ಸಾಹಸಸಿಂಹ-ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು ಅದ್ಧೂರಿಯಾಗಿ ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಉದ್ಬೂರ್ ಗೇಟ್ ಸಮೀಪದ ಡಾ. ವಿಷ್ಣುವರ್ಧನ್ ಸ್ಮಾರಕದಲ್ಲಿ ಬೆಳಗ್ಗೆ 11.30ಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, 5 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಸಾಂಪ್ರದಾಯಿಕ ಹೊಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ವಿಷ್ಣು ಸ್ಮಾರಕ ಸೇನಾ ಸಮಿತಿಯ ಅಧ್ಯಕ್ಷ ಬೆಂಕಿ ಮಹದೇವ್ ತಿಳಿಸಿದರು.
ನಗರದ ತ್ಯಾಗರಾಜ ರಸ್ತೆಯ ಪತ್ರಕರ್ತರ ಭವನದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯೂ ಡಾ. ವಿಷ್ಣುವರ್ಧನ್ ಅವರ ಜನ್ಮದಿನವನ್ನು ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಡಾ. ವಿಷ್ಣುವರ್ಧನ್ ಅವರು ಕೇವಲ ಶ್ರೇಷ್ಠ ನಟರಾಗಿರದೆ, ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳು ಹಾಗೂ ಸರಳ ವ್ಯಕ್ತಿತ್ವದ ಮೂಲಕ ಜನಮನ ಗೆದ್ದ ಮಹಾನ್ ವ್ಯಕ್ತಿತ್ವವಾಗಿದ್ದರು. ಅವರ ಆದರ್ಶ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ವಿಷ್ಣುವರ್ಧನ್ ಅವರ ಕಲಾ ಸೇವೆ, ಕನ್ನಡ ಚಿತ್ರರಂಗಕ್ಕೆ ನೀಡಿದ ಅಮೋಘ ಕೊಡುಗೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಸ್ಮರಿಸಲಾಗುವುದು. ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು, ಸಮಾಜಸೇವಕರು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಶಾಸಕರಾದ ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ನಾಗೇಂದ್ರ, ಕಾಂಗ್ರೆಸ್ ಮುಖಂಡ ಚೇತನ್ ವಿಷಕಂಠ, ಊರಿಗೆ ಉಪಕಾರಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಜಿ.ಆರ್. ಮಣಿ ಹಾಗೂ ಚಲನಚಿತ್ರ ನಟ ಸುಂದರ್ ರಾಜ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಚಲನಚಿತ್ರ ಮತ್ತು ರಂಗಭೂಮಿ ಕ್ಷೇತ್ರದ ಹಲವು ಕಲಾವಿದರು ಸಹ ಉಪಸ್ಥಿತರಿರಲಿದ್ದಾರೆ ಎಂದರು.
ಡಾ. ವಿಷ್ಣುವರ್ಧನ್ ಅವರ ಜನ್ಮದಿನವನ್ನು ಕೇವಲ ಸಂಭ್ರಮದ ಆಚರಣೆಯಾಗಿ ನೋಡದೆ, ಸಮಾಜ ಸೇವೆಯ ಸಂಕಲ್ಪದೊಂದಿಗೆ ಆಚರಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಘಟಕರು ಮನವಿ ಮಾಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ‘ಮೈಸೂರು ಚಲೋ’: ಪ್ರಜಾರಾಜ್ಯಕ್ಕಾಗಿ ಹೋರಾಡಿ ಬಲಿಯಾದ ಧೀರ ಬಾಲಕ ಬಾಣಾವರದ ರಾಮಸ್ವಾಮಿ
ಪತ್ರಿಕಾಗೋಷ್ಠಿಯಲ್ಲಿ ಡಾ. ವಿಷ್ಣು ಸ್ಮಾರಕ ಸೇನಾ ಸಮಿತಿಯ ಗೌರವಾಧ್ಯಕ್ಷೆ ಶಾಂತಕುಮಾರಿ, ಎಂ.ಡಿ. ಪಾರ್ಥಸಾರಥಿ, ಅಧ್ಯಕ್ಷ ಬೆಂಕಿ ಮಹದೇವ್, ಉಪಾಧ್ಯಕ್ಷ ಸಂತೋಷ್ ಎಸ್., ಪ್ರಧಾನ ಕಾರ್ಯದರ್ಶಿ ರಾಜು ಎಸ್.ಆರ್., ಸಹ ಕಾರ್ಯದರ್ಶಿ ಮಹದೇವಸ್ವಾಮಿ ಹಾಗೂ ಮಾರ್ಗದರ್ಶಕರಾದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು.




