- ಕಳಪೆ ಮೊಟ್ಟೆ ಕುರಿತು ಉಪಲೋಕಾಯುಕ್ತರ ಗಮನ ಸೆಳೆದ ಉಪನ್ಯಾಸಕ ಎನ್ ಚಂದ್ರಶೇಖರ್
- ಸ್ವಯಂಪ್ರೇರಿತ ದೂರು ದಾಖಲಿಸಿ, ಸೂಕ್ತ ಕ್ರಮ ಜರುಗಿಸುವುದಾಗಿ ನ್ಯಾ. ಕೆ ಎನ್ ಫಣೀಂದ್ರ ಭರವಸೆ
ಚಿಕ್ಕಬಳ್ಳಾಪುರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಗುತ್ತಿಗೆದಾರರು ಕಳಪೆ ಮೊಟ್ಟೆಗಳನ್ನು ಪೂರೈಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಭರವಸೆ ನೀಡಿದ್ದಾರೆ.
ಉಪನ್ಯಾಸಕ ಎನ್ ಚಂದ್ರಶೇಖರ್ ಅವರು ಕಳಪೆ ಮೊಟ್ಟೆ ವಿಷಯ ಕುರಿತು ಉಪಲೋಕಾಯುಕ್ತರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಪಲೋಕಾಯುಕ್ತರು, “ಈ ಕುರಿತು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ತನಿಖೆ ನಡೆಸಲಾಗುವುದು. ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು” ಎಂದು ಹೇಳಿದ್ದಾರೆ.
“ಚಿಕ್ಕಬಳ್ಳಾಪುರ ಜಿಲ್ಲೆಯ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆಗಳು ಸರಬರಾಜಾಗುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಮುಗ್ದ, ಅಮಾಯಕ ಮಕ್ಕಳ ಆರೋಗ್ಯ ಮತ್ತು ಪ್ರಾಣದ ಬಗ್ಗೆ ಗಮನಿಸಬೇಕಾಗಿರುವುದು ಅನಿವಾರ್ಯವಾಗಿದೆ. ಯಾರ ಮಕ್ಕಳಾದರೇನು? ಮಕ್ಕಳು ಮಕ್ಕಳೇ ಅಲ್ಲವೇ? ಇದು ಸಂಬಂಧಪಟ್ಟವರ ಗಮನಕ್ಕೆ ಈವರೆಗೆ ಬಂದೇ ಇಲ್ಲವೇ” ಎಂದು ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.