90,000ಕ್ಕೂ ಅಧಿಕ ಅನುಭವಿ ವೈಟ್-ಕಾಲರ್ ವೃತ್ತಿಪರರನ್ನು ಹೊಂದಿರುವ ಮೈಸೂರು, ಬೆಂಗಳೂರಿನ ನಂತರ ಕರ್ನಾಟಕದ ಪ್ರಮುಖ ಟಿಯರ್-2 ತಂತ್ರಜ್ಞಾನ ಮತ್ತು ಪ್ರತಿಭಾ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಹಾಗೂ ಎಕ್ಸ್‌ಫೀನೋ (Xpheno) ಜಂಟಿಯಾಗಿ ಬಿಡುಗಡೆ ಮಾಡಿದ ‘ಮೈಸೂರು: ಬಿಯಾಂಡ್ ಹೆರಿಟೇಜ್-ಸ್ಕಿಲ್ಸ್ & ಟ್ಯಾಲೆಂಟ್ ಲ್ಯಾಂಡ್‌ಸ್ಕೇಪ್’ ವರದಿ ತಿಳಿಸಿದೆ.
ನಗರವು ತನ್ನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಗುರುತನ್ನು ಮೀರಿ, ತಂತ್ರಜ್ಞಾನ, ಕೌಶಲ್ಯ ಮತ್ತು ಉದ್ಯೋಗಾವಕಾಶಗಳ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳು, ಸಮೃದ್ಧ ಪ್ರತಿಭಾ ಸಂಪನ್ಮೂಲ, ಬೆಳೆಯುತ್ತಿರುವ ಉದ್ಯಮಗಳು ಹಾಗೂ ರಾಜ್ಯ ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಯೋಜನೆ ಈ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿ ಹೇಳಿದೆ.
ಕರ್ನಾಟಕ ಸರ್ಕಾರದ ಗೃಹ, ಐಟಿ/ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಮೈಸೂರು ರಾಜ್ಯದ ತಂತ್ರಜ್ಞಾನ ಬೆಳವಣಿಗೆಯ ಮುಂದಿನ ಪ್ರಮುಖ ಕೇಂದ್ರವಾಗಿದ್ದು, ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರದ ಸಹಭಾಗಿತ್ವದ ಮೂಲಕ ನವೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಕೌಶಲ್ಯಯುತ ವೃತ್ತಿಪರರು ಮತ್ತು ಬಲಿಷ್ಠ ಶೈಕ್ಷಣಿಕ ಪರಂಪರೆಯಿಂದ ಮೈಸೂರು ಮುಂದಿನ ಹಲವು ದಶಕಗಳ ಕರ್ನಾಟಕದ ಬೆಳವಣಿಗೆಗೆ ಭದ್ರ ಅಡಿಪಾಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಕ್ಸ್‌ಫೀನೋದ ಸಹ-ಸಂಸ್ಥಾಪಕ ಕಮಲ್ ಕಾರಂತ್ ಮಾತನಾಡಿ, ಬೆಂಗಳೂರಿನ ನಂತರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿ ಮೈಸೂರು ಗುರುತಿಸಿಕೊಂಡಿದೆ. ಅನುಭವಿ ವೃತ್ತಿಪರರು, ಉತ್ತಮ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳ ಹೆಚ್ಚುತ್ತಿರುವ ಆಸಕ್ತಿಯಿಂದ ನಗರದ ಬೆಳವಣಿಗೆಗೆ ಬಲಿಷ್ಠ ನೆಲೆ ಸಿಕ್ಕಿದೆ. ಪ್ರತಿಭೆಗಳ ಹೊರಹರಿವು ಇನ್ನೂ ಇದ್ದರೂ, ಅದರ ಅಂತರ ಕ್ರಮೇಣ ಕಡಿಮೆಯಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ದೇಶೀಯ ಹಾಗೂ ಜಾಗತಿಕ ಕಂಪನಿಗಳ ಹೂಡಿಕೆಯಿಂದ ಮೈಸೂರು ಇನ್ನಷ್ಟು ಪ್ರತಿಭೆಗಳನ್ನು ಆಕರ್ಷಿಸುವ ನಗರವಾಗಲಿದೆ ಎಂದು ತಿಳಿಸಿದರು.
ವರದಿಯ ಪ್ರಕಾರ, ಮೈಸೂರಿನ ಅನುಭವಿ ವೈಟ್-ಕಾಲರ್ ಉದ್ಯೋಗಿಗಳಲ್ಲಿ ಶೇ.37 ಮಹಿಳೆಯರು ಇದ್ದಾರೆ. ಸುಮಾರು ಶೇ.27 ಮಂದಿ 12 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿದ್ದರೆ, ಶೇ.46 ಮಂದಿ ಆರು ವರ್ಷಗಳವರೆಗಿನ ಅನುಭವ ಹೊಂದಿದ್ದಾರೆ. ಇದರಿಂದ ಅನುಭವಿ ನಾಯಕತ್ವದ ಜೊತೆಗೆ ಯುವ ಪ್ರತಿಭೆಗಳೂ ನಗರದಲ್ಲಿ ಸಮೃದ್ಧವಾಗಿ ಲಭ್ಯವಿರುವುದು ಸ್ಪಷ್ಟವಾಗಿದೆ.
ನಗರದಲ್ಲಿ ಐಟಿ/ಐಟಿಇಎಸ್ ಕ್ಷೇತ್ರದಲ್ಲಿ 20,000ಕ್ಕೂ ಹೆಚ್ಚು ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದು, ಇದು ಅತಿದೊಡ್ಡ ಉದ್ಯೋಗ ಕ್ಷೇತ್ರವಾಗಿದೆ. ಇದರ ನಂತರ ಉತ್ಪಾದನಾ, ಬಿಎಫ್‌ಎಸ್‌ಐ (BFSI), ಆರೋಗ್ಯ ಹಾಗೂ ಆಟೋಮೊಬೈಲ್ ಕ್ಷೇತ್ರಗಳು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ಇಂಜಿನಿಯರಿಂಗ್ ವಿಭಾಗದಲ್ಲೇ ಸುಮಾರು 15,000 ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೌಶಲ್ಯದ ದೃಷ್ಟಿಯಿಂದ ಮೈಸೂರಿನಲ್ಲಿ ಸುಮಾರು 25,000 ಪ್ರೋಗ್ರಾಮಿಂಗ್ ವೃತ್ತಿಪರರು, 21,000 ವ್ಯವಹಾರ ಕೌಶಲ್ಯ ಪರಿಣತರು, 12,500 ಡೇಟಾಬೇಸ್ ತಜ್ಞರು, 12,000 ಹಣಕಾಸು ಮತ್ತು ಲೆಕ್ಕಪತ್ರ ವೃತ್ತಿಪರರು ಹಾಗೂ 6,000 ಕ್ಯೂಎ/ಕ್ಯೂಸಿ (QA/QC) ಪರಿಣತರು ಇದ್ದಾರೆ. ಈ ಪ್ರಮುಖ ಕೌಶಲ್ಯ ವಿಭಾಗಗಳು ವಾರ್ಷಿಕ ಶೇ.11ರಿಂದ ಶೇ.19ರವರೆಗೆ ಬೆಳವಣಿಗೆ ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ಅನುಭವಿ ಉದ್ಯೋಗಿಗಳಲ್ಲಿ ಸುಮಾರು ಶೇ.30 ಮಂದಿ ಕಂಪ್ಯೂಟರ್ ಸೈನ್ಸ್ ಹಿನ್ನೆಲೆಯವರು ಆಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (NIE) ಹಾಗೂ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ನಗರದ ಪ್ರತಿಭಾ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ಕಳೆದ ಒಂದು ವರ್ಷದಲ್ಲಿ 3,200 ಅನುಭವಿ ವೃತ್ತಿಪರರು ಇತರ ನಗರಗಳಿಂದ ಮೈಸೂರಿಗೆ ಬಂದಿದ್ದರೆ, ಸುಮಾರು 4,500 ಮಂದಿ ಮುಖ್ಯವಾಗಿ ಬೆಂಗಳೂರಿಗೆ ತೆರಳಿದ್ದಾರೆ. ಆದಾಗ್ಯೂ, ಪ್ರತಿಭೆಗಳ ಒಳಹರಿವು ಮತ್ತು ಹೊರಹರಿವಿನ ನಡುವಿನ ಅಂತರ ಕ್ರಮೇಣ ಕಡಿಮೆಯಾಗುತ್ತಿರುವುದು ಮೈಸೂರಿನ ಬೆಳವಣಿಗೆಯ ಸೂಚಕವಾಗಿದೆ.
ದೇಶದಾದ್ಯಂತ 44,000ಕ್ಕೂ ಹೆಚ್ಚು ವೃತ್ತಿಪರರು ಮೈಸೂರಿನಲ್ಲಿ ಉದ್ಯೋಗ ಪಡೆಯಲು ಆಸಕ್ತಿ ತೋರಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಮತ್ತೊಂದೆಡೆ, 16,000 ಮೈಸೂರಿನ ವೃತ್ತಿಪರರು ಇತರ ನಗರಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುತ್ತಿದ್ದಾರೆ. ಇದು ಮೈಸೂರಿನ ಮೇಲಿನ ಉದ್ಯೋಗಿಗಳ ವಿಶ್ವಾಸವನ್ನು ತೋರಿಸುವುದರ ಜೊತೆಗೆ, ಸ್ಥಳೀಯ ಮಟ್ಟದಲ್ಲಿ ಇನ್ನಷ್ಟು ಉದ್ಯೋಗ ಸೃಷ್ಟಿಸುವ ಅಗತ್ಯವನ್ನೂ ಎತ್ತಿ ತೋರಿಸಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ತಂಬಾಕು ಮುಖ್ಯವಲ್ಲ; ತಂಬಾಕು ಬೆಳೆಗಾರರ ಬದುಕು ಮುಖ್ಯ
ನೀತಿ ಬೆಂಬಲ, ಉದ್ಯಮಗಳ ವಿಸ್ತರಣೆ, ಕೌಶಲ್ಯಾಭಿವೃದ್ಧಿ ವ್ಯವಸ್ಥೆ ಮತ್ತು ಹೆಚ್ಚುತ್ತಿರುವ ಉದ್ಯೋಗಾವಕಾಶಗಳ ನೆರವಿನಿಂದ ಮೈಸೂರು ಕೇವಲ ಪ್ರತಿಭೆಗಳ ಮೂಲವಾಗಿರುವ ನಗರವಲ್ಲ; ಭಾರತದ ಅತ್ಯಂತ ಭರವಸೆಯ ಟಿಯರ್-2 ತಂತ್ರಜ್ಞಾನ ನಗರಗಳಲ್ಲಿ ಒಂದಾಗಿ ವೇಗವಾಗಿ ಬೆಳೆಯುತ್ತಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.




