೂನು’ ನೀತಿಯನ್ನು ಜಾರಿಗೆ ತಂದು, ದೇಶಾದ್ಯಂತ ಗೋಹತ್ಯೆ ಮತ್ತು ಗೋಮಾಂಸ ರಫ್ತನ್ನು ನಿಷೇಧಿಸುವ ಕಾನೂನು ರೂಪಿಸಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು. ದೇಶದ ಎಲ್ಲ ಕಸಾಯಿಖಾನೆಗಳನ್ನು ಮುಚ್ಚಿ, ಗೋಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು. ಮಾಂಸಕ್ಕಾಗಿ ಗೋಹತ್ಯೆ ಮಾಡುವವರ ವಿರುದ್ಧ ಹಾಗೂ ಗೋಮಾಂಸ ರಫ್ತು ಕೇಂದ್ರಗಳನ್ನು ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಒಟ್ಟಿನಲ್ಲಿ ಗೋ ರಕ್ಷಣೆಯ ವಿಚಾರವು ಕೇವಲ ಧಾರ್ಮಿಕ ಭಾವನೆಗಳಿಗೆ ಸೀಮಿತವಾಗದೆ, ರಾಜಕೀಯ, ಆರ್ಥಿಕ, ಕೃಷಿ ಹಾಗೂ ಸಾಮಾಜಿಕ ಸಾಮರಸ್ಯದ ಆಯಾಮಗಳನ್ನೂ ಒಳಗೊಂಡಿರುವ ಸಂಕೀರ್ಣ ವಿಷಯವಾಗಿದೆ. ಮುಸ್ಲಿಂ ಸಂಘಟನೆಗಳಿಂದಲೇ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಬೇಡಿಕೆ ಕೇಳಿಬರುತ್ತಿರುವುದು ಈ ಚರ್ಚೆಗೆ ಹೊಸ ತಿರುವು ನೀಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಯಾವ ನಿಲುವು ತಾಳಲಿದೆ ಎಂಬುದು ಕುತೂಹಲದ ವಿಷಯವಾಗಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.






