ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗೌರಿ-ಗಣೇಶ ಹಬ್ಬದ ಸಂಭ್ರಮ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು ಮೂಲದ ಮುತ್ತುರಾಜ್ (35), ಅವರ ಪತ್ನಿ ಕಾವ್ಯ (30) ಹಾಗೂ ಎಂಟು ವರ್ಷದ ಪುತ್ರಿ ಕೀರ್ತನಾ(8) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಂಪತಿಯ ಮತ್ತೊಂದು ಮಗುವಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ನಡೆದ ಸ್ಥಳದ ಸಮೀಪದ ಪೆಟ್ರೋಲ್ ಬಂಕ್‌ನ ಸಿಸಿಟಿವಿ ದೃಶ್ಯದಲ್ಲಿ, ಇಂದು 4 ಗಂಟೆಯ ನಸುಕಿನ ವೇಳೆ ಹಿಂದಿನಿಂದ ಬಂದ ಹಾಲಿನ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಗುದ್ದಿರುವ ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ. ಅಪಘಾತದ ನಿಖರ ಕಾರಣ ಹಾಗೂ ಟ್ಯಾಂಕರ್ ಚಾಲಕನ ವಿರುದ್ಧದ ಕ್ರಮಗಳ ಕುರಿತು ಪೊಲೀಸರ ತನಿಖೆ ಮುಂದುವರೆದಿದೆ.





