ತಾಲ್ಲೂಕಿನ ಬಿಜನಗೇರಾ ಗ್ರಾಮದ ಪಂಚಾಯತ ಅಭಿವೃದ್ಧಿ ಅಧಿಕಾರಿ (ಪಿಡಿಒ) ಲಕ್ಷ್ಮೀ ಪ್ಯಾಟಿ ಅವರು ಲೇಔಟ್ ಅಭಿವೃದ್ಧಿಗಾಗಿ ಎರಡು ಎಕರೆ ಜಮೀನಿನ ಖಾತಾ ಉತಾರ ನೀಡುವ ಸಂಬಂಧ ₹1.50 ಲಕ್ಷ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬಿಜನಗೇರಾ ಗ್ರಾಮದ ನಿವಾಸಿ ಮೆಹಬೂಬ್ ಅಲಿ ಅವರು ಪಂಚಾಯಿತಿ ವ್ಯಾಪ್ತಿಯ ಉಂಡ್ರಾಳದೊಡ್ಡಿ ಗ್ರಾಮದಲ್ಲಿರುವ ಎರಡು ಎಕರೆ ಜಮೀನಿಗೆ ಖಾತಾ ಉತಾರ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಉತಾರ ಮಂಜೂರು ಮಾಡಲು ಲಕ್ಷ್ಮೀ ಪ್ಯಾಟಿ ಅವರು ₹2 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಲ್ಲದೆ, ಹಣವನ್ನು ತಮ್ಮ ಪತಿಯ ಫೋನ್‌ಪೇ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕರ್ತವ್ಯ ನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು
ಈ ಸಂಬಂಧ ಮೆಹಬೂಬ್ ಅಲಿ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಅಲಿ ಅವರು ಲಕ್ಷ್ಮೀ ಪ್ಯಾಟಿ ಅವರ ಪತಿಯ ಖಾತೆಗೆ ₹1.50 ಲಕ್ಷ ಫೋನ್‌ಪೇ ಮೂಲಕ ವರ್ಗಾಯಿಸಿದ ತಕ್ಷಣ ದಾಳಿ ನಡೆಸಿದರು. ಬಳಿಕ ಲಕ್ಷ್ಮೀ ಪ್ಯಾಟಿ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.




