ಮುಂಡಗೋಡ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೋಟೆಲ್‌ನಲ್ಲಿ ಊಟಕ್ಕೆ ಕುಳಿತಿದ್ದಾಗ ನಡೆದಿದ್ದ ರೌಡಿ ಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆ (38) ಅವರ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ.
ಮೀಟರ್ ಬಡ್ಡಿ ವ್ಯವಹಾರದ ಹಳೇ ದ್ವೇಷಕ್ಕೆ ಸುಪಾರಿ ನೀಡಿ ಈ ಕೊಲೆ ಮಾಡಿಸಲಾಗಿದ್ದು, ಮುಂಡಗೋಡ ಪೊಲೀಸರು ಒಟ್ಟು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ: ರೌಡಿ ಶೀಟರ್ ಆಗಿದ್ದ ಜಮೀರ್ ಅಹ್ಮದ್ ಅವರು ದಿನಾಂಕ 24/04/2026 ರಂದು ರಾತ್ರಿ ಅಂಬಿಕಾ ಸಾವಜಿ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿ ಬಂದಿದ್ದ ಹಂತಕರ ತಂಡ, ಹರಿತವಾದ ಆಯುಧಗಳಿಂದ ಅವರ ಮೇಲೆ ಏಕಾಏಕಿ ಮರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿತ್ತು.
ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆಯ ವೇಳೆ ಈ ಕೊಲೆಗೆ ‘ಮೀಟರ್ ಬಡ್ಡಿ’ ವ್ಯವಹಾರದ ಹಗೆತನವೇ ಕಾರಣ ಎಂಬುದು ಬಯಲಾಗಿದೆ. ಮೊದಲನೇ ಆರೋಪಿ ಮಂಜುನಾಥ ಕಾಜಗಾರ ಮತ್ತು ಮೃತ ಜಮೀರ್ ಅಹ್ಮದ್ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು
ಈ ಸುದ್ದಿ ಓದಿದ್ದೀರಾ? ಶಿರಸಿ | ಆಯುರ್ವೇದ ವೈದ್ಯ ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿಯ ಬಂಧನ, 15 ಲಕ್ಷದ ಚಿನ್ನಾಭರಣ ವಶ
ಇದೇ ಕಾರಣಕ್ಕೆ ಮಂಜುನಾಥ ಇತರ ನಾಲ್ವರಿಗೆ ಸುಪಾರಿ ನೀಡಿ ಜಮೀರ್‌ನನ್ನು ಮುಗಿಸಲು ಪ್ಲಾನ್ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬಂಧಿತರನ್ನು ಮಂಜುನಾಥ ಕಾಜಗಾರ, ಶ್ರೀಕಾಂತ ಕಿರಣಗಿ, ಮಂಜುನಾಥ ಬೆಳಗಾಂವ, ಅಭಿಷೇಕ ಬದಶೆಟ್ಟಿ ಮತ್ತು ದೀಪಕ ನವಲೆ ಎಂದು ಗುರುತಿಸಲಾಗಿದೆ. ಇವರು ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಎರಡು ಬೈಕ್ ಹಾಗೂ ಒಂದು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಆರು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಲೆ ಪ್ರಕರಣದ ಆರೋಪಿಗಳನ್ನು ಕ್ಷಿಪ್ರವಾಗಿ ಬಂಧಿಸುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪನ್ ಎಂ ಎನ್ (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಜಿ ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಶ್ರೀ ರಂಗನಾಥ ನೀಲಮ್ಮನವರ್ – ಪೊಲೀಸ್ ನಿರೀಕ್ಷಕರು .ಶ್ರೀ ಶ್ರೀಧರ ಎಸ್.ಆರ್. – ಪೊಲೀಸ್ ನಿರೀಕ್ಷಕರು ಗೋಕರ್ಣ.
ಶ್ರೀ ಮಂಜುನಾಥ ಗೌಡರ್ – ಪಿ.ಎಸ್.ಐ, ಶ್ರೀ ಪರಶುರಾಮ ಭಜಂತ್ರಿ – ಪಿ.ಎಸ್.ಐ, ಶ್ರೀ ರಾಜಶೇಖರ ವಂದಲಿ – ಪಿ.ಎಸ್.ಐ ಸಿ.ಪಿ.ಸಿ.ಗಳಾದ ತಿರುಪತಿ ಚೌಡಣ್ಣನವರ್, ಮಹಾಂತೇಶ ಮುಧೋಳ, ಮುತ್ತಣ್ಣ ಭೋವಿ, ನಾಗಪ್ಪ ಮೊರಟಗಿ, ಸಂಜು ರಾಠೋಡ, ಮಂಜುನಾಥ ಓಣಿಕೇರಿ ಹಾಗೂ ಬಸವರಾಜ ಒಡೆಯರ್. ಸಿ.ಹೆಚ್.ಸಿ. ಮಹಮ್ಮದ ಶಫಿ ಶೇಖ್ ಮತ್ತು ಬಸವರಾಜ ಹಗರಿ. ಪ್ರವೀಣ ಪೂಜಾರ ಹಾಗೂ ಶ್ರೀಕಾಂತ ಕಟಬರ. ತಾಂತ್ರಿಕ ವಿಭಾಗ (ಕಾರವಾರ): ಉದಯ ಗುಣಗಾ ಮತ್ತು ಬಬನ್ ಕದಂ. ಈ ತಂಡದ ಸಮಯಪ್ರಜ್ಞೆ ಮತ್ತು ದಕ್ಷ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.





