ಪಡಿತರ ಆಹಾರ ಧಾನ್ಯ ಮತ್ತು ಮನರೇಗಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ಎರಡು ದಿನಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ, ಪೌಷ್ಟಿಕಾಂಶದ ಕೊರತೆ ನೀಗಿಸುವುದಕ್ಕಾಗಿ ಅನುಕೂಲಕರ ದರದಲ್ಲಿ ಪಡಿತರದಲ್ಲಿ ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಅಕ್ಕಿಯೊಂದಿಗೆ ರಾಗಿ ಅಥವಾ ಜೋಳ ಮತ್ತು 1 ಕೆಜಿ ತೊಗರಿಬೇಳೆ, 1 ಕೆಜಿ ಅಡುಗೆ ಎಣ್ಣೆಯನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯಕರ್ತೆ ಮಾರೆಮ್ಮ ನೀರಮಾನ್ವಿ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆಂದು 5 ಕೆಜಿ ಅಕ್ಕಿ ಕೊಟ್ಟು ಇನ್ನು 5 ಕೆಜಿಯ ಹಣ ಜಮಾ ಮಾಡುತ್ತಿದ್ದಾರೆ. ಹಣದ ಬದಲು ಎಣ್ಣೆ, ಜೋಳ, ಸಜ್ಜೆ, ಸಕ್ಕರೆಯಂತಹ ದಿನನಿತ್ಯದ ಪದಾರ್ಥಗಳನ್ನು ವಿತರಿಸಬೇಕು” ಎಂದು ಹೇಳಿದರು.
ಗುರುರಾಜ್ ರಾಯಚೂರು ಮಾತನಾಡಿ, “ಸ್ವಾತಂತ್ರ್ಯ ದಿನಾಚರಣೆ ಮಹೋತ್ಸವದ ಅಂಗವಾಗಿ ಕೂಲಿಕಾರರು ಬಯಸಿದ ಸ್ವಾತಂತ್ರ್ಯ ಸಿಕ್ಕಿಲ್ಲ. ಸಾಮಾಜಿಕ ಭದ್ರತೆ, ಆರ್ಥಿಕ ವ್ಯವಸ್ಥೆಯಲ್ಲಿ ಹಿಂದುಳಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಲೆಮಾರಿ, ಅರೆ ಅಲೆಮಾರಿಗಳಿಗೂ ಭೂಮಿ, ವಸತಿ ಸಿಗಬೇಕು: ಡಾ. ಸಿ ಎಸ್ ದ್ವಾರಕಾನಾಥ್
“ರೈತರ ಬೆಳೆಗೂ ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ದೊರೆತರೆ ಕಾರ್ಮಿಕರಿಗೆ ಪೌಷ್ಟಿಕ ಆಹಾರ ಸಿಗುತ್ತದೆ. ಉದ್ಯೋಗ ಖಾತ್ರಿಯಲ್ಲಿ 90 ದಿನಗಳಿಗೂ ಹೆಚ್ಚಿನ ಮಾನವ ದಿನಗಳನ್ನು ಮುಗಿಸಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಬಿಒಸಿಡಬ್ಲ್ಯೂ ಅಡಿಯಲ್ಲಿ ಕಾರ್ಮಿಕ ಚೀಟಿಗಳನ್ನು ನೀಡಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುಚ್ಚಪ್ಪ, ಕೊಂಡಯ್ಯ, ಬಸವರಾಜ್, ರಾಘವೇಂದ್ರ ಸೇರಿದಂತೆ ಇನ್ನಿತರರು ಇದ್ದರು.