ತಲಕಾಡು ಮೈಸೂರಿನಿಂದ 45 ಕಿಮೀ ದೂರದಲ್ಲಿರುವ ಐತಿಹಾಸಿಕ ಕ್ಷೇತ್ರ. ಇತಿಹಾಸದಲ್ಲಿ ಗಂಗರ ಆಳ್ವಿಕೆಯ ರಾಜಧಾನಿ. ತಲಕಾಡು ಜೀವನದಿ ಕಾವೇರಿ, ಸುತ್ತುವರಿದ ಮರಳಿನ ರಾಶಿ, ಪುರಾತನ ದೇಗುಲಗಳು ಅದಕ್ಕೂ ವಿಶೇಷವಾಗಿ 12 ವರ್ಷಕ್ಕೊಮ್ಮೆ ನಡೆಯುವ ಪಂಚಲಿಂಗ ದರ್ಶನದಿಂದ ನಾಡಿನ ಗಮನ ಸೆಳೆಯುವ ವಿಶೇಷ ಕ್ಷೇತ್ರ.
ಶೈವ ಕ್ಷೇತ್ರವಾದರು ಇಲ್ಲಿ ಹರಿ ಸ್ಮರಣೆಯ ಕೀರ್ತಿ ನಾರಾಯಣ ಕೂಡ ಇರುವುದು ವಿಶೇಷ. ಪಾತಾಳೇಶ್ವರ, ಮರುಳೇಶ್ವರ, ಅರ್ಕೇಶ್ವರ, ವೈದ್ಯನಾಥೇಶ್ವರ, ಮಲ್ಲಿಕಾರ್ಜುನ ದೇಗುಲಗಳು ಇಲ್ಲಿನ ಮೆರುಗು. ಇಷ್ಟೆಲ್ಲಾ ಪೀಠಿಕೆ ಇಟ್ಟಿದ್ದು ತನ್ನದೇ ಆದ ಗತ ವೈಭವದಿಂದ ಮೆರೆದ ನೆಲ ಇಂದು ಅಕ್ಷರಶಃ ಕನಿಷ್ಠ ಮೂಲಭೂತ ಸೌಕರ್ಯವು ಇರದೆ ನಲುಗಿದೆ.
ದೇವಸ್ಥಾನದ ಸಂಪರ್ಕ ರಸ್ತೆಗಳು, ಹಳೆ ತಲಕಾಡು, ಫಾರೆಸ್ಟ್ ಕ್ವಾಟ್ರಸ್ ರಸ್ತೆ ಸೇರಿದಂತೆ ಎಲ್ಲಾ ಬೀದಿಗಳ ರಸ್ತೆಗಳು ಕೆಸರು ಮಯ, ಗುಂಡಿ ಬಿದ್ದ ರಸ್ತೆಗಳು. ಪ್ರವಾಸಿಗರ ವಾಹನಗಳು ಕೂಡ ತೆರಳುವಷ್ಟು ಸಾಧ್ಯವಾಗದ ಕಿರಿದಾದ ರಸ್ತೆಗಳಷ್ಟೇ ಇಲ್ಲಿ ಸದ್ಯಕ್ಕಿರುವುದು.
ಇನ್ನು. ಗ್ರಾಮಸ್ಥರ ಕತೆಯೂ ಅಷ್ಟೇ. ಯಾವುದೇ ಅಭಿವೃದ್ಧಿ ಇಲ್ಲ. ಒಳ ಚರಂಡಿ ವ್ಯವಸ್ಥೆ. ಯಾವುದೇ ಪ್ರವಾಸಿ ಅಗತ್ಯ ವಹಿವಾಟು ನಡೆಸಲು ಸಾಧ್ಯವಿರದ ಪರಿಸ್ಥಿತಿ. ತಲಕಾಡು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವ ಊರಾಗಿಬಿಟ್ಟಿದೆ. ಗಂಗರ ಆಳ್ವಿಕೆಯ ರಾಜಧಾನಿ, ಪಂಚಲಿಂಗ ದರ್ಶನದ ಯಾತ್ರಾ ಕ್ಷೇತ್ರ,ಪ್ರವಾಸಿಗರನ್ನು ಕೈಬೀಸಿ ಕರೆ ತಲಕಾಡಿನಲ್ಲಿ ಕನಿಷ್ಠ ಮಟ್ಟದ ಅಭಿವೃದ್ಧಿ ಕೆಲಸ, ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ.
ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತ ಉತ್ತಮ ರಸ್ತೆ, ಶೌಚಾಲಯ, ಪ್ರವಾಸಿಗರ ತಂಗುದಾಣ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ವ್ಯವಸ್ಥೆ ಮಾಡದೆ ಇರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಘಟಾನುಘಟಿ ನಾಯಕರುಗಳಿದ್ದು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಅವರ ಕ್ಷೇತ್ರದಲ್ಲಿ ಬರುವ ತಲಕಾಡು ಜನಪ್ರತಿನಿಧಿಗಳ ಕಣ್ಣಿಗೂ ಕಾಣದಂತೆ ನಿರ್ಲಕ್ಷಕ್ಕೆ ಒಳಪಟ್ಟಿದ್ದು ನಿಜಕ್ಕೂ ದೌರ್ಭಾಗ್ಯ.
ಹಳೆ ತಲಕಾಡಿನ ಗೈಡ್ ವೆಂಕಟಾಚಲಯ್ಯ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ತಲಕಾಡು ನೋಡಲು ಸಾವಿರಾರು ಜನ ಬರ್ತಾರೆ. ಆದ್ರೆ ಇಲ್ಲಿ ಇರೋರಿಗೆ ಇದರ ಮಹತ್ವ ಗೊತ್ತಿಲ್ಲ. ಹತ್ತಿಪ್ಪತ್ತು ವರ್ಷ ಆಯ್ತು ರಸ್ತೆ ಮಾಡಿ. ಏನಾದ್ರೂ ಕಾರ್ಯಕ್ರಮ ಇದೆ ಅಂದಾಗ ತೇಪೆ ಹಾಕೋದು ಬಿಟ್ರೆ ಸರಿಯಾಗಿ, ಶಾಶ್ವತವಾಗಿ ಇರೋ ಕೆಲಸ ಮಾಡಲ್ಲ. ಚರಂಡಿ ಸ್ವಚ್ಛ ಮಾಡಲ್ಲ. ಅಲ್ಲೇ ಕುಡಿಯುವ ನೀರಿನ ಸಂಪರ್ಕ ಇದೆ. ಸರಿಯಾದ ನಿರ್ವಹಣೆ ಮಾಡಲ್ಲ. ಅಂಗಡಿ, ಮುಂಗಟ್ಟುಗಳ ಸಾಲು ಇದೆ. ಸ್ಲ್ಯಾಬ್ ಹಾಕಿ ಚರಂಡಿ ಮುಚ್ಚಿಲ್ಲ. ಓಡಾಡಬೇಕು ಅಂದ್ರೆ ನಾವೇ ಏನಾದ್ರೂ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾರಾದ್ರೂ ಬೀಳಲಿ, ಏಳಲಿ,ಕೈಕಾಲು ಮುರಿದುಕೊಳ್ಳಲಿ ಅಧಿಕಾರಿಗಳಿಗೇನು?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರಾದ ನಾರಾಯಣ ಮಾತನಾಡಿ, “ಐತಿಹಾಸಿಕ ಕ್ಷೇತ್ರ ಇದು. ತಲಕಾಡು ಅಂದ್ರೆ ಯಾರಿಗೂ ಗೊತ್ತಿಲ್ಲ ಹೇಳಿ. ರಾಜ ಮಹಾರಾಜರಿಗೂ ನಂಟು ಇರುವ ಊರು ಇದು. ಆದ್ರೆ ಯಾರಿಗೆ ಒಳ್ಳೆ ಕೆಲಸ ಮಾಡೋಕೆ ಬರಲ್ಲ. ತಲಕಾಡು ಊರೊಳಗೆ
ಒಂದು ಸುತ್ತು ಬನ್ನಿ. ಒಂದು ರಸ್ತೆ ಚೆನ್ನಾಗಿ ಇದ್ಯಾ ತೋರಿಸಿ, ಯಾವುದು ಮಾಡಿದ್ದಾರೆ ಹೇಳಿ. ದೂರದ ಊರಿಂದ ಜನ ಬರ್ತಾರೆ. ಯಾವೊಬ್ಬಅಧಿಕಾರಿ, ಜನಪ್ರತಿನಿಧಿಗ ಕೂಡ ತಲಕಾಡು ಅಭಿವೃದ್ಧಿ ಮಾಡಬೇಕು, ಇಲ್ಲಿರುವ ಜನಕ್ಕೂ ಒಳ್ಳೆಯದು ಆಗಬೇಕು ಅಂತ ಯೋಚನೆಯೇ ಮಾಡಲ್ಲ. ಕುಡಿಯುವ ನೀರು, ಶೌಚಾಲಯ ಸರಿ ಇಲ್ಲ. ಇದ್ರೂ ಕೂಡ ಸರಿಯಾದ ನಿರ್ವಹಣೆ ಇಲ್ಲ” ಎಂದು ಅಲವತ್ತುಕೊಂಡರು.
ಹೆಚ್ ಆರ್ ಎಸ್ ಮೈಸೂರು ವಿಭಾಗದ ಲೀಡರ್, ಸಾಮಾಜಿಕ ಕಾರ್ಯಕರ್ತ ಅಸಾದುಲ್ಲಾ ಮಾತನಾಡಿ, “ನಾವು ಮೈಸೂರಿನವರು. ತಲಕಾಡು ಇತಿಹಾಸ ಪ್ರಸಿದ್ಧ ಸ್ಥಳ. ಆಗಾಗ ಬರ್ತಾ ಇರ್ತೀವೆ. ಜೊತೆಗೆ ಪ್ರವಾಸಿಗರಿಗೆ ಇಷ್ಟ. ನಾವು ನಮ್ಮ ಕುಟುಂಬದವರ ಜೊತೆ ರಜೆ ಸಮಯದಲ್ಲಿ ಬರ್ತೀವಿ. ಇಂತ ಸ್ಥಳ ಎಲ್ಲೂ ಇಲ್ಲ. ಆದರೆ, ಇಲ್ಲಿ ವಾಹನ ಪಾರ್ಕಿಂಗ್ ಹೆಸರಲ್ಲಿ ಇಷ್ಟ ಬಂದಂತೆ ಸುಲಿಗೆ ಮಾಡುತ್ತಿದ್ದಾರೆ. ಒಂದೇ ಒಂದು ರಸ್ತೆ ಚೆನ್ನಾಗಿಲ್ಲ. ಇಂತ ಪ್ರಸಿದ್ಧವಾದ ಸ್ಥಳದಲ್ಲಿ ಮೂಲಭೂತ ಸೌಲಭ್ಯ ಇಲ್ಲ ಅಂದ್ರೆ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಆಡಳಿತ ಏನು ಮಾಡ್ತಾ ಇದೆ ಅನ್ನೋದು ನಮ್ಮ ಪ್ರಶ್ನೆ” ಎಂದು ತಿಳಿಸಿದರು.
“ಜನರಿಗೆ ತೊಂದರೆ ಆಗೋದು ಕಾಣ್ತಾ ಇಲ್ಲವಾ? ತಕ್ಷಣ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಇದರ ಕಡೆ ಗಮನ ಹರಿಸಿ ರಸ್ತೆ ಅಭಿವೃದ್ಧಿ ಮಾಡಿ, ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು” ಎಂದು ಮನವಿ ಮಾಡಿದರು.
ಚುನಾವಣಾ ಪೂರ್ವದಲ್ಲಿ ಅಭ್ಯರ್ಥಿಗಳು ಕೊಡುವ ಆಶ್ವಾಸನೆಗಳನ್ನು ಪೂರೈಸುವತ್ತಾ ಗಮನವನ್ನು ಕೊಟ್ಟು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಅಳವಡಿಸಿಕೊಡುವ ವ್ಯವಸ್ಥೆಯನ್ನು ಗೆದ್ದ ನಂತರ ಮಾಡಿಕೊಡಬೇಕೆನ್ನುವ ಕನಿಷ್ಟ ಪರಿಜ್ಞಾನ ಬೇಕಲ್ಲವೇ? ಜನಪ್ರತಿನಿಧಿಗಳು ಜವಾಬ್ದಾರಿಯುತ ಸ್ಥಾನದಲ್ಲಿರುವವರೆಗೂ ಕೊಟ್ಟಂತಹ ಆಶ್ವಾಸನೆಗಳನ್ನು ಕಾರ್ಯಗತಗೊಳಿಸಿ