ನಗರದ ಚಂದ್ರಬಂಡಾ ರಸ್ತೆಯ ಎಲ್.ಬಿ.ಎಸ್. ನಗರದಲ್ಲಿರುವ ಕನ್ನಡ ಸರ್ಕಾರಿ ಪ್ರೌಢಶಾಲೆಗೆ ಮೀಸಲಿರಿಸಿದ ಜಾಗವನ್ನು ಅತಿಕ್ರಮಿಸಿದವರ ಮೇಲೆ ಕ್ರಮ ಜರುಗಿಸಿ, ಕೂಡಲೇ ಆ ಜಾಗ ತೆರವುಗೊಳಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿ ಸಚಿವ ಎನ್.ಎಸ್. ಭೋಸರಾಜ ಅವರಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿದರು.
ರಾಯಚೂರಿನಲ್ಲಿ ಸಚಿವರ ಕಾರನ್ನು ಅಡ್ಡಗಟ್ಟಿ ಘೇರಾವು ಹಾಕಿದ ಸಂಘಟನೆಯ ಮುಖಂಡರು, ನಗರದ ಚಂದ್ರಬಂಡ ರಸ್ತೆಯ ಎಲ್‌ಬಿಎಸ್, ನಗರದ ಪಕ್ಕದ ಸಂತೋಷ ನಗರದ ಸರ್ವೇ ನಂ. 384/1 ರಲ್ಲಿನ ವಸತಿ ಬಡಾವಣೆಯಲ್ಲಿ ನಾಗರೀಕ ಸೌಲಭ್ಯದ ಕೋಟಾದಡಿ ಶೈಕ್ಷಣಿಕ ಉದ್ದೇಶಕ್ಕಾಗಿ, ಎಲ್‌ಬಿಎಸ್ ನಗರದ ಕನ್ನಡ ಸರ್ಕಾರಿ ಪ್ರೌಢಶಾಲೆಗೆ ಮೀಸಲಿಟ್ಟ 1,017ಚದರ ಅಡಿ ಖಾಲಿ ನಿವೇಶನವು ಸಂತೋಷ ಬಡಾವಣೆಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡಿ, ಖಾಲಿ ಜಾಗದಲ್ಲಿ ಅಕ್ರಮ ಶೆಡ್ಡು ನಿರ್ಮಿಸಿ, ದೇವಸ್ಥಾನದ ಮತ್ತು ದೇವರ ಹೆಸರಿನಲ್ಲಿ ಸರ್ಕಾರಿ ಜಾಗವನ್ನು ಕಬಳಿಸುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಈಗಾಗಲೇ ಸಂಬಂಧಿಸಿದ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೆ ತಂದು, ತೆರವುಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಾವೂ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಇವರು ಯಾವುದೇ ಕ್ರಮಕ್ಕೆ ಮುಂದಾಗದೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಪ್ರೌಢಶಾಲೆ ಕಟ್ಟಡ ಇಲ್ಲದ ಪರಿಣಾಮ ಮಕ್ಕಳು ಅನ್ಯ ಇಲಾಖೆಯ ಶಾಲೆಯಲ್ಲಿ ಕಲಿಯುವಂತಾಗಿದೆ.
ಕಳೆದ ಏಳೆಂಟು ತಿಂಗಳಿನಿಂದ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು, ನಗರಸಭೆಯ ಕಮಿಷನರ್ ಕೇವಲ ನೆಪ ಮಾತ್ರಕ್ಕೆ ನೋಟಿಸ್ ಕೊಟ್ಟು ಕೈತೊಳೆದುಕೊಂಡು ಒತ್ತುವರಿದಾರರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ನಾವು ಶಿಕ್ಷಣದ ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡುವ ದೃಷ್ಟಿಯಿಂದ, ವಿವಿಧ ಸಂಘಟನೆಗಳ ಮತ್ತು ಪಾಲಕ, ಪೋಷಕ ಮತ್ತು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ಶೆಡ್ ತೆರವುಗೊಳಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಆದ್ದರಿಂದ, ತಾವು ತುರ್ತಾಗಿ ಜನವರಿ 26ರ ಒಳಗಾಗಿ ತೆರವುಗೊಳಿಸಲು ಸೂಚಿಸಬೇಕು ಮತ್ತು ನಿರ್ಲಕ್ಷ್ಯ ಧೋರಣೆ ತೋರಿರುವ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲ ಹಾಗೂ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ಡಿಎಸ್‌ಎಸ್(ಭೀಮವಾದ) ಜಿಲ್ಲಾಧ್ಯಕ್ಷ ನರಸಿಂಹಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ – ಕಾಂಗ್ರೆಸ್, ಅಂಬಾಜಿ ರಾವು ಮೈದಾರ್ಕರ್, ಕಲ್ಯಾಣ ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ರಂಗನಾಥ, ಕರವೇ(ಎಚ್.ಶಿವರಾಮೇಗೌಡ ಗೌಡ ಬಣ) ಅಶೋಕ್ ಜೈನ್, ಬಿಎಸ್‌ಎಸ್ ಯುವ ಘಟಕ ರಾಜ್ಯಾಧ್ಯಕ್ಷರಾದ ಎಚ್.ಎಮ್. ಬಾಬು, ಡಿಎಸ್‌ಎಸ್ ಕಲಾ ಸಂಚಾಲಕ ಹನುಮೇಶ್ ಆರೋಲಿ, ಮುಖಂಡರಾದ ಸಾದೀಕ್ ಪಾಷ, ರಾನು, ಹನುಮಂತ ಸೇರಿದಂತೆ ಅನೇಕರಿದ್ದರು.