ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಕಿಲ್ಲಾ ಏರಿಯಾದಲ್ಲಿ ಮನೆಯೊಂದನ್ನು ಅಗೆಯುವ ವೇಳೆ ಪುರಾತನ ಕಾಲದ 360 ತಾಮ್ರದ ನಾಣ್ಯಗಳು ಪತ್ತೆಯಾಗಿರುವ ಘಟನೆ ನಡೆದಿದೆ
ಆಗಸ್ಟ್ 20ರಂದು, ಗುರುವಾರ, ಮನೆಯೊಂದನ್ನು ಅಗೆಯುವ ಸಂದರ್ಭದಲ್ಲಿ ನಾಣ್ಯಗಳು ಪತ್ತೆಯಾಗಿದ್ದು, ವಿಷಯ ಹರಿದಾಡುತ್ತಿದ್ದಂತೆ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮನೆಯ ಮಾಲೀಕರಿಂದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಮಾತನಾಡಿ, ಕಿಲ್ಲಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ 360 ತಾಮ್ರದ ನಾಣ್ಯಗಳು ದೊರೆತಿದ್ದು, ಅವುಗಳನ್ನು ವಶಕ್ಕೆ ಪಡೆದು ಪೊಲೀಸ್ ಇಲಾಖೆಯ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಾಣ್ಯಗಳು ತಾಮ್ರದಿಂದ ತಯಾರಿಸಲಾಗಿದ್ದು, ಅವುಗಳ ಮೇಲೆ ಉರ್ದು ಭಾಷೆಯ ಲಿಪಿಯಲ್ಲಿ ಬರಹಗಳಿವೆ. ಹಿಂದೆ ಈ ಭಾಗದಲ್ಲಿ ಆಡಳಿತ ನಡೆಸಿದವರ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಾಗಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಅಧ್ಯಯನಕ್ಕಾಗಿ ನಾಣ್ಯಗಳನ್ನು ಪುರಾತತ್ವ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಲಂಗೇರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ: ತಕ್ಷಣ ಪರಿಹಾರಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ
ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಬಿ. ದೇವಮಾನೆ, ಕಂದಾಯ ನಿರೀಕ್ಷಕ ಚರಣಸಿಂಗ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.




