ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇಲ್ಲದ ಸಮಾಜದಲ್ಲಿ ರಾಜಕೀಯ ಸಮಾನತೆಯನ್ನು ತರುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಎಂದರೆ ಸ್ವೇಚ್ಛಾಚಾರವಲ್ಲ; ಪರಸ್ಪರರ ಅಭಿಪ್ರಾಯಗಳನ್ನು ಆಲಿಸಿ, ಗೌರವಿಸುವ ವ್ಯವಸ್ಥೆ ಎಂದು ಚಿಂತಕ ಹಾಗೂ ಲೇಖಕ ಡಾ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸುಬ್ರಮಣ್ಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಂಜಯ ಪ್ರಕಾಶನದ 150ನೇ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ಒಳಗೊಳ್ಳುವಿಕೆಗಾಗಿ ಶಿಕ್ಷಣ’ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಇನ್ನೊಬ್ಬರ ಅಭಿಪ್ರಾಯವನ್ನು ಕೇಳಿ ಗೌರವಿಸುವ ಗುಣಕ್ಕಿಂತ ಹೇರಿಕೆಯ ಮನೋಭಾವವೇ ಹೆಚ್ಚಾಗಿದೆ. ನಾವು ಮತ್ತೊಬ್ಬರ ಮೇಲೆ ನಮ್ಮ ಅಭಿಪ್ರಾಯ, ಆಯ್ಕೆ ಮತ್ತು ನಿರ್ಧಾರಗಳನ್ನು ಹೇರಿಕೊಂಡು ಕಾಲ ಕಳೆಯುತ್ತಿದ್ದೇವೆ. ನಿಜವಾದ ಒಳಗೊಳ್ಳುವಿಕೆ ಇನ್ನೂ ಸಮುದಾಯಗಳಲ್ಲಿ ಬೇರೂರಿಲ್ಲ ಎಂದು ಅವರು ವಿಷಾದಿಸಿದರು.
ಶಿಕ್ಷಣ ಎಂದರೆ ಮಕ್ಕಳನ್ನು ಒಳಗೊಳ್ಳುವುದು
ಮಕ್ಕಳ ವಿಚಾರದಲ್ಲಿ ಶಿಕ್ಷಣ ಎಂದರೆ ಮೂಲತಃ ಒಳಗೊಳ್ಳುವಿಕೆಯಾಗಿದೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಪಾಲಕರು ಮತ್ತು ಶಿಕ್ಷಕರ ಒತ್ತಾಯವೇ ಹೆಚ್ಚಾಗಿದೆ. ಮಕ್ಕಳ ಅಭಿಪ್ರಾಯಕ್ಕಿಂತ ದೊಡ್ಡವರ ಅಭಿಪ್ರಾಯವೇ ಅಂತಿಮ ಎಂಬ ಮನಸ್ಥಿತಿ ರೂಪುಗೊಂಡಿದೆ ಎಂದು ಅವರು ಹೇಳಿದರು.
ಮಕ್ಕಳಿಗೆ ಪ್ರಶ್ನೆ ಕೇಳುವ ಅವಕಾಶ ನೀಡದಿರುವುದು ಶೋಚನೀಯ. ಬದುಕಿನಲ್ಲಿ ಪ್ರಶ್ನೆ ಮಾಡಬೇಕು ಮತ್ತು ಪ್ರಶ್ನಿಸುವುದನ್ನು ಕಲಿಸಬೇಕು. ಪ್ರಶ್ನಿಸುವ, ಆಲೋಚಿಸುವ ಗುಣ ಬೆಳೆದಾಗ ಕುಟುಂಬ, ದಾಂಪತ್ಯ ಹಾಗೂ ಮಕ್ಕಳ ನಡುವಿನ ಸಂಬಂಧಗಳು ಆರೋಗ್ಯಕರವಾಗಿರುತ್ತವೆ. ‘ನಮ್ಮದೇ ಸರಿ’, ‘ನಮ್ಮದೇ ಆಯ್ಕೆ’ ಎಂಬ ಮನೋಭಾವದಿಂದ ಹೊರಬರಬೇಕಾಗಿದೆ ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ಸಮಾನ ಅವಕಾಶ ಅಗತ್ಯ
ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ನೀಡದಿದ್ದರೆ ಯಾವುದೇ ಸಮಾಜ ಸಂಪೂರ್ಣ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಮಹಿಳೆಯರು ಜನಸಂಖ್ಯೆಯ ಶೇ.50ರಷ್ಟಿದ್ದರೂ ಅಧಿಕಾರದ ವ್ಯವಸ್ಥೆಗಳಲ್ಲಿ ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವುದು ಆತಂಕಕಾರಿ ಎಂದು ರಹಮತ್ ತರೀಕೆರೆ ಹೇಳಿದರು.
ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುರುಷ ಪ್ರಧಾನ ಮನಸ್ಥಿತಿ ಮುಂದುವರಿದಿದೆ. ಮಹಿಳೆಯರನ್ನು ಹೀಯಾಳಿಸುವ ಪದಗಳ ಬಳಕೆ, ಶೋಷಿತ ಮತ್ತು ನೊಂದ ಸಮುದಾಯಗಳನ್ನು ಹಗುರವಾಗಿ ಕಾಣುವ ಭಾಷೆ—ಇವೆಲ್ಲವೂ ಸಾಮಾಜಿಕ ಒಳಗೊಳ್ಳುವಿಕೆಗೆ ಅಡ್ಡಿಯಾಗುತ್ತವೆ ಎಂದು ಅವರು ಎಚ್ಚರಿಸಿದರು.
ಜಾತಿ, ಧರ್ಮದ ಗಡಿ ಮೀರಿ ಬದುಕಬೇಕು
ಜಾತಿ ಮೀರಿದ ಬದುಕು ರೂಢಿಯಾಗಬೇಕು. ಬಾಲ್ಯದಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ತಿನ್ನುವ, ಆಡುವ, ಬೆರೆಯುವ ವಾತಾವರಣವೇ ಸಮಾಜದ ಸಾರ್ವಜನಿಕ ಬದುಕಿನಲ್ಲೂ ರೂಪುಗೊಳ್ಳಬೇಕು. ಧರ್ಮದ ಹೆಸರಿನಲ್ಲಿ ದ್ವೇಷ ಬೆಳೆಸುವುದು ಸೂಕ್ತವಲ್ಲ. ಇಂತಹ ದ್ವೇಷದ ಮನಸ್ಥಿತಿಯಿಂದ ಹೊರಬಂದು ಮಾನವೀಯ ಸಂಬಂಧಗಳನ್ನು ಬೆಳೆಸಬೇಕಾಗಿದೆ ಎಂದರು.
ಶಿಕ್ಷಣದ ನಿಜವಾದ ಗುರಿ ಮಾನವೀಯ ಮೌಲ್ಯಗಳನ್ನು ಕಲಿಸುವುದಾಗಿದೆ. ಶಿಕ್ಷಣ ಎಂದರೆ ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ; ಅದು ಮನುಷ್ಯರನ್ನು ಒಳಗೊಳ್ಳುವ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸುವ ಪ್ರಕ್ರಿಯೆಯಾಗಿದೆ ಎಂದು ಪ್ರತಿಪಾದಿಸಿದರು.
ಸಂವಿಧಾನ ಶಿಕ್ಷಣದ ಬಾಗಿಲು ತೆರೆದಿತು
ಹಿಂದೆ ಸಮಾಜದ ಕೆಲವು ವರ್ಗಗಳನ್ನು ಶಿಕ್ಷಣದಿಂದ ಹೊರಗಿಡುವ ವ್ಯವಸ್ಥೆ ಇತ್ತು. ಗುರುಕುಲ ಪದ್ಧತಿಯಲ್ಲಿ ಯಾರು ಶಿಕ್ಷಣ ಪಡೆಯುತ್ತಿದ್ದರು ಎಂಬ ಇತಿಹಾಸವನ್ನು ಮರೆಯಬಾರದು. ಸಾರ್ವಜನಿಕವಾಗಿ ಕಡ್ಡಾಯ ಶಿಕ್ಷಣದ ಹಕ್ಕು ದೊರಕಲು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಚಿಂತನೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಮೈಸೂರು ಸಂಸ್ಥಾನದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವು ಆಡಳಿತಗಾರರು ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದರು. ಮಹಿಳಾ ಶಿಕ್ಷಣದ ಬೆಳವಣಿಗೆಯಲ್ಲಿ ಫಾತಿಮಾ ಶೇಖ್, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.

ಅಸಮಾನತೆ ಹೆಚ್ಚುತ್ತಿರುವುದು ಆತಂಕಕಾರಿ
ಸಮಾಜದಲ್ಲಿ ಸಮಾನತೆ ಮೂಡಬೇಕಾದರೆ ಅದರ ಬೀಜವನ್ನು ಶಿಕ್ಷಣದಲ್ಲೇ ಬಿತ್ತಬೇಕು. ಶಿಕ್ಷಣ ಮನೆಯಿಂದ, ಬೀದಿಯಿಂದಲೇ ಆರಂಭವಾಗಬೇಕು. ಅಲ್ಲಿಂದಲೇ ಒಳಗೊಳ್ಳುವಿಕೆಯ ಪ್ರಕ್ರಿಯೆ ಆರಂಭವಾಗಬೇಕು. ವಿದ್ಯಾರ್ಥಿಗಳನ್ನು ಒಳಗೊಳ್ಳುವುದೇ ನಿಜವಾದ ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು ಎಂದು ಹೇಳಿದರು.
ಮಾತೃಭಾಷೆಯ ಬಗ್ಗೆ ಪ್ರೀತಿ ಮತ್ತು ಗೌರವ ಬೆಳೆಸಿಕೊಳ್ಳಬೇಕು. ಅದೇ ಸಂದರ್ಭದಲ್ಲಿ ಅನ್ಯ ಭಾಷೆಗಳನ್ನೂ ಗೌರವಿಸಿ ಅವುಗಳೊಂದಿಗೆ ಸಂಬಂಧ ಬೆಳೆಸಿಕೊಳ್ಳಬೇಕು. ಜ್ಞಾನವನ್ನು ಭಾಷೆ, ಜಾತಿ, ಧರ್ಮ ಅಥವಾ ವರ್ಗದ ಆಧಾರದ ಮೇಲೆ ತುಂಡರಿಸುವ ಬದಲು ವಿವಿಧ ಜ್ಞಾನ ಪರಂಪರೆಗಳನ್ನು ಒಂದುಗೂಡಿಸುವ ಅಗತ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
‘ಮನುಷ್ಯರಾಗಲು ಕಲಿಯಬೇಕು’
ನಾವು ಕಲಿಯುವುದು ಕೇವಲ ಪದವಿ ಪಡೆಯಲು ಅಲ್ಲ; ಮನುಷ್ಯರಾಗಲು. ಮಕ್ಕಳ ಮನಸ್ಸಿನಲ್ಲಿ ವಿಷ ತುಂಬುವ ಬದಲು ಸಮಾನತೆ ಮತ್ತು ಮಾನವೀಯತೆಯ ಪ್ರಜ್ಞೆಯನ್ನು ಬೆಳೆಸಬೇಕು. ಶಿಕ್ಷಣದ ಪದವಿಗಿಂತ ಮನುಷ್ಯತ್ವದ ಗುಣವೇ ಮುಖ್ಯ ಎಂದು ಡಾ. ರಹಮತ್ ತರೀಕೆರೆ ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಹಳೇ ಮೈಸೂರು: ದಲಿತ ಅಸ್ಮಿತೆಯ ತವರು; ಮತದಲ್ಲಿ ಶಕ್ತಿ, ಅಧಿಕಾರದಲ್ಲಿ ಹಿನ್ನಡೆ ಏಕೆ?
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಖಾಸಗೀಕರಣ ಅಪಾಯಕಾರಿ ಬೆಳವಣಿಗೆಯಾಗಿದೆ. ಶಿಕ್ಷಣವೇ ಖರೀದಿಸುವ ವಸ್ತುವಿನ ಹಂತಕ್ಕೆ ತಲುಪಿರುವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಶಿಕ್ಷಣದ ಹೊಸ ಕಲ್ಪನೆಗಳಿಗೆ ಸಮಾಜ ತೆರೆದುಕೊಳ್ಳಬೇಕಿದೆ. ಎಲ್ಲರನ್ನು ಒಳಗೊಳ್ಳುವ, ಸಮಾನತೆಯನ್ನು ಬೆಳೆಸುವ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ ಎಂದು ಅವರು ಕಿವಿಮಾತು ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕನ್ನಡಿ ಹಿಡಿದ ಆದೇಶ: ₹3,383ರ ಎಫ್‌ಆರ್‌ಪಿ ಸಾಕೇ?
ಸಂವಾದ ಕಾರ್ಯಕ್ರಮದಲ್ಲಿ ಗಾಂಧೀವಾದಿ ಡಾ. ಸುಜಯ್ ಕುಮಾರ್, ವಿಶ್ರಾಂತ ಉಪ ಕುಲಪತಿ ಸಬೀಹ ಭೂಮಿಗೌಡ, ಭೂಮಿಗೌಡ, ಶಿಕ್ಷಕರಾದ ಚಂದ್ರಣ್ಣ, ಸಂಜಯ ಪ್ರಕಾಶನದ ಶಿವಕುಮಾರ್, ಜಯಶಂಕರ್ ಸೇರಿದಂತೆ ವಿವಿಧ ಕಾಲೇಜಿನ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.





