ಬೇಸಿಗೆಯ ಬಿಸಿಗಾಳಿ(Heat wave) ಗೆ ಅರಮನೆ ನಗರಿ ಜನ ಹೈರಾಣಾಗಿದ್ದಾರೆ. ನಿನ್ನೆ 40 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಇಂದು 36 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಹೀಟ್ ಸ್ಟ್ರೋಕ್‌ನಿಂದ ತತ್ತರಿಸಿದ ಮೈಸೂರಿನ ಜನರಿಗೆ ಮಳೆ ತಂಪೆರೆಯುವುದು ದೂರದ ಮಾತಾಗಿದ್ದು ಸದ್ಯದಲ್ಲಿ ಮಳೆಯಾಗುವ ಸೂಚನೆಗಳಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉಷ್ಣ ಅಲೆಯಿಂದ ಎಳೆಯ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ನಿರ್ಜಲೀಕರಣದಿಂದಾಗಿ ವಿವಿಧ ಆರೋಗ್ಯ ಸಮಸ್ಯೆಯಿಂದ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಮೈಸೂರಿನ ಕೆ ಆರ್ ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಪಿಸಲಾಗಿದೆ.
ಇದನ್ನೂ ಓದಿ ಹವಾಮಾನ ವರದಿ | ರಾಜ್ಯದಲ್ಲಿ ʼಹೀಟ್ ವೇವ್ʼ ಜೊತೆ ಭಾರಿ ಮಳೆಯ ಎಚ್ಚರಿಕೆ ಕೊಟ್ಟ IMD
ಕೆ ಆರ್ ಆಸ್ಪತ್ರೆಯಲ್ಲಿ 20 ಬೆಡ್‌ಗಳು ಹಾಗೂ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ 15 ಬೆಡ್‌ಗಳನ್ನು ಉಷ್ಣ ಅಲೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ರೋಗಿಗಳ ಚಿಕಿತ್ಸೆಗೆಂದು ಮೀಸಲಿಡಲಾಗಿದೆ. ಅಗತ್ಯ ವೈದ್ಯಕೀಯ ಸಿಬ್ಬಂದಿಗಳನ್ನು ಚಿಕಿತ್ಸೆಗೆ ನಿಯೋಜಿಸಲಾಗಿದ್ದು, ಮಕ್ಕಳ ಚಿಕಿತ್ಸಾ ಕೊಠಡಿಗೆ ಫ್ಯಾನ್ ಹಾಗೂ ಎಸಿ ವ್ಯವಸ್ಥೆ ಕಲ್ಪಿಸಲಾಗಿದೆ.
ಆರೋಗ್ಯ ಇಲಾಖೆಯು ಬಿಸಿಲಿನಿಂದ ಸಾರ್ವಜನಿಕರು ಸುರಕ್ಷಿತವಾಗಿರುವಂತೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದು. ಹೀಟ್ ವೇವ್ ಪರಿಣಾಮದ ಕುರಿತು ಮುನ್ನೆಚ್ಚರಿಕೆ ನೀಡಿದೆ.




