ಅರಣ್ಯ ರಾಷ್ಟ್ರೀಯ ಸಂಪತ್ತಾಗಿದ್ದು ಜನರನ್ನು ಹೊರಗಿಟ್ಟು ಪರಿಸರ ರಕ್ಷಣೆ ಮಾಡುವುದು ಕಷ್ಟಸಾಧ್ಯ, ಬಡವರನ್ನು ಬೀದಿಗೆ ತಳ್ಳಿ ಶ್ರೀಮಂತರನ್ನು ರಕ್ಷಿಸುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಹೊಂದಾಣಿಕೆ ಖಂಡನೀಯ. ಭೂಮಿ-ವಸತಿ ಇಲ್ಲದವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದ ಜನಶಕ್ತಿ ರಾಜ್ಯ ಸಮಿತಿಯ ಕಾರ್ಯದರ್ಶಿ ಕೆ. ಎಲ್ ಅಶೋಕ್ ಹೇಳಿದರು.
ಚಿಕ್ಕಮಗಳೂರಿನಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಜಮೀನಿನಿಂದಲೇ ಸಮೀಕ್ಷೆ ನಡೆಸಲಿ. ಒತ್ತುವರಿ ತೆರವು ಕಾರ್ಯ ಅಲ್ಲಿಂದಲೇ ಆರಂಭವಾಗಲಿ ಎಂದು ಕರ್ನಾಟಕ ಜನಶಕ್ತಿ ಒತ್ತಾಯಿಸಿದ್ದು, ಬದುಕಿನ ನಿರ್ವಹಣೆಗಾಗಿ ಬಡವರು ಮಾಡಿರುವ ಒತ್ತುವರಿಯನ್ನು ಯಾವುದೇ ಕಾರಣಕ್ಕೂ ತೆರವು ಮಾಡದಂತೆ ಆಗ್ರಹಿಸಿದರು.
ಸಣ್ಣ ಹಿಡುವಳಿದಾರರು ಕಳೆದ ಅನೇಕ ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ ಗಿಡಗಳನ್ನು ಏಕಾಏಕಿ ಕಡಿದು ಹಾಕುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೆ ಎಲ್ ಅಶೋಕ್, ಅರಣ್ಯ ಇಲಾಖೆ ಮಾನವೀಯ ನೆಲೆಗಟ್ಟಿನಲ್ಲಿ ವರ್ತಿಸಬೇಕು ಎಂದು ತಿಳಿಸಿದರು.
ಪರಿಸರ ನಾಶ ಮತ್ತು ವಿಕೋಪಕ್ಕೆ ಬಡವರು ಮಾಡಿದ ಕೃಷಿ ಚಟುವಟಿಕೆ ಕಾರಣವಲ್ಲ. ಬದಲಾಗಿ ಕಾರ್ಪೊರೇಟ್ ಸಂಸ್ಥೆಗಳು, ಗಣಿಗಾರಿಕೆ ಹಾಗೂ ಅವೈಜ್ಞಾನಿಕ ಕಾಮಗಾರಿಗಳು ಎನ್ನುವುದನ್ನು ಅರಣ್ಯ ಸಚಿವರು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಒತ್ತುವರಿ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು. ಕಂದಾಯ ಭೂಮಿ ಒತ್ತುವರಿಯನ್ನು ಗುತ್ತಿಗೆ ನೀಡುವ ಸರ್ಕಾರದ ಕ್ರಮ ಖಂಡಿಸಿ, ಸರ್ಕಾರ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಆಗಸ್ಟ್ 21ರಂದು ಒತ್ತುವರಿ ತೆರವು ವಿರೋಧಿಸಿ ಹಾಗೂ ಪರಿಸರ ಸಂರಕ್ಷಣೆ ಮತ್ತು ಭೂಮಿ ಇಲ್ಲದವರಿಗೆ ಭೂಮಿ ನೀಡಲು ಒತ್ತಾಯಿಸಿ ಕರ್ನಾಟಕ ಜನಶಕ್ತಿಯ ವತಿಯಿಂದ ಚಿಕ್ಕಮಗಳೂರಿನ ಆಝಾದ್ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿಯ ಗೌಸ್ ಮೊಹಿದ್ದೀನ್, ಮುನ್ನ, ಪುಟ್ಟಸ್ವಾಮಿ, ಗಣೇಶ್,ದೇವರಾಜು ಮತ್ತಿತರರಿದ್ದರು.