ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?

Date:

ಕೃತಿ: The Untouchables: Who Were They And Why They Became Untouchables? (ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?)
ಮೊದಲ ಮುದ್ರಣ: 1948, (Amrit Book Co., New Delhi.)
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1990, ಜನರಿ 26
ಇಂಗ್ಲಿಷ್ ಸಂಪುಟ: 7
ಕನ್ನಡ ಸಂಪುಟ: 6
Kalpaz Publications Edition: 2017


ಅಸ್ಪೃಶ್ಯರ ಮೂಲವನ್ನು ಶೋಧಿಸಿ, ತಾವು ಕಂಡುಕೊಂಡ ಸತ್ಯಗಳನ್ನು ‘ಅಸ್ಪೃಶ್ಯರು- ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?’ ಕೃತಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ದಾಖಲಿಸಿದ್ದಾರೆ. ‘ಭಗ್ನ ಮಾನವರು’ (‘Broken Men’) ಸಿದ್ಧಾಂತವನ್ನು ಮಂಡಿಸುವ ಬಾಬಾಸಾಹೇಬರು, “ಭಗ್ನ ಮಾನವರು ಬೌದ್ಧರಾಗಿದ್ದ ಕಾರಣಕ್ಕೆ ಬ್ರಾಹ್ಮಣರು ಅವರ ಬಗ್ಗೆ ಅಸಹ್ಯಪಡುತ್ತಿದ್ದರು ಹಾಗೂ ಅವರು ಅವರ ವಿರುದ್ಧ ತಿರಸ್ಕಾರ ಮತ್ತು ದ್ವೇಷವನ್ನು ಬೋಧಿಸಿದರು, ಹಾಗಾಗಿ ಭಗ್ನಮಾನವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಯಿತು” ಎಂದು ಪ್ರತಿಪಾದಿಸುತ್ತಾರೆ. ಅಸ್ಪೃಶ್ಯರು ಬ್ರಾಹ್ಮಣರನ್ನು ಅಮಂಗಳಕರರೆಂದು ಪರಿಗಣಿಸಿದ ಸಮಯದಲ್ಲಿಯೇ ಬ್ರಾಹ್ಮಣರು ಬೌದ್ಧರ ಶತ್ರುಗಳಾಗಿದ್ದರು ಮತ್ತು ‘Broken Men’ರು ಬೌದ್ಧ ಧರ್ಮವನ್ನು ಬಿಟ್ಟುಕೊಡದ ಕಾರಣ ಅವರ ಮೇಲೆ ಅಸ್ಪೃಶ್ಯತೆಯನ್ನು ಹೇರಿದರು ಎನ್ನುತ್ತಾರೆ. ಗೋಮಾಂಸ ಭಕ್ಷಣೆಯನ್ನು ಮುಂದುವರಿಸುವ ಅನಿವಾರ್ಯತೆ ಭಗ್ನ ಮಾನವರಿಗಿತ್ತು. ಗೋಮಾಂಸ ತ್ಯಜಿಸಿದ ಬ್ರಾಹ್ಮಣರು ಗೋಪೂಜೆಯ ಆಚರಣೆಗಳಿಂದಾಗಿ ಹಸುವಿನ ಮಾಂಸ ಸೇವನೆ ನಿಲ್ಲಿಸಿದರು. ವಾಸ್ತವವಾಗಿ, ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿ ಬದಲಾಗಲು ಕಾರಣ, ಬೌದ್ಧಧರ್ಮದ ಮೇಲೆ ತಮ್ಮ ಶ್ರೇಷ್ಠತೆಯನ್ನು ಸ್ಥಾಪಿಸಲು ಬ್ರಾಹ್ಮಣರು ರೂಪಿಸಿದ ತಂತ್ರ ಎಂದು ಡಾ. ಅಂಬೇಡ್ಕರ್ ಹೇಳುತ್ತಾರೆ. ಅಸ್ಪೃಶ್ಯತೆಯನ್ನು ಭಗ್ನಮಾನವರ ಮೇಲೆ ಹೇರಲ್ಪಟ್ಟ ಪರಿಯನ್ನು ಬಾಬಾಸಾಹೇಬರು ತಮ್ಮ ಪ್ರಖರ ವಿದ್ವತ್ತು ಮತ್ತು ಅಧ್ಯಯನ ಮುಖೇನ ‘ಅಸ್ಪೃಶ್ಯರು’ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.

- Advertisement -

ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಅಸ್ಪೃಶ್ಯರು – ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?’ (The Untouchables: Who Were They and Why They Became Untouchables?) ಎಂಬ ಪುಸ್ತಕವನ್ನು 1948ರ ಅಕ್ಟೋಬರ್‌ನಲ್ಲಿ, ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ ಪ್ರಕಟಿಸಲಾಯಿತು. ಇದನ್ನು ನಂದನಾರ್, ರವಿದಾಸ ಮತ್ತು ಚೋಖಮೇಲ ಎಂಬ ಮೂವರು ಪ್ರಸಿದ್ಧ ಸಂತರ ಸ್ಮರಣಾರ್ಥ ಅರ್ಪಿಸಲಾಗಿದೆ. ಈ ಮೂವರೂ ಅಸ್ಪೃಶ್ಯರಾಗಿ ಜನಿಸಿ, ‘ತಮ್ಮ ಭಕ್ತಿ, ಮಹತ್ಕಾರ್ಯಗಳಿಂದ ಜನಸಾಮಾನ್ಯರ ಗೌರವವನ್ನು ಗಳಿಸಿ ಸಂತರಾದವರು’.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಡಾ. ಅಂಬೇಡ್ಕರ್ ಹೇಳುವಂತೆ ‘ಅಸ್ಪೃಶ್ಯರು’ ಪುಸ್ತಕ ಅವರ ‘ಶೂದ್ರರು: ಅವರು ಯಾರಾಗಿದ್ದರು ಮತ್ತು ಭಾರತೀಯ-ಆರ್ಯ ಸಮಾಜದ ನಾಲ್ಕನೇ ವರ್ಣವಾದದ್ದು ಹೇಗೆ’ (1946) ಎಂಬ ಗ್ರಂಥದ ಮುಂದುವರಿಕೆಯಾಗಿ ಬರೆದ ಕೃತಿಯಾಗಿದೆ. ಅಪರಾಧಿ ಬುಡಕಟ್ಟುಗಳು, ಆದಿವಾಸಿ ಬುಡಕಟ್ಟುಗಳು ಮತ್ತು ಅಸ್ಪೃಶ್ಯರು, ಈ ಮೂರು ಸಮುದಾಯಗಳ ಕುರಿತು ಹೆಚ್ಚಿನ ಸಂಶೋಧನೆ ಹಾಗೂ ಅವರ ಬಗ್ಗೆ ಸಾಹಿತ್ಯ ಇಲ್ಲದೇ ಇರುವುದು ಡಾ. ಅಂಬೇಡ್ಕರ್ ಅವರು ‘ಅಸ್ಪೃಶ್ಯರು’ ಪುಸ್ತಕ ಬರೆಯಲು ಪ್ರೇರೇಪಿಸಿದ್ದು ಎನ್ನಬಹುದು. ಇವುಗಳಲ್ಲಿ ಕೊನೆಯ ವರ್ಗವು ಅತ್ಯಂತ ದೊಡ್ಡದು ಮತ್ತು ವಿಶಿಷ್ಟವಾದುದು. ‘ಅಸ್ಪೃಶ್ಯರು’ ಅಸ್ತಿತ್ವಕ್ಕೆ ಬಂದ ಕಾರಣ ಹಾಗೂ ಅಸ್ಪೃಶ್ಯತೆಯ ವಿದ್ಯಮಾನದ ವಿಚಿತ್ರ ಸ್ವರೂಪವು ಸಂಶೋಧಕರನ್ನು ಆಕರ್ಷಿಸದೇ ಇರುವುದು ಹಾಗೂ ಅಸ್ಪೃಶ್ಯತೆಯ ಮೂಲದ ಕುರಿತ ಪ್ರಶ್ನೆಗಳನ್ನು ನಿರ್ಲಕ್ಷಿಸಲಾಗಿತ್ತು. ಈ ದೃಷ್ಟಿಯಿಂದ, ಡಾ. ಅಂಬೇಡ್ಕರ್ ಹಲವಾರು ಪ್ರಮುಖ ಪ್ರಶ್ನೆಗಳನ್ನು ಮುಂದಿಡುತ್ತಾರೆ – ‘ಅಸ್ಪೃಶ್ಯರು ಹಳ್ಳಿಯ ಹೊರಗೆ ಏಕೆ ವಾಸಿಸುತ್ತಾರೆ? ಮಾಂಸಾಹಾರ ಸೇವನೆಯು ಅಸ್ಪೃಶ್ಯತೆಗೆ ಹೇಗೆ ಕಾರಣವಾಯಿತು? ಹಿಂದೂಗಳು ಎಂದಿಗೂ ಮಾಂಸಾಹಾರ ಮಾಡಲಿಲ್ಲವೇ? ಬ್ರಾಹ್ಮಣೇತರರು ಮಾಂಸಾಹಾರವನ್ನು ಏಕೆ ತ್ಯಜಿಸಿದರು? ಬ್ರಾಹ್ಮಣರು ಸಸ್ಯಾಹಾರಿಗಳಾದದ್ದು ಏಕೆ?’

ಈ ಪುಸ್ತಕವನ್ನು ಒಂದು ತಾರ್ಕಿಕ ಸಾಕ್ಷ್ಯಾಧಾರದ ಕೃತಿ (inferential evidential work) ಯಾಗಿ ಬರೆಯಲಾಗಿದೆ. ಇತಿಹಾಸದಲ್ಲಿ ಕಂಡುಬರುವ ಅಂತರಗಳ ಕಾರಣದಿಂದಾಗಿ ಅಸ್ಪೃಶ್ಯರ ಮೂಲವು ಏನೆಂದು ಸ್ಪಷ್ಟವಾಗಿದ್ದಿಲ್ಲ, ಈ ಕಾರ್ಯವನ್ನು ಡಾ. ಅಂಬೇಡ್ಕರ್ ವೈಜ್ಞಾನಿಕವಾಗಿ ನಿರ್ವಹಿಸುತ್ತಾರೆ, ಅವರು ಇದನ್ನು ಊಹಾತ್ಮಕವಾಗಿ ಮಾಡದೇ ಇತಿಹಾಸವನ್ನು ಒಂದು ಕಲೆಯಂತೆ ನೋಡುತ್ತ, ತುಂಬಾ ಎಚ್ಚರಿಕೆಯಿಂದ ಕಟ್ಟಿಕೊಡುತ್ತಾರೆ ಅಥವಾ ಪುನರ್ನಿಮಾಣ ಮಾಡುತ್ತಾರೆ. ಇಂತಹ ಪುನರ್ನಿರ್ಮಾಣದ ಬಗ್ಗೆ ಅವರು: ‘ತರಬೇತಿ ಪಡೆದ ಕಲ್ಪನಾಶಕ್ತಿಯಿಲ್ಲದೆ, ಯಾವುದೇ ವೈಜ್ಞಾನಿಕ ವಿಚಾರಣೆ ಫಲಪ್ರದವಾಗಲಾರದು ಮತ್ತು ಪರಿಕಲ್ಪನೆ (hypothesis) ಎಂಬುದು ವಿಜ್ಞಾನದ ಆತ್ಮವಾಗಿದೆ’ ಎಂದು ಬರೆಯುತ್ತಾರೆ.

untocuhbale edit
‘ಅಸ್ಪೃಶ್ಯರು ಯಾರಾಗಿದ್ದರು?’ ಕೃತಿ

ಹಿಂದೂಗಳು ಮಾತ್ರವೇ ಅಸ್ಪೃಶ್ಯತೆಯನ್ನು ಆಚರಿಸುತ್ತಾರೆಯೇ ಎಂಬ ಪ್ರಶ್ನೆಯೊಂದಿಗೆ ಡಾ. ಅಂಬೇಡ್ಕರ್ ಈ ಕೃತಿಯನ್ನು ಪ್ರಾರಂಭಿಸುತ್ತಾರೆ. ಅವರು ವಿಶ್ವದಾದ್ಯಂತ ಇದ್ದ/ಇರುವ ಪ್ರಾಚೀನ ಸಮಾಜದ ಸಾಮಾಜಿಕ ಜೀವನವನ್ನು ಅಧ್ಯಯನ ಮಾಡುತ್ತಾರೆ. ಆದಿಮ ಮನುಷ್ಯನಿಗೆ ಆ ವ್ಯಕ್ತಿಯ ಹುಟ್ಟು, ಯೌವನ, ವಿವಾಹ, ಸಹವಾಸ ಮತ್ತು ಮರಣದ ಮೂಲಕ ಯಾವ ರೀತಿಯಲ್ಲಿ ಆ ವ್ಯಕ್ತಿಯನ್ನು ಮಲೀನಗೊಳಿಸುವ (ಅಥವಾ ಮಲೀನ ಎಂದು ಪರಿಗಣಿಸುವ) ಪ್ರಕ್ರಿಯೆ ಸಂಭವಿಸುತ್ತಿತ್ತು ಎಂಬುದನ್ನು ಪರಿಶೀಲಿಸುತ್ತಾರೆ. ಡಾ. ಅಂಬೇಡ್ಕರ್ ಆಸ್ಟ್ರೇಲಿಯಾ, ಅಮೆರಿಕ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್, ಫಿಜಿ, ಈಜಿಪ್ಟ್, ಗ್ರೀಸ್, ರೋಮ್ನಲ್ಲಿನ ಸಮಾಜಗಳನ್ನು, ಪ್ರಾಚೀನ ಸಮಾಜಗಳು ಹೊಂದಿದ್ದ ಮತ್ತು ಆಚರಿಸುತ್ತಿದ್ದ ಮಡಿಮೈಲಿಗೆ ಮತ್ತು ಅಶುದ್ಧತೆಯ ಪರಿಕಲ್ಪನೆಯನ್ನು ಅಧ್ಯಯನ ಮಾಡುತ್ತಾರೆ. ಹಿಂದೂಗಳೂ ವಾಸ್ತವಿಕವಾದ ಮತ್ತು ಕಾಲ್ಪನಿಕವಾದ ಮಡಿಮೈಲಿಗೆಯ, ಕೆಡುವಿಕೆಯ ಪ್ರಕ್ರಿಯೆಯನ್ನು ಆಚರಿಸುತ್ತಾರೆ ಎಂದು ಅಂಬೇಡ್ಕರ್ ಹೇಳುತ್ತಾರೆ. ಇಡೀ ಸಮುದಾಯಗಳು ಆನುವಂಶಿಕವಾಗಿ ಪಡೆಯುವ ಅಸ್ಪೃಶ್ಯತೆಯ ಸ್ವರೂಪವು ಈ ಪ್ರಕ್ರಿಯೆಯಲ್ಲಿ ಹಿಂದೂಗಳಲ್ಲಿ ಇರುವ ವಿಶಿಷ್ಟ ಅಂಶವಾಗಿದೆ.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ನಂತರ ಅವರು ಕೇವಲ ಸ್ಪರ್ಶದಿಂದ ಮೈಲಿಗೆಯಾಗುವ 429 ಸಮುದಾಯಗಳ ಅಂದರೆ 5-6 ಕೋಟಿ ಜನರ ‘ಭಯಾನಕ ಪಟ್ಟಿ’ಯನ್ನು ಪಟ್ಟಿ ಮಾಡುತ್ತಾರೆ. ಹುಟ್ಟು, ಮದುವೆ ಅಥವಾ ಸಾವಿನಿಂದ ಉಂಟಾಗುವ ಮೈಲಿಗೆಯಲ್ಲಿ ಕಾಣದೇ ಇರುವ ವ್ಯತ್ಯಾಸವನ್ನು ದಾಖಲಿಸಿ, ಈ ಸಮುದಾಯಗಳ ಅಶುದ್ಧತೆ ಶಾಶ್ವತವಾಗಿರುತ್ತದೆ – ಈ ಸಮುದಾಯಗಳು ಅಶುದ್ಧವಾಗಿ ಹುಟ್ಟುತ್ತವೆ, ಅಶುದ್ಧವಾಗಿ ಬದುಕುತ್ತವೆ, ಅಶುದ್ಧವಾಗಿ ಸಾಯುತ್ತವೆ. ಪಾರಂಪರಿಕ ಅಂಶಗಳಿಂದ ಶಾಶ್ವತವಾಗಿರುವ ಅಶುದ್ಧತೆಯನ್ನು ಏನು ಮಾಡಿದರೂ ಶುದ್ಧೀಕರಿಸಲಾಗದು ಎಂದು ದಾಖಲಿಸುತ್ತಾರೆ.

ಡಾ. ಅಂಬೇಡ್ಕರ್ ಅವರ ಪ್ರಕಾರ, ಇಂತಹ ಶಾಶ್ವತ ಅಶುದ್ಧತೆಯು ಹಿಂದೂ ಸಮಾಜದಲ್ಲಿ ಅಸ್ಪೃಶ್ಯರ ಗೆಟ್ಟೋಕರಣ (ಒಂದು ಸಮುದಾಯವನ್ನೇ ಆಯಾ ಊರಿನ ಒಂದೇ ಏರಿಯಾದಲ್ಲಿ ವಾಸಿಸುವಂತೆ ಮಾಡುವ ಪ್ರಕ್ರಿಯೆ (ghettoisation)ಗೆ ಕಾರಣವಾಗಿದೆ – ‘ಅವು ಶಾಶ್ವತ ಪ್ರತ್ಯೇಕತೆಯ ಶಿಬಿರಗಳು’) (permanent segregation camps) ಎಂದು ಕರೆಯುತ್ತಾರೆ. ಅಸ್ಪೃಶ್ಯರು ಹಳ್ಳಿಗಳ ಹೊರಗೆ ಏಕೆ ವಾಸಿಸುತ್ತಿದ್ದಾರೆ ಎಂಬುದನ್ನು ಚರ್ಚಿಸುತ್ತ, ಡಾ. ಅಂಬೇಡ್ಕರ್ ಪ್ರಾರಂಭದಿಂದಲೂ ಅಸ್ಪೃಶ್ಯರು ಹಳ್ಳಿಗಳ ಹೊರಗೆ ವಾಸಿಸುತ್ತಿದ್ದರು ಮತ್ತು ಅಸ್ಪೃಶ್ಯತೆ ಅವರ ಮೇಲೆ ಹೇರಲ್ಪಟ್ಟಾಗ, ಅವರು ಹಳ್ಳಿಯ ಒಳಗೆ ವಾಸಿಸುವುದನ್ನು ನಿಷೇಧಿಸಲಾಯಿತು ಎಂಬ ಥಿಯರಿಯನ್ನು ಸ್ಪಷ್ಟವಾಗಿ ಬೆಂಬಲಿಸುತ್ತಾರೆ. ಅಸ್ಪೃಶ್ಯರು ಮೂಲತಃ ಹಳ್ಳಿಯೊಳಗೆ ವಾಸಿಸುತ್ತಿದ್ದರು ಮತ್ತು ನಂತರ ಊರಿನ ಅಂಚಿನಲ್ಲಿರುವ ಪ್ರದೇಶಗಳಲ್ಲಿ ವಾಸಿಸಲು ಒತ್ತಾಯಿಸಲಾಯಿತು ಎಂಬ ವಾದವನ್ನು ಅವರು ಬಲವಾಗಿ ನಿರಾಕರಿಸುತ್ತಾರೆ. ‘Broken Men’ (ಭಗ್ನ ಮಾನವ) ಅವರೇ ಹೇಗೆ ಅಸ್ಪೃಶ್ಯರು ಎಂಬದರ ಬಗ್ಗೆ ಅತ್ಯಂತ ಆಸಕ್ತಿಕರವಾದ ಸಿದ್ಧಾಂತವನ್ನು ಡಾ. ಅಂಬೇಡ್ಕರ್ ಮಂಡಿಸಿದ್ದಾರೆ.

ಈ ಸಿದ್ಧಾಂತವು ಹೇಳುವುದೇನೆಂದರೆ: ಆದಿಮ ಸಮಾಜವು, ಅಲೆಮಾರಿ ಜೀವನ (Nomadic Life) ದಿಂದ ಒಂದೆಡೆ ನೆಲೆಸುವ ಜೀವನ (Settled Life)ಕ್ಕೆ ಪರಿವರ್ತನೆ ಹೊಂದುತ್ತಿರುವ ಮತ್ತು ನಿರಂತರ ಬುಡಕಟ್ಟು ಯುದ್ಧದ ಸಂದರ್ಭದಲ್ಲಿ, ಬುಡಕಟ್ಟುಗಳು ಸಂಪೂರ್ಣವಾಗಿ ನಾಶವಾಗಲಿಲ್ಲ, ಆದರೆ ಸೋಲು ಕಂಡು ಮತ್ತು ಅಪಾರ ನಾಶ ಅನುಭವಿಸಿದವು. ಅಂತಹ ಸೋಲುಂಡ ಬುಡಕಟ್ಟುಗಳ ಸದಸ್ಯರು ಚದುರಿದ ವ್ಯಕ್ತಿಗಳಾಗಿ ಬದುಕುತ್ತಿದ್ದರು, ಅವರು ‘Broken Men’ ಭಗ್ನ ಮಾನವರಾದರು.

ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

ನಂತರ ಡಾ. ಅಂಬೇಡ್ಕರ್ ಅವರು ಹಿಂದೂಗಳು ಮತ್ತು ಅಸ್ಪೃಶ್ಯರ ನಡುವಿನ ವ್ಯತ್ಯಾಸವು ಬುಡಕಟ್ಟು ಜನರು ಮತ್ತು ಪರಕೀಯ ಬುಡಕಟ್ಟುಗಳಿಂದ ಬಂದ ಭಗ್ನ ಮಾನವ ‘Broken Men’ರ ನಡುವಿನ ವ್ಯತ್ಯಾಸವಾಗಿದೆ ಎಂದು ಹೇಳುತ್ತಾರೆ. ತದನಂತರ ಈ ಭಗ್ನ ಮಾನವʼರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಯಿತು. ಅಂದರೆ, ಅಸ್ಪೃಶ್ಯರು ತಮ್ಮ ಮೂಲದಲ್ಲಿ ‘Broken Men’ ಎಂದು ಅವರು ದೃಢೀಕರಿಸುತ್ತಾರೆ. ಇದರೊಂದಿಗೆ, ಅಸ್ಪೃಶ್ಯತೆಗೆ ಯಾವುದೇ ವೃತ್ತಿಪರ ಆಧಾರವಿಲ್ಲ ಎಂದೂ ಅವರು ಪ್ರತಿಪಾದಿಸುತ್ತಾರೆ.

Asprushya Samudhaya
ಅಸ್ಪೃಶ್ಯ ಸಮುದಾಯ (ಸಾಂದರ್ಭಿಕ ಚಿತ್ರ)

ಹೀಗೆ, ಈ ಆಲೋಚನಾ ಪ್ರಕ್ರಿಯೆಯೊಂದಿಗೆ, ಡಾ. ಅಂಬೇಡ್ಕರ್ ಅಸ್ಪೃಶ್ಯರು ಯಾವಾಗಲೂ ಅಸ್ಪೃಶ್ಯರಾಗಿರಲಿಲ್ಲ ಎಂದೂ ದೃಢೀಕರಿಸುತ್ತಾರೆ. ಅಸ್ಪೃಶ್ಯರ ಪೂರ್ವಜರು ಅಸ್ಪೃಶ್ಯರಾಗಿರಲಿಲ್ಲ, ಆದರೆ ಕೇವಲ ‘Broken Men’ರಾಗಿದ್ದರು ಎಂದು ಅವರು ಬಲವಾಗಿ ವಾದಿಸುತ್ತಾರೆ. ‘Broken Men’ (ಹಳ್ಳಿಯ ಹೊರಗೆ ವಾಸಿಸುತ್ತಿದ್ದವರು) ಮತ್ತು ಹಳ್ಳಿಗರು (ಹಳ್ಳಿಯ ಒಳಗೆ ವಾಸಿಸುತ್ತಿದ್ದವರು) ನಡುವಿನ ವ್ಯತ್ಯಾಸ ಅವರು ಸೇರಿದ ಬುಡಕಟ್ಟುಗಳಲ್ಲಿ ಮಾತ್ರ ಎಂದಿದ್ದಾರೆ. ಆದರೆ ‘Broken Men’ರನ್ನು ಅಸ್ಪೃಶ್ಯರು ಎಂದು ಪರಿಗಣಿಸಲಾಯಿತು. ವಿಶ್ವದ ಇತರೆಡೆ (ಉದಾ. ಐರ್ಲೆಂಡ್‌ನ ಫ್ಯುಡಿರ್ಸ್, ವೇಲ್ಸ್‌ನ ಆಲ್ಟ್ಯೂಡ್ಸ್, ಸಿಮ್ರುವಿನ ಬುಡಕಟ್ಟು ಜನರು) ಕಂಡಬಂದ ಅಸ್ಪೃಶ್ಯತೆಯನ್ನು ಸರಿಪಡಿಸಬಹುದಾಗಿತ್ತು. ಆದರೆ, ಅದಕ್ಕೆ ಭಾರತದಲ್ಲಿ ಅಸ್ಪೃಶ್ಯತೆ ಎಂಬುದು ಶಾಶ್ವತವಾದ ಪ್ರಕ್ರಿಯೆಯಾಯಿತು. ಇಲ್ಲಿ ಬಾಬಾಸಾಹೇಬರು, ವಿಶ್ವಾದ್ಯಂತ ಅಸಮಾನತೆಯನ್ನು ಗಟ್ಟಿಗೊಳಿಸುವ ಧಾರ್ಮಿಕ ಮತ್ತು ಸಾಮಾಜಿಕ ಸಂರಚನೆಗಳ ಬಗ್ಗೆ ಚಿಂತನೆಗೆ ಹಚ್ಚುವ ವಿಶ್ಲೇಷಣೆ ಮಾಡುತ್ತಾರೆ. ಆದರೆ, ಇತರೆಡೆಗಳಿಂತ ಭಿನ್ನವಾಗಿ, ಇಲ್ಲಿ ಹಿಂದೂ ಸಂಸ್ಕೃತಿಯ ವಿಶ್ಲೇಷಣೆಗಿಂತ ಅದರ ವೈಭವೀಕರಿಸುವ ಪ್ರಕ್ರಿಯೆ ಹೆಚ್ಚಾಗಿ ನಡೆದುದರಿಂದ ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯು ಶಾಶ್ವತವಾಯಿತು ಹಾಗೂ ಸಾಮಾಜಿಕ ಅನ್ಯಾಯದ ನಿರಂತರತೆಗೆ ಕಾರಣವಾಯಿತು. ಇದನ್ನು ‘ಅಸ್ಪೃಶ್ಯರು’ ಪುಸ್ತಕದ ಈ ಭಾಗದಲ್ಲಿ ಈ ಅಂಶವನ್ನು ಡಾ. ಅಂಬೇಡ್ಕರ್ ಅದ್ಭುತವಾಗಿ ತಿಳಿಸಿದ್ದಾರೆ.

‘ಅಸ್ಪೃಶ್ಯರು’ ಪುಸ್ತಕದಲ್ಲಿನ ಡಾ. ಅಂಬೇಡ್ಕರ್ ಅವರು ಮಂಡಿಸಿದ ಒಂದು ಮೂಲಭೂತ ಪ್ರತಿಪಾದನೆ; ಹಿಂದೂಗಳು ಮತ್ತು ಅಸ್ಪೃಶ್ಯರ ನಡುವೆ ಯಾವುದೇ ಜನಾಂಗೀಯ ವ್ಯತ್ಯಾಸ (racial difference)ವಿಲ್ಲ ಎಂಬುದು. ಅವರು ಮರಾಠರು ಮತ್ತು ಮಹಾರರು ಒಂದೇ ಕುಲದವರು ಎಂಬ ಉದಾಹರಣೆಗಳನ್ನು ಬಳಸಿ ಅಸ್ಪೃಶ್ಯತೆಯ ಜನಾಂಗೀಯ ಸಿದ್ಧಾಂತ (racial theory) ವನ್ನು ಸಂಪೂರ್ಣವಾಗಿ ನಿರಾಕರಿಸುತ್ತಾರೆ. ಡಾ. ಅಂಬೇಡ್ಕರ್ ಅವರು ಹುಸಿಗೊಳಿಸಿದ ಅಸ್ಪೃಶ್ಯತೆಯ ಮೂಲದ ಇನ್ನೊಂದು ಹಳೆಯ ಸಿದ್ಧಾಂತವೆಂದರೆ ‘ವೃತ್ತಿಯ ಮೂಲ’ (‘Occupational Origin’) – ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಆರ್ಯರೆಂದು ಒಪ್ಪಿಕೊಳ್ಳಲಾಗಿದ್ದು ಸಹ, ಅವರು ಕೂಡ ಉದ್ಯೋಗಗಳಲ್ಲೇ ‘ಅತ್ಯಂತ ಕೊಳಕಾದ’/ ‘filthiest of filthy occupations’ಗಳಲ್ಲಿ ಸ್ಕಾವೆಂಜರ್ಗಳ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ಅವರು ವಿವರವಾಗಿ ಚರ್ಚಿಸುತ್ತಾರೆ. ಆದ್ದರಿಂದ, ಅಸ್ಪೃಶ್ಯರು ‘ಕೊಳಕು’ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದು ಅವರ ಅಸ್ಪೃಶ್ಯತೆಗೆ ಕಾರಣವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಈ ಸಂದರ್ಭದಲ್ಲಿ, ಅಸ್ಪೃಶ್ಯರು ಮತ್ತು ಅಶುದ್ಧರ ನಡುವಿನ ವ್ಯತ್ಯಾಸವನ್ನು ಸಹ ಡಾ. ಅಂಬೇಡ್ಕರ್ ತಿಳಿಸಿದ್ದಾರೆ. ಅಸ್ಪೃಶ್ಯ (‘Untouchables’)ರನ್ನು ಅಶುದ್ಧ (‘Impure’)ರೆಂದು ಪರಿಗಣಿಸುವುದು ತಪ್ಪಾಗುತ್ತದೆ, ಏಕೆಂದರೆ ಅಶುದ್ಧರು ಒಂದು ವರ್ಗವಾಗಿ ಧರ್ಮ ಸೂತ್ರಗಳ ಕಾಲದಲ್ಲಿ ಅಸ್ತಿತ್ವಕ್ಕೆ ಬಂದರೆ, ಅಸ್ಪೃಶ್ಯರು ಕ್ರಿ.ಶ. 400ರ ಕಾಲದ ಬಹಳ ನಂತರ ಅಸ್ತಿತ್ವಕ್ಕೆ ಬಂದರು ಎಂದು ಅವರು ಹೇಳುತ್ತಾರೆ.

ಹಾಗಾದರೆ, ಭಾರತದಲ್ಲಿ ಅಸ್ಪೃಶ್ಯರು ಏಕೆ ಅಸ್ಪೃಶ್ಯರಾದರು ಎಂಬುದನ್ನು ವಿಶ್ಲೇಷಿಸುವಾಗ, ಡಾ. ಅಂಬೇಡ್ಕರ್ ಹೊಸ ಸಿದ್ಧಾಂತಗಳಾಗಿ ಎರಡು ವಿವರಣೆಗಳನ್ನು ನೀಡುತ್ತಾರೆ. ಅಸ್ಪೃಶ್ಯತೆ ಉದ್ಭವಿಸಿ ಮುಂದುವರೆದಿದ್ದು: ಅ- ಬ್ರಾಹ್ಮಣರು ‘ಭಗ್ನ ಮಾನವʼ ‘Broken Men’ರನ್ನು ತಿರಸ್ಕರಿಸಿದ್ದು ಮತ್ತು ಬ- ʻಭಗ್ನ ಮಾನವʼ (‘Broken Men’) ರಿಂದ ಗೋಮಾಂಸ ಭಕ್ಷಣೆಯ ಮುಂದುವರಿಕೆ. ಭಗ್ನ ಮಾನವರು ‘Broken Men’ರು ಬೌದ್ಧರಾಗಿದ್ದ ಕಾರಣಕ್ಕೆ ಬ್ರಾಹ್ಮಣರು ಅವರ ಬಗ್ಗೆ ಅಸಹ್ಯಪಡುತ್ತಿದ್ದರು ಹಾಗೂ ಅವರು ಅವರ ವಿರುದ್ಧ ತಿರಸ್ಕಾರ ಮತ್ತು ದ್ವೇಷವನ್ನು ಬೋಧಿಸಿದರು. ಹಾಗಾಗಿ ಭಗ್ನಮಾನವರನ್ನು ‘Broken Men’ರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಯಿತು ಎಂದು ಅವರು ಹೇಳುತ್ತಾರೆ. ಮುಂದೆ ವಿವರಿಸುತ್ತ ಅಸ್ಪೃಶ್ಯರು ಬ್ರಾಹ್ಮಣರನ್ನು ಅಮಂಗಳಕರರೆಂದು ಪರಿಗಣಿಸಿದ ಸಮಯದಲ್ಲಿಯೇ ಬ್ರಾಹ್ಮಣರು ಬೌದ್ಧರ ಶತ್ರುಗಳಾಗಿದ್ದರು ಮತ್ತು ‘Broken Men’ರು ಬೌದ್ಧ ಧರ್ಮವನ್ನು ಬಿಟ್ಟುಕೊಡದ ಕಾರಣ ಅವರ ಮೇಲೆ ಅಸ್ಪೃಶ್ಯತೆಯನ್ನು ಹೇರಿದರು.

ಇದಲ್ಲದೆ, ಬೌದ್ಧರ ವಿರುದ್ಧ ಬ್ರಾಹ್ಮಣರು ತಿರಸ್ಕಾರ ಮತ್ತು ಅಪಹಾಸ್ಯದ ವಾತಾವರಣವನ್ನು ಸೃಷ್ಟಿಸಿದರು ಎಂದು ಡಾ. ಅಂಬೇಡ್ಕರ್ ಅವರು ಒತ್ತಿ ಹೇಳುತ್ತಾರೆ. ಗೋಮಾಂಸ ಭಕ್ಷಣೆಗಾಗಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಲಾಯಿತು. ಬ್ರಾಹ್ಮಣರು ಕೂಡ ಮೊದಲು ಹಸುಗಳನ್ನು ಕೊಂದು ತಿನ್ನುತ್ತಿದ್ದರು (ಶಾಸ್ತ್ರಗಳು ಮತ್ತು ಮನುಸ್ಮೃತಿಯಲ್ಲಿ ಕಂಡುಬರುವಂತೆ), ಆದರೆ ಅವರು ಗೋ-ಪೂಜೆಯ ಆಚರಣೆಗಳಿಂದಾಗಿ ಗೋಮಾಂಸ ಭಕ್ಷಣೆಯನ್ನು ಬಿಟ್ಟುಬಿಟ್ಟರು ಎಂದು ಅವರು ಹೇಳುತ್ತಾರೆ. ಬ್ರಾಹ್ಮಣರನ್ನು ಅನುಕರಿಸುವ ಬಯಕೆಯಿಂದಾಗಿ ಬ್ರಾಹ್ಮಣೇತರರು ಸಹ ಗೋಮಾಂಸ ಭಕ್ಷಣೆಯನ್ನು ಬಿಟ್ಟುಬಿಟ್ಟರು. ವಾಸ್ತವವಾಗಿ, ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿ ಬದಲಾಗಲು ಕಾರಣ; ಬೌದ್ಧಧರ್ಮದ ಮೇಲೆ ತಮ್ಮ ಶ್ರೇಷ್ಠತೆಯನ್ನು ಸ್ಥಾಪಿಸಲು ಬ್ರಾಹ್ಮಣರು ರೂಪಿಸಿದ ತಂತ್ರ ಎಂದು ಡಾ. ಅಂಬೇಡ್ಕರ್ ಪ್ರತಿಪಾದಿಸುತ್ತಾರೆ. ಭಿಕ್ಕುಗಳು ತಮ್ಮ ಸಸ್ಯಾಹಾರಿ ಪದ್ಧತಿಗಳಿಂದ (ಅಹಿಂಸೆ) ಸಮಾಜದಲ್ಲಿ ಶಕ್ತಿಯನ್ನು ಪಡೆದಿದ್ದರು. ಜನಸಾಮಾನ್ಯರಲ್ಲಿ ಸರ್ವೋಚ್ಚ ಸ್ಥಾನವನ್ನು ಪಡೆಯಲು ಬ್ರಾಹ್ಮಣ-ಬೌದ್ಧ ಜಗಳದ ಪರಿಣಾಮವಾಗಿ ಗೋಪೂಜೆಯ ಆಚರಣೆ ಆರಂಭವಾಯಿತು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿರಿ: ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’

ಹೀಗೆ, ಬ್ರಾಹ್ಮಣರು ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಿ ಮುಂದುವರೆದ ನಂತರ, ಹಸುವು ಪವಿತ್ರ ಸ್ಥಾನವನ್ನು ಪಡೆದಾಗ, ಭಗ್ನ ಮಾನವ ‘Broken Men’ ಮುಂದುವರೆಸಿದ ಗೋಮಾಂಸ ಭಕ್ಷಣೆಯನ್ನು ಪಾಪ ಎಂದು ಪರಿಗಣಿಸಲಾಯಿತು ಹಾಗೂ ಅವರು ಸಂಪರ್ಕ (association)ಕ್ಕೆ ಅಯೋಗ್ಯರಾದರು, ಅಂದರೆ ಅಸ್ಪೃಶ್ಯರಾದರು. ಡಾ. ಅಂಬೇಡ್ಕರ್ ಅವರ ಪ್ರಕಾರ, ಭಗ್ನ ಮಾನವರು ‘Broken Men’ ಕೂಡ ಬ್ರಾಹ್ಮಣರನ್ನು ಅನುಕರಿಸಲು ಪ್ರಯತ್ನಿಸಿ ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಅನುಕರಣೆಯು ತುಂಬಾ ದುಬಾರಿಯಾಗಿತ್ತು. ಸತ್ತ ಹಸುವಿನ ಮಾಂಸವು ಅವರ ಪ್ರಮುಖ ಆಹಾರವಾಗಿತ್ತು. ಅದೂ ಇಲ್ಲವಾದಲ್ಲಿ ಅವರು ಹಸಿವಿನಿಂದ ಸಾಯುತ್ತಿದ್ದರು’. ಕೊನೆಗೆ, ಡಾ. ಅಂಬೇಡ್ಕರ್ ʻಭಗ್ನ ಮಾನವʼ ‘Broken Men’ರನ್ನು ಅಸ್ಪೃಶ್ಯರೆಂದು ಪರಿಗಣಿಸಲಾದ ಸಮಯ ಮತ್ತು ಅಸ್ಪೃಶ್ಯತೆ ಉದ್ಭವಿಸಿದ ಕಾಲಾವಧಿಯನ್ನು ನಿಗದಿಪಡಿಸುತ್ತಾರೆ – ಕ್ರಿ.ಶ. 400.

bhuddism
ಬುದ್ಧ ಮತ್ತು ಆತನ ಅನುಯಾಯಿಗಳು (ಸಾಂದರ್ಭಿಕ ಚಿತ್ರ)

ಡಾ. ಅಂಬೇಡ್ಕರ್ ಅವರು ‘ಅಸ್ಪೃಶ್ಯರು’ ಪುಸ್ತಕದಲ್ಲಿ ಮಾಡಿದ ಎಲ್ಲಾ ಅವಲೋಕನಗಳು ನಿರ್ಣಾಯಕವಾಗಿವೆ. ಈ ಕೃತಿಯ ನಂತರದ ಕಾಲದಲ್ಲಿ ಡಾ. ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ಮೂಲದ ಬಗ್ಗೆ ಅಥವಾ ಗೋಮಾಂಸ ಭಕ್ಷಣೆ ಪದ್ಧತಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಿದ ನಿದರ್ಶನಗಳು ಕಂಡುಬಂದಿಲ್ಲ. ವಾಸ್ತವವಾಗಿ, ಭಾರತದ ಹಲವಾರು ರಾಜ್ಯಗಳಲ್ಲಿ ಗೋಮಾಂಸ ಭಕ್ಷಣೆ ನಿಷೇಧಿಸುವ ಕಾನೂನುಗಳು ಇತ್ತೀಚೆಗೆ ಭುಗಿಲೆದ್ದಿರುವ ಬೆಳವಣಿಗೆಗಳೊಂದಿಗೆ, ‘ಅಸ್ಪೃಶ್ಯರು’ ಪುಸ್ತಕದಲ್ಲಿ ಒತ್ತಿ ಹೇಳಲಾದ ಗೋಮಾಂಸ ಭಕ್ಷಣೆ ಪದ್ಧತಿಗಳನ್ನು ಮರುಪರಿಶೀಲಿಸುವುದು ಅಗತ್ಯವಾಗಿದೆ. ಡಾ. ಅಂಬೇಡ್ಕರ್ ಅವರು ಪುಸ್ತಕದಲ್ಲಿ ಮಾಡಿರುವ ಅವಲೋಕನಗಳ ಸಂದರ್ಭದಲ್ಲಿ, ಗೋಮಾಂಸ ಭಕ್ಷಣೆಯನ್ನು ಕೆಲವು ಧರ್ಮಗಳಿಗೆ ಅಥವಾ ಕೆಲವು ಜಾತಿಗಳಿಗೆ ಮಾತ್ರ ಜೋಡಿಸಿ – ಆ ಮೂಲಕ ಅವುಗಳನ್ನು ಬಹಿಷ್ಕರಿಸುವುದು – ಅಸಂಬದ್ಧವಾಗುತ್ತದೆ.

‘ದಿ ಅನ್‌ಟಚೇಬಲ್ಸ್’ ಶತಮಾನಗಳಿಂದ ನಿರಂತರವಾಗಿ ನಡೆಯುತ್ತಿರುವ ಅಮಾನವೀಯವಾದ ಅಸ್ಪೃಶ್ಯತೆಯ ವಾಸ್ತವತೆಯನ್ನು ಸ್ಪಷ್ಟಪಡಿಸುತ್ತದೆ. ಅವರು ಅಸ್ಪೃಶ್ಯತೆಯನ್ನು ಕೇವಲ ನಿರ್ದಿಷ್ಟ ಸಮುದಾಯದಲ್ಲಿ ಜನಿಸಿದ ಕಾರಣದಿಂದಾಗಿ ಆ ಜನರ ಮೇಲೆ ಹೇರಲಾದ ‘ಸಾಮಾಜಿಕ ಅಸಹ್ಯ’ ಎಂದು ಕರೆಯುತ್ತಾರೆ. ಅಸ್ಪೃಶ್ಯತೆಯ ಮೂಲಗಳನ್ನು ಹುಡುಕುವ ಈ ಐತಿಹಾಸಿಕ ಪ್ರಯಾಣದೊಂದಿಗೆ, ಅಂದರೆ ಅಸ್ಪೃಶ್ಯತೆಗೆ ಐತಿಹಾಸಿಕವಾಗಿ ಭಗ್ನ ಮಾನವ ‘Broken Men’ನ ಸಿದ್ಧಾಂತವೇ ಕಾರಣವೆಂದು ಹೇಳುವುದರ ಮೂಲಕ, ಹಾಗೂ ಅವರ ಮೇಲೆ ಸಾಮಾಜಿಕವಾಗಿ ಹೇರಲ್ಪಟ್ಟ ಆಹಾರ ಅಭ್ಯಾಸಗಳು ಕಾರಣ ಎಂದು ಹೇಳುವುದರ ಮೂಲಕ, ಡಾ. ಅಂಬೇಡ್ಕರ್ ಅವರು ಹುಟ್ಟಿನ ಆಧಾರಿತ, ಉದ್ಯೋಗ ಆಧಾರಿತ ಮತ್ತು ಜನಾಂಗ ಆಧಾರಿತ ತಾರತಮ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?

`ದಿ ಅನ್‌ಟಚೇಬಲ್ಸ್’ ಅಸ್ಪೃಶ್ಯತೆಯ ಮೂಲದ ಬಗ್ಗೆ ಒಂದು ಆಕರ್ಷಕ ವಿಶ್ಲೇಷಣೆಯಾಗಿದೆ, ಸಮಾನತೆ ಮತ್ತು ತಾರತಮ್ಯವಿಲ್ಲದ ಸಮಾಜಕ್ಕಾಗಿ ಮಾಡಿದ ಈ ವಾದಗಳು ಬಹಳ ಶಕ್ತಿಶಾಲಿಯಾಗಿವೆ. ಅಸ್ಪೃಶ್ಯತೆಯು ಹಿಂದೂ ಧರ್ಮಕ್ಕೆ ಅಂತರ್ಗತವಾಗಿರುವ ಅಥವಾ ಸಹಜವಾದ ಲಕ್ಷಣವಲ್ಲ, ಬದಲಾಗಿ ಅಧಿಕಾರ ಮತ್ತು ಸವಲತ್ತುಗಳನ್ನು ಶಾಶ್ವತಗೊಳಿಸುವ ದೃಷ್ಟಿಯಿಂದ ಬ್ರಾಹ್ಮಣವಾದದಿಂದ ಜಾರಿಗೊಳಿಸಲ್ಪಟ್ಟ ಸಾಮಾಜಿಕ ನಿರ್ಮಾಣವಾಗಿ ಸೃಷ್ಟಿಸಲ್ಪಟ್ಟಿದೆ (ಮತ್ತು ಅಭಿವೃದ್ಧಿ ಹೊಂದುತ್ತಿದೆ) ಎಂದು ಡಾ. ಅಂಬೇಡ್ಕರ್ ಹೇಳುತ್ತಾರೆ. ಈ ವಾದವು ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ಮತ್ತು ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ವಾದವಾಗಿದೆ. ಇನ್ನು ಮುಖ್ಯವಾಗಿ ಈ ವಾದವನ್ನು 1948ರಲ್ಲಿಯೇ ಮಾಡಲಾಗಿತ್ತು.

ನಾವು ಇನ್ನೂ ಈ ಹೇರಲ್ಪಟ್ಟ ಸಾಮಾಜಿಕ ನಿರ್ಮಾಣವಾದ ಅಸ್ಪೃಶ್ಯತೆಯ ಭಾರದ ಅಡಿಯಲ್ಲಿ ನರಳುತ್ತಿದ್ದೇವೆ ಎಂಬುದು ನಿಜ. ಆದರೆ, ಡಾ. ಅಂಬೇಡ್ಕರ್ ಅವರ ‘ದಿ ಅನ್ಟಚೇಬಲ್ಸ್’ನಂತಹ ವೈಜ್ಞಾನಿಕವಾಗಿ ವಿಶ್ಲೇಷಿಸಲ್ಪಟ್ಟ, ಆಕರ್ಷಕವಾಗಿ ವಾದಿಸಲ್ಪಟ್ಟ ಮತ್ತು ಅತ್ಯುತ್ತಮವಾಗಿ ವಿವರಿಸಲ್ಪಟ್ಟ ಗ್ರಂಥಗಳನ್ನು ಹಿಂತಿರುಗಿ ನೋಡಬಹುದು ಮತ್ತು ಅವುಗಳ ಮೇಲೆ ಅವಲಂಬಿತರಾಗಬಹುದು ಎಂಬುದೇ ಒಂದು ದೊಡ್ಡ ತೃಪ್ತಿ.

Ashvini Obalesh2
ಅಶ್ವಿನಿ ಓಬಳೇಶ್
+ posts

ಕರ್ನಾಟಕ ಹೈಕೋರ್ಟ್ ವಕೀಲರಾದ ಅಶ್ವಿನಿ ಓಬಳೇಶ್, ಧ್ವನಿ ಲೀಗಲ್ ಟ್ರಸ್ಟ್ ಸಂಸ್ಥಾಪಕರೂ ಹೌದು. ಇವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿವಿಯಿಂದ ಎಲ್‌ಎಲ್‌ಬಿ (ಆನರ್ಸ್), ಎಲ್‌ಎಲ್‌ಎಂ ಪದವಿಗಳನ್ನು ಪಡೆದಿದ್ದಾರೆ. ಇವರು ಬಿ.ಎ., ಎಲ್‌ಎಲ್‌ಬಿ (ಆನರ್ಸ್) ವ್ಯಾಸಂಗದ ವೇಳೆ ವಿಕ್ರಮ್ ಸಿಂಗ್ ಚಿನ್ನದ ಪದಕವನ್ನು ಗಳಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಇವರು ಕಾರ್ಪೊರೇಟ್, ಸಾರ್ವಜನಿಕ ನೀತಿಗಳನ್ನು ಒಳಗೊಂಡಂತೆ ಕಾನೂನಿನ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದು, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳೊಂದಿಗೂ ಗುರುತಿಸಿಕೊಂಡಿದ್ದಾರೆ. ಇವರು ನಡೆಸುತ್ತಿರುವ 'ಧ್ವನಿ ಲೀಗಲ್ ಟ್ರಸ್ಟ್' ಹಿಂಸೆಗೆ ಒಳಗಾದ ಮಹಿಳೆಯರು ಮತ್ತು ಬಡ, ಹಿಂದುಳಿದ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಅಶ್ವಿನಿ ಓಬಳೇಶ್
ಅಶ್ವಿನಿ ಓಬಳೇಶ್
ಕರ್ನಾಟಕ ಹೈಕೋರ್ಟ್ ವಕೀಲರಾದ ಅಶ್ವಿನಿ ಓಬಳೇಶ್, ಧ್ವನಿ ಲೀಗಲ್ ಟ್ರಸ್ಟ್ ಸಂಸ್ಥಾಪಕರೂ ಹೌದು. ಇವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿವಿಯಿಂದ ಎಲ್‌ಎಲ್‌ಬಿ (ಆನರ್ಸ್), ಎಲ್‌ಎಲ್‌ಎಂ ಪದವಿಗಳನ್ನು ಪಡೆದಿದ್ದಾರೆ. ಇವರು ಬಿ.ಎ., ಎಲ್‌ಎಲ್‌ಬಿ (ಆನರ್ಸ್) ವ್ಯಾಸಂಗದ ವೇಳೆ ವಿಕ್ರಮ್ ಸಿಂಗ್ ಚಿನ್ನದ ಪದಕವನ್ನು ಗಳಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಇವರು ಕಾರ್ಪೊರೇಟ್, ಸಾರ್ವಜನಿಕ ನೀತಿಗಳನ್ನು ಒಳಗೊಂಡಂತೆ ಕಾನೂನಿನ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದು, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳೊಂದಿಗೂ ಗುರುತಿಸಿಕೊಂಡಿದ್ದಾರೆ. ಇವರು ನಡೆಸುತ್ತಿರುವ 'ಧ್ವನಿ ಲೀಗಲ್ ಟ್ರಸ್ಟ್' ಹಿಂಸೆಗೆ ಒಳಗಾದ ಮಹಿಳೆಯರು ಮತ್ತು ಬಡ, ಹಿಂದುಳಿದ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...