ನಾರಿಶಕ್ತಿ ವಂದನಾ ಅಧಿನಿಯಮ–2023 ಅನ್ನು ಯಾವುದೇ ಗೊಂದಲವಿಲ್ಲದೆ ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ ಮಾತನಾಡಿ, ʼನಾರಿ ಶಕ್ತಿ ವಂದನಾ ಅಧಿನಿಯಮ ಕುರಿತು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮಹಿಳಾ ಮೀಸಲಾತಿ ದಶಕಗಳಿಂದ ರಾಜಕೀಯ ಚರ್ಚೆಯ ವಿಷಯವಾಗಿದ್ದು, ಪುರುಷ ರಾಜಕೀಯ ನಾಯಕರೊಂದಿಗೆ ಮಹಿಳೆಯರು ಸಮಾನವಾಗಿ ಸ್ಪರ್ಧಿಸಲು ಮೀಸಲಾತಿ ಅತ್ಯವಶ್ಯಕವಾಗಿದೆ. ಇದೇ ಕಾರಣಕ್ಕೆ ಮಹಿಳಾ ನಾಯಕರು ಮತ್ತು ಕಾರ್ಯಕರ್ತೆಯರು ಹಲವು ವರ್ಷಗಳಿಂದ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲʼ ಎಂದು ಹೇಳಿದರು.
ʼಕಾನೂನಿನ ಪ್ರಕಾರ 2026ರ ಜನಗಣತಿ ನಂತರ 2029ರ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರಬೇಕಿದೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಏಪ್ರಿಲ್ 15, 16 ಮತ್ತು 17ರಂದು ಲೋಕಸಭೆ ಅಧಿವೇಶನ ಕರೆದು ತಿದ್ದುಪಡಿ ಕಾನೂನು ತರಲು ಮುಂದಾಗಿದ್ದು, ಅದರ ಕುರಿತು ವಿರೋಧ ಪಕ್ಷಗಳಿಗೆ ಹಾಗೂ ಮಾಧ್ಯಮಗಳಿಗೆ ಸ್ಪಷ್ಟ ಮಾಹಿತಿ ನೀಡಿಲ್ಲʼ ಎಂದು ಅವರು ಆರೋಪಿಸಿದರು.
ʼಪ್ರಸ್ತುತ ದೇಶದಲ್ಲಿರುವ 543 ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಏರಿಸಿ ಹೆಚ್ಚುವರಿ ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣ ಭಾರತದ ರಾಜ್ಯಗಳಿಗೆ ದೊಡ್ಡ ಅನ್ಯಾಯವಾಗುತ್ತದೆ. ಉತ್ತರ ಭಾರತದ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚುವರಿ ಸ್ಥಾನಗಳು ದೊರೆಯುವ ಮೂಲಕ ಲೋಕಸಭೆಯಲ್ಲಿ ಅವರ ಸಂಖ್ಯಾಬಲ ಮತ್ತಷ್ಟು ಹೆಚ್ಚುತ್ತದೆʼ ಎಂದು ಅವರು ಹೇಳಿದರು.
ಈ ಕ್ರಮದಿಂದ ದಕ್ಷಿಣ ಭಾರತದ ರಾಜ್ಯಗಳ ಪ್ರತಿನಿಧಿತ್ವ ಕುಗ್ಗುವ ಸಾಧ್ಯತೆ ಇರುವುದರಿಂದ ಇದನ್ನು ಮಹಿಳಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಈಗಿರುವ 543 ಲೋಕಸಭಾ ಕ್ಷೇತ್ರಗಳಲ್ಲಿಯೇ 33 ಶೇಕಡಾ ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ ಮಾತನಾಡಿ, ʼಕಾಂಗ್ರೆಸ್ ಪಕ್ಷ ಯಾವಾಗಲೂ ಮಹಿಳೆಯರ ಪರವಾಗಿದೆ. ಅದಕ್ಕಾಗಿ 2023ರ ನಾರಿ ಶಕ್ತಿ ವಂದನಾ ಬಿಲ್ ಜಾರಿಗೆ ಕಾಂಗ್ರೆಸ್ ಸಹಕಾರ ನೀಡಿದ್ದು, ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ತಕ್ಷಣ ನೀಡಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಡಾ.ರಾಜಕುಮಾರ್ ಬಹುಮುಖ ಪ್ರತಿಭೆಯ ನಟ
ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ಜಾರ್ಜ್, ವಿದ್ಯಾ ತುಗಾಂವೆ, ವಿಜಯಲಕ್ಷ್ಮಿ, ಶಾಹೀನ್ ಬೇಗಂ, ಸಂಗೀತಾ ಕಾರಬಾರಿ ಸೇರಿದಂತೆ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.





