ಭಾರತೀಯ ರೈಲ್ವೆ ಖಾಸಗೀಕರಣ ಮತ್ತು ವ್ಯಾಪಾರೀಕರಣ ವಿರೋಧಿಸಿ ದೇಶ ವ್ಯಾಪಿ ಸಹಿ ಸಂಗ್ರಹ ಚಳುವಳಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಮೈಸೂರಿನಲ್ಲೂ ಕೂಡ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಝೇಷನ್ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಭಾರತ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮವಾಗಿರುವ ಭಾರತೀಯ ರೈಲ್ವೆಯನ್ನು ಕ್ರಮೇಣವಾಗಿ ದುರ್ಬಲಗೊಳಿಸಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದ ಪ್ರತಿ ವರ್ಷ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಕ್ರಮಗಳು ರೈಲ್ವೆ ಪ್ರಯಾಣಿಕರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿವೆ. ದೂರಯಾನದ ರೈಲು ಪ್ರಯಾಣವು ಅಸಾಧ್ಯವಾಗಿದೆ. ಸಾಮಾನ್ಯ ಜನರು ಅಸಹನೀಯ ಪರಿಸ್ಥಿತಿಗಳಲ್ಲಿ ಪ್ರಯಾಣಿಸುವಂತಾಗಿದೆ ಎಂದು ತಿಳಿಸಿದರು.
ಜನಸಾಮಾನ್ಯರ ಬೃಹತ್ ಪ್ರಮಾಣದ ತೆರಿಗೆ ಹಣದಿಂದ ದಶಕಗಳಿಂದ ಭಾರತೀಯ ರೈಲ್ವೆಯನ್ನು ಕಟ್ಟಿ ಬೆಳೆಸಿ,ಪ್ರತಿ ಬಜೆಟ್‌ನಲ್ಲಿ ವಿಸ್ತರಿಸುತ್ತಾ ಬರಲಾಗಿತ್ತು. ಆದರೀಗ ಕ್ರಮೇಣವಾಗಿ ದುರ್ಬಲಗೊಳಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣದಲ್ಲಿ ಸುರಕ್ಷತೆ ಎಂಬುದು ತೀವ್ರ ಆತಂಕಕಾರಿ ವಿಚಾರ. ಭದ್ರತೆ ಇಲ್ಲ, ಅತ್ಯಾಚಾರ, ಅನಾಚಾರ, ದರೋಡೆ,ಕೊಲೆ ಇತ್ಯಾದಿ ಘಟನೆಗಳು ಘಟಿಸಿವೆ. ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಶುಚಿತ್ವ ನಿರ್ವಹಣೆ ಮತ್ತು ಕೆಲವು ಭದ್ರತೆಗೆ ಸಂಬಂಧಿಸಿದ ವಿಭಾಗಗಳನ್ನು ಈಗಾಗಲೇ ಖಾಸಗಿ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗುವಂತೆ ಅನರ್ಹರಾದ ಅಥವಾ ಸೂಕ್ತ ಅರ್ಹತೆ ಇಲ್ಲದ ಜನರನ್ನು ನೇಮಿಸಿಕೊಳ್ಳುತ್ತಾರೆ. ಇನ್ನೂ ಲೋಕೋ ಪೈಲಟ್‌ಗಳ ಕೊರತೆಯೂ ಇದೆ.
ರೈಲ್ವೆಯಲ್ಲಿ 3.5 ಲಕ್ಷ ಸಿಬ್ಬಂದಿ ಕೊರತೆ ಇದೆ. ಗ್ರೂಪ್ ಸಿ ಮತ್ತು ಲೆವೆಲ್ 1 ವರ್ಗಗಳಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಜೂನ್ 2023 ರ ಅಂಕಿಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 1.57 ಲಕ್ಷ ಹುದ್ದೆಗಳು ಖಾಲಿ ಇವೆ. 2019 ರಿಂದ 2023 ರವರೆಗೆ ಒಟ್ಟು 162 ರೈಲು ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ 118 ಹಳಿತಪ್ಪಿದ್ದು ಮತ್ತು ಹದಿನಾರು ಒಂದಕ್ಕೊಂದು ಡಿಕ್ಕಿ ಅಪಘಾತ ಸಂಭವಿಸಿವೆ ಎಂದು ತಿಳಿಸಿದರು.
ಎಲ್ಲಾ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ರೈಲ್ವೆ ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಝೇಷನ್ ಮುಖಂಡರು ಆಗ್ರಹಿಸಿದ್ದಾರೆ.
ಸಹಿ ಸಂಗ್ರಹ ಚಳುವಳಿಯಲ್ಲಿ ಎಐಟಿವೈಓ ಜಿಲ್ಲಾಧ್ಯಕ್ಷ ಸುನಿಲ್ ಟಿ ಆರ್, ಕಾರ್ಯದರ್ಶಿ ಸುಮಾ ಎಸ್, ನೀತುಶ್ರೀ, ಸಿಂಚನ, ಶಿವು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಗ್ರಹಗಳು
- ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ನಿಲ್ಲಿಸಬೇಕು
- ಎಲ್ಲಾ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ ಮತ್ತು ರೈಲ್ವೆ ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು
- ರೈಲುಗಳಲ್ಲಿ ಕಾಯ್ದಿರಿಸದ (UR) ಮತ್ತು ಸೆಕೆಂಡ್ ಕ್ಲಾಸ್ ಸ್ಲೀಪರ್ (SL) ಕೋಚ್‌ಗಳನ್ನು ಹೆಚ್ಚಿಸಬೇಕು
- ವಲಸೆ ಕಾರ್ಮಿಕರಿಗಾಗಿ ಸಂಪೂರ್ಣ ಕಾಯ್ದಿರಿಸದ ರೈಲುಗಳನ್ನು ಓಡಿಸಬೇಕು.
- ಹಿರಿಯ ನಾಗರಿಕರ ರಿಯಾಯಿತಿಗಳನ್ನು ಮರುಸ್ಥಾಪಿಸಿ. ತತ್ಕಾಲ್ ಪ್ರೀಮಿಯಂ ಸುಲಿಗೆಯನ್ನು ಕೊನೆಗೊಳಿಸಬೇಕು.
- ಬುಕ್ ಮಾಡಿದ ಟಿಕೆಟ್‌ಗಳ ಮೇಲಿನ ರದ್ದತಿ ಶುಲ್ಕಗಳನ್ನು ತೆಗೆದುಹಾಕಬೇಕು.