ಸ್ವಾತಂತ್ರೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದ ವೀರರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ರಾಣಿ ಚೆನ್ನಮ್ಮಳ ಕಿತ್ತೂರು ಸಂಸ್ಥಾನಕ್ಕೆ ಮೊದಲ ಜಯ ತಂದುಕೊಟ್ಟ ವೀರರಲ್ಲಿ ಅಮಟೂರು ಬಾಳಪ್ಪನವರು ಸಹ ಒಬ್ಬರಾಗಿದ್ದಾರೆ.
ಅಕ್ಟೋಬರ್ 21, 1824. ಬ್ರಿಟಿಷ್ ಅಧಿಕಾರಿ, ಧಾರವಾಡದ ಕಲೆಕ್ಟರ್ ಆಗಿದ್ದ ಥ್ಯಾಕರೆ ನೇತೃತ್ವದಲ್ಲಿ ಬ್ರಿಟೀಷ್ ಸೈನ್ಯವು ಕಿತ್ತೂರಿನ ಮೇಲೆ ಆಕ್ರಮಣ ಮಾಡಲು ಸನ್ನದ್ಧವಾಗಿ ಕಿತ್ತೂರು ಕೋಟೆಯ ಮೇಲೆ ಯುದ್ದ ಸಾರಿತ್ತು. ಅಕ್ಟೋಬರ್ 23ರಂದು ಕಿತ್ತೂರು ಕೋಟೆ ಮೇಲೆ ಬ್ರಿಟೀಷರು ಫಿರಂಗಿ ದಾಳಿ ನಡೆಸಿದ್ದರು. ಇನ್ನೇನು ಬ್ರಿಟಿಷರಿಗೆ ಯುದ್ದದಲ್ಲಿ ಜಯವಾಗಲಿದೆ ಎನ್ನುವ ಸಂದರ್ಭದಲ್ಲಿಯೆ ಸರದಾರ ಗುರುಸಿದ್ದಪ್ಪನವರ ನಾಯಕತ್ವದಲ್ಲಿ ಕಿತ್ತೂರಿನ ಸೈನ್ಯ, ಬ್ರಿಟಿಷರ ಸೈನ್ಯದ ಮೇಲೆ ಮುಗಿಬಿದ್ದಿತ್ತು.
ರಾಣಿ ಚನ್ನಮ್ಮಳನ್ನು ಸೆರೆ ಹಿಡಿಯಬೇಕು ಇಲ್ಲವೆ ಹತ್ಯೆ ಮಾಡಬೇಕು ಎಂಬುದು ಬ್ರಿಟೀಷ್ ಅಧಿಕಾರಿಗಳ ಸಂಚಾಗಿತ್ತು. ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮಳ ಅಂಗರಕ್ಷಕನಾಗಿದದ್ದು ಅಮಟೂರು ಬಾಳಪ್ಪ. ಯುದ್ದದ ಸಂದರ್ಭದಲ್ಲಿ ಥ್ಯಾಕರೆಯು ರಾಣಿ ಚೆನ್ನಮ್ಮಳಿಗೆ ಗುರಿಯಿಟ್ಟಿದ್ದನ್ನು ಗಮನಿಸಿದ ಅಮಟೂರು ಬಾಳಪ್ಪ ನೇರವಾಗಿ ಥ್ಯಾಕರೆಯ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದರ ಪರಿಣಾಮ ಥ್ಯಾಕರೆಯು ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದ. ಈ ಮೂಲಕ ಕಿತ್ತೂರಿನ ರಾಣಿ ಚೆನ್ನಮ್ಮಳ ಜೀವ ಉಳಿಸುವುದರೊಂದಿಗೆ ಕಿತ್ತೂರಿಗೆ ಮೊದಲ ಜಯ ತಂದುಕೊಡುವಲ್ಲಿ ಅಮಟೂರು ಬಾಳಪ್ಪನವರ ಸಾಹಸವು ಪ್ರಮುಖವಾಗಿದೆ.
ಈ ಘಟನೆಯಿಂದ ಕೋಪಗೊಂಡ ಭ್ರಿಟೀಷರು 1824 ಡಿಸೆಂಬರ್ ತಿಂಗಳಲ್ಲಿ ಕಿತ್ತೂರು ಕೋಟೆಯ ಮೇಲೆ ಆಕ್ರಮಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯರ ಕುತಂತ್ರದಿಂದ ಕಿತ್ತೂರು ಸಂಸ್ಥಾನದ ಫಿರಂಗಿಗಳನ್ನು ಅಶಕ್ತಗೊಳಿಸುತ್ತಾರೆ.
ಈ ಯುದ್ದದಲ್ಲಿ ರಾಣಿ ಚೆನ್ನಮ್ಮಳ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪ, ಕಿತ್ತೂರಿನ ರಾಣಿಯ ಕಡೆಗೆ ಗುಂಡು ತಗುಲದಂತೆ ನೋಡಿಕೊಂಡು ಹೋರಾಡುತ್ತಾನೆ. ಆದರೆ 1824 ಡಿಸೆಂಬರ್ 4 ರಂದು ಕಿತ್ತೂರಿನ ವಾಚ್ ಟವರ್ ಅಂದರೆ ಗಡಾದ ಮರಡಿಯಲ್ಲಿ ಬ್ರಿಟೀಪ್ ಅಧಿಕಾರಿ ಚ್ಯಾಂಪ್ಲಿಯನ್ ರಾಣಿ ಚೆನ್ನಮ್ಮಳಿಗೆ ಗುಂಡು ಹಾರಿಸಲು ಮುಂದಾದಾಗ, ಆ ಗುಂಡಿಗೆ ಎದೆ ಕೊಟ್ಟು ಅಮಟೂರು ಬಾಳಪ್ಪ ವೀರಮರಣ ಹೊಂದುತ್ತಾನೆ.
ಈ ಸಂದರ್ಭದಲ್ಲಿ ಸರ್ದಾರ್ ಗುರುಸಿದ್ದಪ್ಪ, ಸಂಗೊಳ್ಳಿ ರಾಯಣ್ಣ ಮತ್ತು ಸಹಚರರನ್ನು ಬಂಧಿಸಿ ಧಾರವಾಡದದ ಬಂಧೀಖಾನೆಯಲ್ಲಿ ಇಡಲಾಗುತ್ತದೆ. 1825 ಜನೇವರಿ 23ರಂದು ಸರ್ದಾರ ಗುರುಸಿದ್ದಪ್ಪನವರ ಹೊರತು ಪಡಿಸಿ ಉಳಿದವರನ್ನು ಬಿಡುಗಡೆ ಮಾಡಲಾಗುತ್ತದೆ.
ಇತಿಹಾಸದಲ್ಲಿ ಶತ್ರು ಸೈನ್ಯದ ಜೊತೆ ಹೋರಾಡಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಅಮಟೂರು ಬಾಳಪ್ಪನವರ ಇತಿಹಾಸವನ್ನು ರಾಷ್ಟಕ್ಕೆಲ್ಲ ಮುಟ್ಟಿಸಬೇಕಾದ ನೈತಿಕ ಹೊಣೆಗಾರಿಕೆ ಈ ಭಾಗದ ವ್ಯವಸ್ಥೆಯ ಮೇಲಿದೆ.
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು