ಶಿರಸಿ: ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ವಾಸವಿದ್ದ ಆಯುರ್ವೇದ ವೈದ್ಯರಾದ ಡಾ. ರಮೇಶ ಫಕೀರಪ್ಪ ಕಲಕುಟಕರ ಎಂಬುವವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ: ಮೃತ ಡಾ. ರಮೇಶ ಅವರು ಕಳೆದ 5 ತಿಂಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ಮನೆಯಲ್ಲಿ ಒಬ್ಬರೇ ವಾಸವಿದ್ದ ಅವರು ಏಪ್ರಿಲ್ 20ರಂದು ಎರಡನೇ ವಿವಾಹವಾಗಲು ನಿರ್ಧರಿಸಿದ್ದರು.
ಆದರೆ, ಏಪ್ರಿಲ್ 18ರ ರಾತ್ರಿ ಮತ್ತು ಏಪ್ರಿಲ್ 19ರ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತರು ಅವರ ತಲೆಯ ಹಿಂಭಾಗಕ್ಕೆ ಯಾವುದೋ ಆಯುಧದಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದರು. ನಂತರ ಮನೆಯ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದರು.
ಈ ಬಗ್ಗೆ ಮೃತರ ಸಹೋದರ ಈರಪ್ಪ ಕಲಕುಟಕರ ಅವರು ನೀಡಿದ ದೂರಿನ ಮೇರೆಗೆ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಾಂಭೀರ್ಯವನ್ನು ಅರಿತ ಶಿರಸಿ ಉಪವಿಭಾಗದ ಡಿವೈಎಸ್‌ಪಿ ಶ್ರೀಮತಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ
ಈ ಸುದ್ದಿ ಓದಿದ್ದೀರಾ? ಕಾರವಾರ | ‘ಪ್ರಾಜೆಕ್ಟ್ ಸೀಬರ್ಡ್’ನಿಂದ ಆರ್ಥಿಕ ಚೇತನ: ಸಾವಿರಾರು ಮಂದಿಗೆ ಉದ್ಯೋಗ, ಸ್ಥಳೀಯ ಜೀವನಮಟ್ಟ ಏರಿಕೆ
ತಾಂತ್ರಿಕ ಸಲಕರಣೆಗಳು ಹಾಗೂ ಸ್ಥಳೀಯ ಮಾಹಿತಿಗಳನ್ನು ಬಳಸಿಕೊಂಡು ತನಿಖೆ ನಡೆಸಿದ ತಂಡವು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಡುಬೈಲ್ ನಿವಾಸಿ, 70 ವರ್ಷದ ಮಂಜುನಾಥ ಪಿ.ಎಲ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ ಕೊಲೆಗೆ ಬಳಸಿದ ಆಯುಧ, ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 50,000 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪನ್ ಎಮ್.ಎನ್. ಅವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ, ಪಿಎಸ್‌ಐ ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಕಠಿಣ ಸವಾಲಾಗಿದ್ದ ಈ ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.




