ಮುಂಡಗೋಡ: ಪ್ರಸಕ್ತ ವರ್ಷ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ರೈತರಿಗೆ ಕೃಷಿ ಕೆಲಸದ ಕೊರತೆಯಾಗಿದೆ. ಇತ್ತ ಸ್ವಂತ ಉದ್ಯೋಗವೂ ಇಲ್ಲದ ಅಸಹಾಯಕ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರಿಗೆ ವಿಬಿ-ಜಿ ರಾಮ್-ಜಿ ಯೋಜನೆ ಹೊಸ ಭರವಸೆಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ ಹೇಳಿದರು.
ಅವರು ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಮ್ಯನಕೊಪ್ಪ ಲಂಬಾಣಿ ತಾಂಡಾದಲ್ಲಿ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು. ಜುಲೈ 1ರಿಂದ ಜಾರಿಗೆ ಬಂದಿರುವ ವಿಬಿ-ಜಿ ರಾಮ್-ಜಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ವಾರ್ಷಿಕ 125 ಮಾನವ ದಿನಗಳ ಉದ್ಯೋಗ ಪಡೆಯುವ ಅವಕಾಶವಿದೆ.
ಪುರುಷ ಮತ್ತು ಮಹಿಳೆಯರಿಗೆ ದಿನಕ್ಕೆ ₹382ರಂತೆ ಸಮಾನ ಕೂಲಿ ನೀಡಲಾಗುತ್ತಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ದೀರ್ಘಕಾಲ ಬಾಳಿಕೆ ಬರುವ ಸಮುದಾಯ ಕಾಮಗಾರಿಗಳು ಹಾಗೂ ಜನರ ಆರ್ಥಿಕ ಭದ್ರತೆಗಾಗಿ ವೈಯಕ್ತಿಕ ಸೌಲಭ್ಯಗಳು ಸೇರಿದಂತೆ ಒಟ್ಟು 318 ಬಗೆಯ ಅನುಮೋದಿತ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜನರ ಮನೆ ಬಾಗಿಲಿಗೆ ಜಾತಿ–ಆದಾಯ ಪ್ರಮಾಣಪತ್ರ: 9.60 ಲಕ್ಷ ವಿತರಣೆ, ಶೇ.85.76 ಸಾಧನೆ
ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಹಳ್ಳಿಯಿಂದ ಪಟ್ಟಣಗಳಿಗೆ ವಲಸೆ ಹೋಗುವ ಬದಲು ಸ್ವಂತ ಗ್ರಾಮದಲ್ಲಿಯೇ ಉದ್ಯೋಗ ಪಡೆದು ನೆಮ್ಮದಿಯ ಜೀವನ ನಡೆಸಲು ಈ ಯೋಜನೆ ಸಹಕಾರಿಯಾಗಲಿದೆ. ಆದ್ದರಿಂದ ಅರ್ಹ ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಜಾಬ್ ಕಾರ್ಡ್ ಮೇಳದ ಅಂಗವಾಗಿ ಯೋಜನೆಯಡಿ ಹೊಸದಾಗಿ ಉದ್ಯೋಗ ಚೀಟಿ ನೋಂದಾಯಿಸಿಕೊಳ್ಳಲು ಸ್ಥಳದಲ್ಲಿಯೇ ಅವಕಾಶ ಕಲ್ಪಿಸಲಾಯಿತು. ಹೊಸದಾಗಿ ನೋಂದಾಯಿಸಿಕೊಂಡ ಕುಟುಂಬಗಳಿಗೆ ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತು. ಇ-ಕೆವೈಸಿ ಬಾಕಿಯಿದ್ದ ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಅಲ್ಲದೆ, ಈಗಾಗಲೇ ಇರುವ ಉದ್ಯೋಗ ಚೀಟಿಗಳಿಗೆ ಹೊಸ ಸದಸ್ಯರ ಹೆಸರು ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣಪತಿ ಪಿಲ್ಲೋಜಿ, ಗ್ರಾಪಂ ಮಾಜಿ ಸದಸ್ಯ ಪ್ರದೀಪ್ ಚವ್ಹಾಣ, ತಾಂತ್ರಿಕ ಸಂಯೋಜಕ ಅಲೋಕ್ ನಾಯ್ಕ, ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಸಾಮಾಜಿಕ ಲೆಕ್ಕ ಪರಿಶೋಧನೆ ಸಂಯೋಜಕ ಮಾರುತಿ, ಡಿಇಒ ಮಂಜುನಾಥ್ ಮಾಯಣ್ಣನವರ, ಬಿಎಫ್‌ಟಿ ಯುವರಾಜ್, ಮಂಜುನಾಥ ಸೇರಿದಂತೆ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




