ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ಕೆ ಹೊರ ವರ್ತುಲ ರಸ್ತೆ ದೇವಲಾಪುರ ಕ್ರಾಸ್ ಬಳಿಯ ಮೇಲ್ಸೇತುವೆ ಕೈಬಿಡುವಂತೆ ಆಗ್ರಹಿಸಿ ಸಾರ್ವಜನಿಕ ಸಭೆ ನಡೆಯಿತು.
ಊರಿನ ಮುಖಂಡರಾದ ನಾಗರಾಜು ಮಾತನಾಡಿ, ಮೇಲ್ಸೇತುವೆ ನಿರ್ಮಿಸಲು ಹೊಸಹುಂಡಿ ರಸ್ತೆ ಬದಿಯಲ್ಲಿದ್ದ 48 ಮರಗಳನ್ನು ಕಡಿಯುವ ಸಂಬಂಧ ದಿನಾಂಕ-13-1-26ರಂದು ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಗ್ರಾಮಸ್ಥರು ಮತ್ತು ಪರಿಸರ ಕಾರ್ಯಕರ್ತರು ಸದರಿ ಜಾಗದಲ್ಲಿ ಮೇಲ್ಸೇತುವೆ ಅಗತ್ಯವಿಲ್ಲ ಮತ್ತು ಅಪಘಾತಗಳನ್ನು ತಪ್ಪಿಸಲು, ಕಡಿಮೆ ಮಾಡಲು ಇತರೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಿ ಎಂದು ಮನವಿ ಮಾಡಿದ್ದೆವು. ಮೇಲಿನ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಭರವಸೆ ಕೊಟ್ಟಿದ್ದರು. ಆದರೆ, ಕೆಲವು ದಿನಗಳ ಹಿಂದೆ ಗುತ್ತಿಗೆದಾರರು ಇದ್ದಕ್ಕಿದ್ದಂತೆ ಕೆಲಸ ಶುರು ಮಾಡಿದ್ದರು. ನಂತರ ಹೊಸಹುಂಡಿ ಗ್ರಾಮಸ್ಥರು ಮತ್ತು ಪರಿಸರ ಕಾರ್ಯಕರ್ತರ ಮನವಿ ಮೇರೆಗೆ ಕೆಲಸವನ್ನು ನಿಲ್ಲಿಸಿದರು.
ಸದರಿ ಜಾಗದಲ್ಲಿ (2024ರಿಂದ ಇತ್ತೀಚಿಗಿನ 3 ವರ್ಷಗಳಲ್ಲಿ 7 ಮಾರಣಾಂತಿಕ ಅಪಘಾತಗಳು ಮತ್ತು 15 ಮಾರಣಾಂತಿಕವಲ್ಲದ ಅಪಘಾತಗಳಾಗಿದ್ದು ಈ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ‘ಬ್ಲ್ಯಾಕ್ ಸ್ಪಾಟ್’ ಎಂದು ಗುರುತಿಸಿದ್ದು, ಇಲ್ಲಿ ಮೇಲ್ಸೇತುವೆ ಅಗತ್ಯವಿದೆ ಎಂಬುದು ಇಲಾಖೆಯ ಸಮರ್ಥನೆ. ಇಂತಹ ಅಪಘಾತಗಳನ್ನು ತಡೆಯಲು ಅಥವಾ ಕಡಿಮೆ ಮಾಡಲು ಏಕಾಏಕಿ ಮೇಲ್ಸೇತುವೆ ಕಟ್ಟುವುದು ಪರಿಹಾರವಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖಂಡರಾದ ಕೃಷ್ಣ ಮಾತನಾಡಿ, ವಾಹನ ಅಪಘಾತಗಳಿಗೆ ಎರಡು ಬಹುಮುಖ್ಯ ಕಾರಣಗಳಿವೆ. ಒಂದು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನಗಳನ್ನು ಚಾಲನೆ ಮಾಡುವುದು. ಎರಡನೆಯದು ಮದ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡುವುದು. ವಾಹನ ಸವಾರರು ಮತ್ತು ಚಾಲಕರು ಈ ತಪ್ಪುಗಳನ್ನು ಮಾಡುವುದನ್ನು ಮೊದಲು ನಿಯಂತ್ರಣ ಮಾಡಬೇಕು. ಇದಕ್ಕಾಗಿ ಇಲ್ಲಿ ಟ್ರಾಫಿಕ್ ಸಿಗ್ನಲ್ ಹಾಕಬೇಕು. ರಸ್ತೆ ಡುಬ್ಬುಗಳನ್ನು ಹಾಕಬೇಕು. ಸಂಚಾರಿ ಚಿಹ್ನೆಗಳನ್ನು ಹಾಕಬೇಕು. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಕೆಲಸ ಆಗಬೇಕು.
ಇದಿಲ್ಲಿಗೆ ಸಮೀಪದಲ್ಲಿರುವ ಮದ್ಯದ ಅಂಗಡಿಗಳನ್ನು ತೆರವುಗೊಳಿಸಬೇಕು. ಈ ಜಾಗದಲ್ಲಿ ಆಗುವ ಅಪಘಾತಗಳನ್ನು ತಡೆಯಲು ಮೊದಲು ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೇ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ರಲ್ಲಿ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ನಿಂದ ಟಿ ನರಸೀಪುರ ರಸ್ತೆ ಜಂಕ್ಷನ್ ವರೆಗೆ ಹಲವಾರು ಕಡೆ ಸಿಗ್ನಲ್ ಗಳನ್ನು ಹಾಕಲಾಗಿದೆ. ಇಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಏಕಾಏಕಿ ಮೇಲ್ಸೇತುವೆ ಕಟ್ಟುವುದನ್ನು ಗ್ರಾಮಸ್ಥರು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ಹೊಸಹುಂಡಿ ಗ್ರಾಮಸ್ಥರು ಈಗಾಗಲೇ ವರುಣಾ ನಾಲೆ ಯೋಜನೆ, ಏರ್ ಪೋರ್ಟ್ ಯೋಜನೆ ಮತ್ತು ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಒಟ್ಟು ಮೂರು ಬಾರಿ ನಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡು ಕಂಗಾಲಾಗಿದ್ದೇವೆ. ನಮ್ಮಲ್ಲಿ ಹಲವರು ಈಗ ಸಣ್ಣಪುಟ್ಟ ಅಂಗಡಿಗಳು, ಹೋಟೆಲ್‌ಗಳು ಮತ್ತು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡು ಕಷ್ಟದ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಊರಿನಲ್ಲಿ ಮೇಲ್ಸೇತುವೆ ಮಾಡುವುದರಿಂದ ನಮ್ಮ ಅಂಗಡಿಗಳು, ಹೋಟೆಲ್‌ಗಳು ಮತ್ತು ಇತರ ಸಣ್ಣಪುಟ್ಟ ವ್ಯಾಪಾರ ಮಳಿಗೆಗಳಿಗೆ ಜನರು ಬರುವುದು ಕಡಿಮೆಯಾಗಿ ವ್ಯಾಪಾರ ಕುಸಿದು ನಮ್ಮ ಜೀವನ ಕಷ್ಟಕ್ಕೆ ಸಿಲುಕಲಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಪಾರಂಪರಿಕ ಕಟ್ಟಡ ರಕ್ಷಣೆಗೆ ಪಾಲಿಕೆ ಕೊಡುಗೆ ಏನು: ಮಾಜಿ ಮೇಯರ್ ಶಿವಕುಮಾರ್
ಇಲ್ಲಿ ಬೆಳೆದಿರುವ ಮರಗಳನ್ನು ಕಡಿಯುವುದನ್ನು ಕೂಡ ನಾವು ವಿರೋಧಿಸುತ್ತೇವೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಗುಣ ಬದಲಾವಣೆಯ ಪರಿಣಾಮಗಳು ಈಗಾಗಲೇ ಮನುಷ್ಯ ಸೇರಿದಂತೆ ಸಕಲ ಜೀವಸಂಕುಲವನ್ನು ತೀವ್ರವಾಗಿ ಬಾಧಿಸುತ್ತಿವೆ. ಮೈಸೂರಿನ ತಾಪಮಾನ ಕೂಡ ದಿನೇ ದಿನೇ ಏರುತ್ತಿದ್ದು ಬಿಸಿಲಿನ ತಾಪದಿಂದ ಮೈಸೂರು ನಾಗರಿಕರು ಬಸವಳಿಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಇರುವ ಮರಗಳನ್ನು ಕಡಿದು ಮೇಲ್ಸೇತುವೆ ಮಾಡುವುದು ಸರಿಯಲ್ಲ. ಮೇಲಿನ ಎಲ್ಲಾ ಕಾರಣಗಳಿಂದ ದೇವಲಾಪುರ ಕ್ರಾಸ್ ಬಳಿ (ಹೊಸಹುಂಡಿ ಗ್ರಾಮದ ಹತ್ತಿರ) ಮೇಲ್ಸೇತುವೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ
ಅಹವಾಲು ಸಭೆಯಲ್ಲಿ ಕುಂಬರಹಳ್ಳಿ ಮಠದ ಮಹದೇವು, ಚಿಕ್ಕೇಗೌಡನ ಹುಂಡಿ ಮಹೇಂದ್ರ, ಗುಡುಮಾದನ ಹಳ್ಳಿ ಪುಟ್ಟಸ್ವಾಮಿ, ಕುಮಾರ್, ಹೊಸಹುಂಡಿ ರವಿ, ಸಿದ್ದರಾಜು, ಭರತ್, ಬಸವರಾಜು, ಸೋಮಣ್ಣ, ನಾಗಮ್ಮ, ಕೋಕಿಲ, ಶಿವರಾಮು, ಯಶವಂತ್, ಮೂಗಬೀರ, ಶ್ರೀನಿವಾಸ್, ಮಂಜುನಾಥ್, ಮಂಜುಳ, ರಮೇಶ್, ಕೋಳಿ ಕುಮಾರ್, ನಾಗೇಂದ್ರ, ಪ್ರಶಾಂತ್ ಹಾಗು ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ಮುಖ್ಯ ಇಂಜಿನಿಯರ್ ಬಿ.ಟಿ ಶ್ರೀಧರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಚ್.ಆರ್ ರೂಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಸೇರಿದಂತೆ ಹಲವರು ಇದ್ದರು.




