ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳ ಭೂಮಿಗೆ ಕಾನೂನುಬದ್ಧ ದಾಖಲೆ ಕಲ್ಪಿಸುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಅಗತ್ಯವಾದ ಕ್ರಮವಾಗಿದೆ. ಭೂದಾಖಲೆಗಳ ಕೊರತೆಯಿಂದ ಉಂಟಾಗುತ್ತಿರುವ ಅತಿಕ್ರಮಣ, ಮಾಲೀಕತ್ವದ ಗೊಂದಲ ಮತ್ತು ನ್ಯಾಯಾಂಗ ವ್ಯಾಜ್ಯಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಸರ್ಕಾರ ಕೈಗೊಂಡಿರುವ ಈ ಕ್ರಮವನ್ನು ಶೀಘ್ರವಾಗಿ ಪೂರ್ಣಗೊಳಿಸುವ ಅಗತ್ಯವಿದೆ.
ರಾಜ್ಯದ ಸರ್ಕಾರಿ ಶಾಲೆಗಳು ಹಾಗೂ ಕಾಲೇಜುಗಳು ಬಳಸುತ್ತಿರುವ ಭೂಮಿಯನ್ನು ಅಧಿಕೃತ ಕಂದಾಯ ಮತ್ತು ಭೂದಾಖಲೆಗಳಲ್ಲಿ ದಾಖಲಿಸುವಂತೆ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಅನೇಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಿಗೆ ಸಮರ್ಪಕ ಭೂದಾಖಲೆಗಳಿಲ್ಲದಿರುವುದು, ಭೂಸ್ವಾಮ್ಯಕ್ಕೆ ಸಂಬಂಧಿಸಿದ ಗೊಂದಲಗಳು, ಅತಿಕ್ರಮಣದ ಅಪಾಯ ಹಾಗೂ ನ್ಯಾಯಾಂಗ ವ್ಯಾಜ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣ ಸಂಸ್ಥೆಗಳ ಭೂ ಆಸ್ತಿಯನ್ನು ಕಾನೂನುಬದ್ಧವಾಗಿ ಸಂರಕ್ಷಿಸಿ ಶಾಶ್ವತ ದಾಖಲೆ ಕಲ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ(ಸಂರಕ್ಷಣೆ ಮತ್ತು ಸಕ್ರಮಗೊಳಿಸುವಿಕೆ) ಅಧಿನಿಯಮ, 2026’ನ್ನು ಜಾರಿಗೆ ತಂದಿದೆ. ಈ ಅಧಿನಿಯಮದ ಪ್ರಕಾರ, ಯಾವುದೇ ಭೂಮಿಯಲ್ಲಿ ಕನಿಷ್ಠ 12 ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಶಾಲೆ ಅಥವಾ ಕಾಲೇಜು ಕಾರ್ಯನಿರ್ವಹಿಸುತ್ತಿದ್ದರೆ, ಆ ಭೂಮಿಯ ಮೇಲಿನ ಇತರೆ ಹಕ್ಕುಗಳು, ದಾವೆಗಳು ಹಾಗೂ ಋಣಭಾರಗಳು ರದ್ದುಗೊಂಡು ಅದು ರಾಜ್ಯ ಸರ್ಕಾರದ ಆಸ್ತಿಯಾಗಿ ಪರಿಗಣಿಸಲಾಗುತ್ತದೆ. ಇದರಿಂದ ವರ್ಷಗಳಿಂದ ದಾಖಲೆಗಳ ಕೊರತೆಯಿಂದ ಎದುರಾಗುತ್ತಿದ್ದ ಭೂಸ್ವಾಮ್ಯದ ಗೊಂದಲಗಳಿಗೆ ಅಂತ್ಯ ಬೀಳುವ ನಿರೀಕ್ಷೆಯಿದೆ.
ಅನೇಕ ಶಾಲೆಗಳು ಮತ್ತು ಕಾಲೇಜುಗಳು ದಾನಿಗಳಿಂದ ದೊರೆತ ಭೂಮಿಯಲ್ಲಿ ಸ್ಥಾಪನೆಯಾಗಿದ್ದರೂ, ದಾನಪತ್ರಗಳು ಲಭ್ಯವಿಲ್ಲದಿರುವುದು ಅಥವಾ ದಾನಿಗಳು ಮರಣ ಹೊಂದಿರುವುದು ದಾಖಲೀಕರಣಕ್ಕೆ ಅಡ್ಡಿಯಾಗಿತ್ತು. ಕೆಲವು ಪ್ರಕರಣಗಳಲ್ಲಿ ದಾನಿಗಳ ಕುಟುಂಬ ಸದಸ್ಯರು ಭೂಮಿಯ ಮೇಲೆ ಹಕ್ಕು ಪ್ರತಿಪಾದಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೊಸ ಅಧಿನಿಯಮದಡಿ ಇಂತಹ ಭೂಮಿಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ದಾಖಲೆಗಳ ಕೊರತೆಯಿಂದ ಉದ್ಭವಿಸಿದ್ದ ಕಾನೂನು ತೊಡಕುಗಳನ್ನು ನಿವಾರಿಸುವ ಪ್ರಯತ್ನ ನಡೆದಿದೆ.
ಶೈಕ್ಷಣಿಕ ಸಂಸ್ಥೆಗಳ ಆಸ್ತಿಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು(ಬಿಇಒ) ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು(ಡಿಡಿಪಿಐ) ಎಸ್ಟೇಟ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಜಂಟಿ ಸರ್ವೇ ನಡೆಸುವ ಮೂಲಕ ಶಾಲೆ-ಕಾಲೇಜುಗಳ ಹೆಸರಿನಲ್ಲಿ ಖಾತೆ, ಮ್ಯುಟೇಶನ್ ಹಾಗೂ ಇತರೆ ಭೂದಾಖಲೆಗಳನ್ನು ಸೃಷ್ಟಿಸುವ ಕಾರ್ಯಕ್ಕೆ ವೇಗ ನೀಡಲಾಗಿದೆ.
ಅಧಿನಿಯಮದ ಅನ್ವಯ, ಶಾಲೆ ಅಥವಾ ಕಾಲೇಜು ಬಳಸುತ್ತಿರುವ ಭೂಮಿಯನ್ನು ಪಹಣಿ ಸೇರಿದಂತೆ ಎಲ್ಲ ಸಂಬಂಧಿತ ದಾಖಲೆಗಳಲ್ಲಿ ಆಯಾ ಶೈಕ್ಷಣಿಕ ಸಂಸ್ಥೆಗಳ ಹೆಸರಿನಲ್ಲಿ ದಾಖಲಿಸಬೇಕು ಎಂದು ಸರ್ಕಾರ ಸೂಚಿಸಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದ ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಬಂಧಿತ ತಹಶೀಲ್ದಾರರೊಂದಿಗೆ ಸಮನ್ವಯ ಸಾಧಿಸಿ ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ.

ಶಾಲಾ ಭೂಮಿಗಳ ಅತಿಕ್ರಮಣ ಅಥವಾ ಅನಧಿಕೃತ ಬಳಕೆ ಕಂಡುಬಂದಲ್ಲಿ ಜಿಲ್ಲಾಡಳಿತದ ಮೂಲಕ ಕಾನೂನುಬದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜೊತೆಗೆ ಭೂದಾಖಲೆಗಳಲ್ಲಿ ಶಾಲೆಗಳ ಹೆಸರನ್ನು ದಾಖಲಿಸಿರುವ ಪ್ರಗತಿಯ ಕುರಿತು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ. ಇದರಿಂದ ಶಾಲಾ ಆಸ್ತಿಗಳ ಮೇಲಿನ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಹೆಚ್ಚಲಿದೆ.
ಸರ್ಕಾರದ ಈ ಕ್ರಮವು ಶಾಲೆ ಮತ್ತು ಕಾಲೇಜುಗಳ ಭೂಮಿಯನ್ನು ಕಾನೂನುಬದ್ಧವಾಗಿ ರಕ್ಷಿಸುವುದರ ಜತೆಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಭೂ ವಿವಾದಗಳನ್ನು ತಡೆಯಲು ನೆರವಾಗಲಿದೆ. ಶೈಕ್ಷಣಿಕ ಸಂಸ್ಥೆಗಳ ಆಸ್ತಿಗಳಿಗೆ ಸ್ಪಷ್ಟ ಮಾಲೀಕತ್ವ ಹಾಗೂ ಶಾಶ್ವತ ದಾಖಲೆ ದೊರಕುವುದರಿಂದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುವುದೂ ಸುಲಭವಾಗಲಿದೆ.
ರಾಜ್ಯದ ಅನೇಕ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳು ಕಾರ್ಯನಿರ್ವಹಿಸುತ್ತಿರುವ ಭೂಮಿಗಳ ಪಹಣಿ ಹಾಗೂ ಕಂದಾಯ ದಾಖಲೆಗಳಲ್ಲಿ ಹಲವು ಗೊಂದಲಗಳು ಕಂಡುಬಂದಿವೆ. ಕೆಲವು ಶಾಲೆಗಳ ಜಾಗಗಳು ಕೆರೆ, ಕಟ್ಟೆ, ಗೋಮಾಳ, ಗಂಡುತೋಪು ಅಥವಾ ಇತರೆ ಸಾರ್ವಜನಿಕ ಭೂಮಿಗಳೆಂದು ದಾಖಲಾಗಿದ್ದರೆ, ಕೆಲವು ಕಡೆಗಳಲ್ಲಿ ಮಾಲೀಕರ ಹೆಸರಿನ ಬದಲಿಗೆ ಕೇವಲ ʼಸರ್ಕಾರʼ ಎಂದು ನಮೂದಿಸಲಾಗಿದೆ. ಈ ರೀತಿಯ ದಾಖಲೆಗಳಿಂದ ಭೂಸ್ವಾಮ್ಯದ ಸ್ಪಷ್ಟತೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಹಲವು ದಶಕಗಳ ಹಿಂದೆ ಶಿಕ್ಷಣದ ಉದ್ದೇಶಕ್ಕಾಗಿ ದಾನವಾಗಿ ನೀಡಿದ್ದ ಭೂಮಿಗಳಿಗೂ ದಾಖಲೆಗಳ ಕೊರತೆಯಿಂದ ವಿವಾದಗಳು ಎದುರಾಗಿವೆ. ಕೆಲವೆಡೆ ಭೂದಾನಿಗಳ ಕುಟುಂಬ ಸದಸ್ಯರು ಭೂಮಿ ತಮ್ಮದೇ ಎಂಬ ಹಕ್ಕು ಪ್ರತಿಪಾದಿಸಿ ನ್ಯಾಯಾಲಯದ ಮೊರೆ ಹೋಗಿರುವ ಪ್ರಕರಣಗಳಿವೆ. ದಾಖಲೆಗಳ ಅಸ್ಪಷ್ಟತೆಯಿಂದ ಶಾಲಾ ಆಸ್ತಿಗಳ ಸಂರಕ್ಷಣೆ, ಹೆಚ್ಚುವರಿ ಕಟ್ಟಡ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಬಳಸುತ್ತಿರುವ ಭೂಮಿಯನ್ನು ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳ ಹೆಸರಿನಲ್ಲಿಯೇ ದಾಖಲಿಸಲು ಸರ್ಕಾರ ಮುಂದಾಗಿದೆ. ಪಹಣಿ, ಆರ್‌ಟಿಸಿ, ಮ್ಯುಟೇಶನ್ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.
ಈ ಕ್ರಮದಿಂದ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಯ ಮೇಲಿನ ಹಕ್ಕು ಸ್ಪಷ್ಟವಾಗಲಿದ್ದು, ಅತಿಕ್ರಮಣ, ಮಾಲೀಕತ್ವದ ಗೊಂದಲ ಹಾಗೂ ನ್ಯಾಯಾಂಗ ವ್ಯಾಜ್ಯಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಶಿಕ್ಷಣ ಸಂಸ್ಥೆಗಳ ಭೂ ಆಸ್ತಿಯನ್ನು ಶಾಶ್ವತವಾಗಿ ಸಂರಕ್ಷಿಸುವ ಮಹತ್ವದ ಹೆಜ್ಜೆಯಾಗಿ ಇದನ್ನು ಪರಿಗಣಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಭೂದಾಖಲೀಕರಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಜಿಲ್ಲೆಯ ಒಟ್ಟು 1,808 ಸರ್ಕಾರಿ ಶಾಲೆಗಳ ಪೈಕಿ 1,328 ಶಾಲೆಗಳ ಆಸ್ತಿ ನೋಂದಣಿ ಪೂರ್ಣಗೊಂಡಿದ್ದರೆ, 480 ಶಾಲೆಗಳ ಆಸ್ತಿ ನೋಂದಣಿ ಪ್ರಕ್ರಿಯೆ ಇನ್ನೂ ಬಾಕಿಯಿದೆ. ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದರೂ, ವಿವಿಧ ತಾಂತ್ರಿಕ ಹಾಗೂ ಕಾನೂನು ತೊಡಕುಗಳಿಂದ ಪ್ರಗತಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.
ಭೂಮಿ ನೋಂದಣಿ ಪ್ರಕ್ರಿಯೆ ವೇಗಗೊಳಿಸಲು ಮುಖ್ಯಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಮನವಿ ಸಲ್ಲಿಸಿದ್ದಾರೆ. ಆದರೆ ಇ-ಸ್ವತ್ತು ತಂತ್ರಾಂಶದ ತಾಂತ್ರಿಕ ಸಮಸ್ಯೆಗಳು, ಭೂಮಾಪಕರ ಮುಷ್ಕರ ಹಾಗೂ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದ ನ್ಯಾಯಾಂಗ ವ್ಯಾಜ್ಯಗಳು ಪ್ರಗತಿಗೆ ಅಡ್ಡಿಯಾಗಿವೆ.
ಕಳೆದ ಎರಡು ತಿಂಗಳಿಂದ ಇ-ಸ್ವತ್ತು ಸರ್ವರ್ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ದಾಖಲೆಗಳ ಅಪ್‌ಲೋಡ್, ಖಾತೆ ಸೃಷ್ಟಿ ಹಾಗೂ ಆಸ್ತಿ ನೋಂದಣಿ ಕಾರ್ಯಗಳು ವಿಳಂಬವಾಗಿವೆ. ಕೆಲವು ಶಾಲೆಗಳ ಆರ್‌ಟಿಸಿ ಇನ್ನೂ ದಾನಿಗಳು ಅಥವಾ ಅವರ ವಾರಸುದಾರರ ಹೆಸರಿನಲ್ಲಿರುವುದರಿಂದ ಕಾನೂನು ತೊಡಕುಗಳು ಎದುರಾಗುತ್ತಿವೆ. ಭೂಮಾಪಕರ ಮುಷ್ಕರದಿಂದ ಸರ್ವೇ ಕಾರ್ಯಗಳೂ ನಿಧಾನಗೊಂಡಿವೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತದಿಂದ ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಮಾಧ್ಯಮದ 351 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಶೂನ್ಯ ದಾಖಲಾತಿಯ ಕಾರಣದಿಂದ ಕಾರ್ಯನಿರ್ವಹಣೆ ನಿಲ್ಲಿಸಿರುವ ಈ ಶಾಲೆಗಳ ಜಾಗ ಮತ್ತು ಕಟ್ಟಡಗಳ ಸಂರಕ್ಷಣೆ ಶಿಕ್ಷಣ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ.
ಮುಚ್ಚಲ್ಪಟ್ಟ ಶಾಲೆಗಳ ಕಟ್ಟಡಗಳು ಹಾಗೂ ಜಾಗಗಳು ಅತಿಕ್ರಮಣದ ಅಪಾಯಕ್ಕೆ ಸಿಲುಕಿವೆ. ಕೆಲವೆಡೆ ಶಾಲಾ ಆವರಣಗಳನ್ನು ದನ ಕಟ್ಟಲು, ವಾಹನಗಳ ನಿಲುಗಡೆಗೆ ಹಾಗೂ ಇತರೆ ಖಾಸಗಿ ಬಳಕೆಗಳಿಗೆ ಬಳಸುತ್ತಿರುವುದು ಕಂಡುಬಂದಿದೆ. ರಾತ್ರಿ ವೇಳೆ ಕೆಲವು ಶಾಲಾ ಕಟ್ಟಡಗಳಲ್ಲಿ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲೆಗಳ ಆಸ್ತಿಯನ್ನು ರಕ್ಷಿಸಲು ತ್ವರಿತವಾಗಿ ಭೂದಾಖಲೀಕರಣ ಪೂರ್ಣಗೊಳಿಸಿ, ಶಾಲಾ ಜಾಗಗಳಿಗೆ ಬೇಲಿ ನಿರ್ಮಾಣ, ನಾಮಫಲಕ ಅಳವಡಿಕೆ ಹಾಗೂ ನಿಯಮಿತ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು, ಶಿಕ್ಷಣ ತಜ್ಞರು, ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕುವಾರು ಆಸ್ತಿ ನೋಂದಣಿ ಸ್ಥಿತಿ
- ನಾಗಮಂಗಲ ತಾಲೂಕಿನ 141 ಶಾಲೆಗಳ ನೋಂದಣಿ ಪೂರ್ಣಗೊಂಡಿದ್ದು, 165 ಶಾಲೆಗಳ ನೋಂದಣಿ ಬಾಕಿಯಿದೆ.
- ಪಾಂಡವಪುರ ತಾಲೂಕಿನ 246 ಶಾಲೆಗಳ ನೋಂದಣಿ ಪೂರ್ಣಗೊಂಡಿದ್ದು, 101 ಶಾಲೆಗಳ ನೋಂದಣಿ ಬಾಕಿಯಿದೆ.
- ಕೃಷ್ಣರಾಜಪೇಟೆ ತಾಲೂಕಿನ 223 ಶಾಲೆಗಳ ನೋಂದಣಿ ಪೂರ್ಣಗೊಂಡಿದ್ದು, 100 ಶಾಲೆಗಳ ನೋಂದಣಿ ಬಾಕಿ ಉಳಿದಿದೆ.
- ಮಳವಳ್ಳಿ ತಾಲೂಕಿನ 210 ಶಾಲೆಗಳ ನೋಂದಣಿ ಪೂರ್ಣಗೊಂಡಿದ್ದು, 45 ಶಾಲೆಗಳ ನೋಂದಣಿ ಬಾಕಿಯಿದೆ.
- ಮದ್ದೂರು ತಾಲೂಕಿನ 196 ಶಾಲೆಗಳ ನೋಂದಣಿ ಪೂರ್ಣಗೊಂಡಿದ್ದು, 37 ಶಾಲೆಗಳ ನೋಂದಣಿ ಬಾಕಿಯಿದೆ.
- ಶ್ರೀರಂಗಪಟ್ಟಣ ತಾಲೂಕಿನ 110 ಶಾಲೆಗಳ ನೋಂದಣಿ ಪೂರ್ಣಗೊಂಡಿದ್ದು, 26 ಶಾಲೆಗಳ ನೋಂದಣಿ ಬಾಕಿಯಿದೆ.
- ಮಂಡ್ಯ ಉತ್ತರ ಶೈಕ್ಷಣಿಕ ವಲಯ ವ್ಯಾಪ್ತಿಯ 116 ಶಾಲೆಗಳ ನೋಂದಣಿ ಪೂರ್ಣಗೊಂಡಿದ್ದು, 55 ಶಾಲೆಗಳ ನೋಂದಣಿ ಬಾಕಿಯಿದೆ.
- ಮಂಡ್ಯ ದಕ್ಷಿಣ ಶೈಕ್ಷಣಿಕ ವಲಯ ವ್ಯಾಪ್ತಿಯ 86 ಶಾಲೆಗಳ ನೋಂದಣಿ ಪೂರ್ಣಗೊಂಡಿದ್ದು, 51 ಶಾಲೆಗಳ ನೋಂದಣಿ ಬಾಕಿಯಿದೆ.
ಒಟ್ಟಾರೆಯಾಗಿ ಮಂಡ್ಯ ಜಿಲ್ಲೆಯ 1,808 ಸರ್ಕಾರಿ ಶಾಲೆಗಳ ಪೈಕಿ 1,328 ಶಾಲೆಗಳ ಆಸ್ತಿ ನೋಂದಣಿ ಪೂರ್ಣಗೊಂಡಿದ್ದು, 480 ಶಾಲೆಗಳ ನೋಂದಣಿ ಬಾಕಿಯಿದೆ.
ಇದನ್ನೂ ಓದಿದ್ದೀರಾ? ಬೆಳಗಾವಿ | ಮುಂಗಾರು ವಿಳಂಬದಿಂದ ಬೆಳೆ ಒಣಗುವ ಭೀತಿ: ಆಕಾಶದತ್ತ ಮುಖಮಾಡಿದ ರೈತರು
ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳ ಭೂಮಿಗೆ ಕಾನೂನುಬದ್ಧ ದಾಖಲೆ ಕಲ್ಪಿಸುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಅಗತ್ಯವಾದ ಕ್ರಮವಾಗಿದೆ. ಭೂದಾಖಲೆಗಳ ಕೊರತೆಯಿಂದ ಉಂಟಾಗುತ್ತಿರುವ ಅತಿಕ್ರಮಣ, ಮಾಲೀಕತ್ವದ ಗೊಂದಲ ಮತ್ತು ನ್ಯಾಯಾಂಗ ವ್ಯಾಜ್ಯಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಸರ್ಕಾರ ಕೈಗೊಂಡಿರುವ ಈ ಕ್ರಮವನ್ನು ಶೀಘ್ರವಾಗಿ ಪೂರ್ಣಗೊಳಿಸುವ ಅಗತ್ಯವಿದೆ. ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಬಾಕಿ ಉಳಿದಿರುವ 480 ಶಾಲೆಗಳ ಆಸ್ತಿ ನೋಂದಣಿ ಕಾರ್ಯವನ್ನು ತ್ವರಿತಗೊಳಿಸುವ ಮೂಲಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂ ಆಸ್ತಿಗೆ ಸಂಪೂರ್ಣ ಕಾನೂನುಬದ್ಧ ರಕ್ಷಣೆ ಒದಗಿಸಬೇಕಾಗಿದೆ.
ಈ ವಿಡಿಯೋ ವೀಕ್ಷಿಸಿದ್ದೀರಾ?





