ತಲಮಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿಜಿರಾಮ್ ಜಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾರ್ಚ್ ತಿಂಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಆರಂಭಿಸಿದ ಸಂದರ್ಭದಲ್ಲಿ ಮಸ್ಟರ್ ರೋಲ್ ನೋಂದಣಿ, ಆನ್‌ಲೈನ್ ದಾಖಲಾತಿ ಹಾಗೂ ವೇತನ ದಾಖಲೆಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳಿಂದ ರಿಹನುದಿನ ಗುಂಪಿನ ಕಾರ್ಮಿಕರಿಗೆ ಕೆಲಸ ಮಾಡಿದ ಕೂಲಿ ಪಾವತಿಯಾಗಿಲ್ಲ. ಈ ಕುರಿತು ಪಂಚಾಯಿತಿಗೆ ಮನವಿ ಮಾಡಿದಾಗ ರಿ-ಎನ್‌ಎಂಆರ್ ಹಾಕಿ ಕೆಲಸ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಬಾಕಿ ವೇತನ ಇನ್ನೂ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಲಮಾರಿಯಿಂದ ಸುಮಾರು 25 ಕಿ.ಮೀ. ದೂರದ ಇಡಪನೂರು ಗ್ರಾಮದಲ್ಲಿ ಪದೇಪದೇ ಕೆಲಸ ನೀಡಲಾಗುತ್ತಿದ್ದು, ಇದರಿಂದ ಕಾರ್ಮಿಕರಿಗೆ ಪ್ರತಿದಿನ ಸುಮಾರು 50 ರೂ.ಸಾರಿಗೆ ವೆಚ್ಚವಾಗುತ್ತಿದೆ. ಸ್ಥಳೀಯವಾಗಿ ಕೆಲಸ ನೀಡಬೇಕು. ಅನಿವಾರ್ಯವಾಗಿ ಬೇರೆ ಗ್ರಾಮದಲ್ಲಿ ಕೆಲಸ ನೀಡಿದರೆ ಸೂಕ್ತ ಸಾರಿಗೆ ವೆಚ್ಚವನ್ನು ಪಂಚಾಯಿತಿ ಭರಿಸಬೇಕು ಎಂದು ಆಗ್ರಹಿಸಿದರು.
ಜುಲೈ ತಿಂಗಳಲ್ಲಿ ವಿ.ಬಿ.ಜಿ. ರಾಮ್ ಜಿ ಯೋಜನೆಯಡಿ ಕೆಲಸ ಮಾಡಿರುವ ಕಾರ್ಮಿಕರ ಕೂಲಿ ಹಣವೂ ಇನ್ನೂ ಖಾತೆಗಳಿಗೆ ಜಮೆಯಾಗಿಲ್ಲ. ಬರಗಾಲದ ಪರಿಸ್ಥಿತಿಯಲ್ಲಿ ಕೃಷಿ ಚಟುವಟಿಕೆಗಳು ಕುಂಠಿತವಾಗಿರುವುದರಿಂದ ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿದ್ದು, ಬಾಕಿ ಕೂಲಿಯನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಯೋಜನೆಯಡಿ ಒಂದು ಗುಂಪಿನ ಕಾರ್ಮಿಕರು ಎಷ್ಟು ಪ್ರಮಾಣದ ಕೆಲಸ ಮಾಡಬೇಕು ಎಂಬುದನ್ನು ತಾಂತ್ರಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಷ್ಟಪಡಿಸಬೇಕು. ಮಣ್ಣು ಅಗೆಯುವುದರ ಜತೆಗೆ ತೆಗೆದ ಮಣ್ಣನ್ನು ಎಲ್ಲಿ ಹಾಗೂ ಎಷ್ಟು ಪ್ರಮಾಣದಲ್ಲಿ ಹಾಕಲಾಗಿದೆ ಎಂಬುದನ್ನೂ ಪರಿಗಣಿಸಿ ಸಮರ್ಪಕವಾಗಿ ಅಳತೆ ಮಾಡಬೇಕು. ಪದೇಪದೇ ಎದುರಾಗುತ್ತಿರುವ ತಾಂತ್ರಿಕ ಹಾಗೂ ಆನ್‌ಲೈನ್ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕ ಸೇರಿದಂತೆ ರಾಯಚೂರು ಜಿಲ್ಲೆಯಲ್ಲೂ ಬರಗಾಲದ ಪರಿಸ್ಥಿತಿ ಇರುವುದರಿಂದ ಕೃಷಿ ಚಟುವಟಿಕೆಗಳು ಕಡಿಮೆಯಾಗಿವೆ. ಹೀಗಾಗಿ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಉದ್ಯೋಗದ ಅಗತ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿ.ಬಿ.ಜಿ. ರಾಮ್ ಜಿ ಯೋಜನೆಯಡಿ ಮಾನವ ದಿನಗಳನ್ನು 200 ಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಬಾಕಿ ಇರುವ ವೇತನ ಮತ್ತು ಸಾರಿಗೆ ವೆಚ್ಚವನ್ನು ಕೂಡಲೇ ಪಾವತಿಸಿ, ತಲಮಾರಿ ಗ್ರಾಮದ ವ್ಯಾಪ್ತಿಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಒದಗಿಸುವುದು ಸೇರಿದಂತೆ ಕಾರ್ಮಿಕರ ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಸಂಘಟನೆ ಒತ್ತಾಯಿಸಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಲ್ಲಾಪುರ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲನಗೌಡ, ರಿಯಾನುದ್ದಿನ್, ಭೀಮಣ್ಣ, ಮಹ್ಮದ್ ಗೌಸ್, ಇಲಿಯಾಸ್, ಸುಜನ್ ಸೇರಿದಂತೆ ಅನೇಕರಿದ್ದರು.




