ಆಮ್ಮೆಟ್ ವಿಚಾರವಾಗಿ ಆರಂಭವಾದ ಸಣ್ಣ ಮಾತಿನ ಚಕಮಕಿ ಆಟೋ ಚಾಲಕನೊಬ್ಬನ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಗಂಜ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನೂರ್‌ಬಾಗ್ ಬಡಾವಣೆಯ ನಿವಾಸಿ ಹಾಗೂ ಆಟೋ ಚಾಲಕನಾಗಿದ್ದ ಮುಹಮ್ಮದ್ ರಯೀಸ್ (30) ಕೊಲೆಯಾದ ವ್ಯಕ್ತಿ.
ಮಾಹಿತಿ ಪ್ರಕಾರ, ರಯೀಸ್ ಅವರು ಎಂದಿನಂತೆ ದಿನವಿಡೀ ಆಟೋ ಚಾಲನೆ ಮಾಡಿ ರಾತ್ರಿ ಸುಮಾರು 10 ಗಂಟೆ ವೇಳೆಗೆ ನೆಹರು ಗಂಜ್ ಸಮೀಪದ ಆಮ್ಮೆಟ್ ಅಂಗಡಿಗೆ ತೆರಳಿದ್ದರು. ಈ ವೇಳೆ ಅಲ್ಲಿಯೇ ಮದ್ಯಪಾನ ಮಾಡುತ್ತಿದ್ದ ಕೆಲ ಯುವಕರೊಂದಿಗೆ ಆಮ್ಮೆಟ್ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ.
ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ತೀವ್ರ ವಾಗ್ವಾದಕ್ಕೆ ತಿರುಗಿದ್ದು, ಪರಿಸ್ಥಿತಿ ಹದಗೆಟ್ಟಿದೆ. ಕೋಪಗೊಂಡ ದುಷ್ಕರ್ಮಿಗಳು ತಮ್ಮ ಬಳಿ ಇದ್ದ ಮಾರಕಾಸ್ತ್ರಗಳಿಂದ ರಯೀಸ್ ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ವೇಳೆ ರಯೀಸ್ ಅವರ ಹೊಟ್ಟೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಗಾಯಗಳಾಗಿವೆ. ದಾಳಿಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ರಯೀಸ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಚೌಕ್ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಾಗೂ ಬಂಧನಕ್ಕಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
ಮೃತನ ಸಾವಿನಿಂದ ನೂರ್‌ಬಾಗ್ ಬಡಾವಣೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.





