ಹೆಣ್ಣು ಮಗು ಬೆಳೆದು ಮುತ್ತಿನಂತಾಗಬೇಕು ಎನ್ನುವ ಆಶಯ ಸಾಕಾರಗೊಳ್ಳಬೇಕಾದರೆ, ಬಾಲ್ಯದಿಂದಲೇ ಆಕೆಗೆ ವಿವಾಹದ ನೊಗ ಹೇರುವ ಬದಲು ಉನ್ನತ ಶಿಕ್ಷಣ ಕೊಡಿಸುವತ್ತ ಪೋಷಕರು ಹೆಚ್ಚಿನ
ಗಮನ ಹರಿಸಬೇಕು ಹಾಗೂ ಉತ್ತಮ ಸಮಾಜ ನಿರ್ಮಿಸಲು ಚಿಂತಿಸಬೇಕು” ಎಂದು ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ವೇಲಾ ಡಿ.ಕೆ. ತಿಳಿಸಿದರು.
ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ” ಕಾನೂನು ಅರಿವು” ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಹಳೆಯ ಪದ್ಧತಿಗಳನ್ನು ಪಾಲಿಸಬೇಕೇ ಅಥವಾ ಹಿರಿಯರು ಹೇಳಿರುವುದನ್ನು ಪಾಲಿಸಬೇಕೇ? ಎನ್ನುವುದು ಇಂದಿನ ಮುಖ್ಯ ವಿಷಯವಾಗಿದೆ. ಆದರೆ, ನಾವು ಆಚರಿಸುತ್ತಿರುವ ಪದ್ಧತಿಗಳು ಇಂದಿನ ಕಾಲಘಟ್ಟಕ್ಕೆ ಸರಿ ಇದೆಯಾ ಇಲ್ಲವೋ ಎನ್ನುವುದನ್ನು ವಿವೇಚನೆಯಿಂದ ಆಲೋಚಿಸುವುದು ಅತ್ಯಂತ ಮುಖ್ಯ” ಎಂದು ಅಭಿಪ್ರಾಯಪಟ್ಟರು.

“ಹದಿಹರೆಯದ (12–18 ವರ್ಷ) ಅವಧಿ ಮಕ್ಕಳ ಜೀವನದಲ್ಲಿ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಸಹಜವಾಗಿ ಕಂಡುಬರುತ್ತವೆ. ಈ ಹಂತದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ಪ್ರೀತಿ ಮತ್ತು ಸರಿಯಾದ ಮಾರ್ಗದರ್ಶನ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ” ಎಂದು ತಿಳಿಸಿದರು.
ಸಮಾಜದಲ್ಲಿ ಅನಿಷ್ಟ ಪದ್ಧತಿಯಾಗಿದ್ದ ಹಿಂದಿನ ‘ಸತಿ ಪದ್ಧತಿ’ಯನ್ನು ನಿರ್ಮೂಲನೆ ಮಾಡಿದಂತೆ, ಬಾಲ್ಯ ವಿವಾಹವೂ ಕೆಟ್ಟ ಪದ್ಧತಿಯಾಗಿದೆ. ಅದನ್ನು ಬೇರುಸಹಿತ ಕಿತ್ತೊಗೆಯಲು ಪ್ರತಿಯೊಬ್ಬ ನಾಗರೀಕನು ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣನವರ ಮಾತನಾಡಿ, “ಮಾನವೀಯ ಮೌಲ್ಯಗಳೇ ನಿಜವಾದ ಧರ್ಮವಾಗಿದ್ದು, ಹೆಣ್ಣುಮಕ್ಕಳನ್ನು ‘ಅಶುದ್ಧ’ ಎಂದು ಪರಿಗಣಿಸಿ ದೂರವಿಡುವಂತಹ ಆಚರಣೆಗಳು ಮನುಷ್ಯತ್ವಕ್ಕೆ ವಿರೋಧವಾಗಿವೆ. ವೈಜ್ಞಾನಿಕ ಹಾಗೂ ಮಾನವೀಯ ಆಚರಣೆಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ” ಎಂದು ಸಲಹೆ ನೀಡಿದರು.
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, “ಹೆಣ್ಣುಮಕ್ಕಳನ್ನು ‘ಸೂತಕ’ ಎಂಬ ನೆಪದಲ್ಲಿ ಹೊರಗಿಡುವಂತಹ ಅನಿಷ್ಟ ಪದ್ಧತಿಗಳು ಇಂದಿಗೂ ಸಮಾಜದಲ್ಲಿ ಮುಂದುವರಿಯುತ್ತಿರುವುದು ವಿಷಾದನೀಯ. ಸಮಾಜದಲ್ಲಿ ಬದಲಾವಣೆ ಮನೆಯಿಂದಲೇ ಆರಂಭವಾಗಬೇಕು. ಹೆಣ್ಣುಮಕ್ಕಳಿಗೆ ಸಮಾನ ಶಿಕ್ಷಣ ಮತ್ತು ಗೌರವ ನೀಡಿದಾಗ ಮಾತ್ರ ಸಕಾರಾತ್ಮಕ ಬದಲಾವಣೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
“ಬಾಲ್ಯ ವಿವಾಹದಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಮಾಜ ಮೌನವಾಗಿರದೆ ಧ್ವನಿ ಎತ್ತಬೇಕು. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು, ಮೂಢನಂಬಿಕೆಗಳನ್ನು ತೊಡೆದುಹಾಕಿದಾಗ ಮಾತ್ರ ಸುಸಂಸ್ಕೃತ ಮತ್ತು ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ”ಎಂದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಂಚಮಸಾಲಿ ಪೀಠದಲ್ಲಿ ವಿರೋಧಿಗಳ ಬಸವೋತ್ಸವಕ್ಕೆ ಅವಕಾಶ ನೀಡದಿರಲು ಟ್ರಸ್ಟ್ ಮನವಿ
ಕಾರ್ಯಕ್ರಮದಲ್ಲಿ ಹೆಬ್ಬಾಳು ವಿರಕ್ತಮಠದ ಮ.ನಿ.ಪ್ರ ಮಹಾಂತ ರುದ್ರೇಶ್ವರ ಶ್ರೀಗಳು,, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಚಲನಚಿತ್ರ ನಟ ಪೃಥ್ವಿ ಶಾಮನೂರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





