ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಹೋಬಳಿಯ ಬಿಚ್ಚಾಲಿ ಗ್ರಾಮ ಹಾಗೂ ಬಿಚ್ಚಾಲಿ ಕ್ಯಾಂಪ್‌ನ ಪುನರ್ವಸತಿ ಪ್ರದೇಶದಲ್ಲಿ ಚರ್ಚ್ ಹಾಗೂ ಆಂಜನೇಯ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಉಂಟಾಗಿರುವ ಜಾಗದ ವಿವಾದದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪುನರ್ವಸತಿ ಪ್ರದೇಶದಲ್ಲಿ ಈಗಾಗಲೇ ಚರ್ಚ್ ನಿರ್ಮಾಣಗೊಂಡಿದ್ದು, ಕೆಲ ದಿನಗಳ ಹಿಂದೆ ಚರ್ಚ್‌ನ ಮುಂಭಾಗದಲ್ಲಿ ಏಕಾಏಕಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪುನರ್ವಸತಿ ಕೇಂದ್ರಕ್ಕೆ ಇನ್ನೂ ಯಾರೂ ಸ್ಥಳಾಂತರಗೊಂಡಿಲ್ಲ. ಅಲ್ಲದೆ, ಪುನರ್ವಸತಿ ಕೇಂದ್ರದ ವಿನ್ಯಾಸ ನಕ್ಷೆ ಹಾಗೂ ಜಾಗದ ವಿಚಾರದಲ್ಲಿ ಎರಡೂ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.
ಇದೇ ವಿಚಾರವಾಗಿ ಮಂಗಳವಾರ ಸ್ಥಳದಲ್ಲಿ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ವಿಷಯ ತಿಳಿದು ರಾಯಚೂರು ಪೊಲೀಸ್ ಉಪಾಧೀಕ್ಷಕರು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಶಾಂತಿ ಸಭೆ ನಡೆಸಿದರು. ಸಭೆಯಲ್ಲಿ ಉಭಯ ಗುಂಪಿನವರಿಗೆ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಕುರಿತು ತಿಳುವಳಿಕೆ ನೀಡಲಾಯಿತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಪೊಲೀಸ್ ಉಪಾಧೀಕ್ಷಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)–2023ರ ಕಲಂ 163ರ ಅನ್ವಯ ಆ.11ರ ಸಂಜೆ 6.30ರಿಂದ ಆ.18ರ ಬೆಳಿಗ್ಗೆ 6.30ರವರೆಗೆ ಬಿಚ್ಚಾಲಿ ಗ್ರಾಮ, ಬಿಚ್ಚಾಲಿ ಕ್ಯಾಂಪ್ ಹಾಗೂ ಪುನರ್ವಸತಿ ಪ್ರದೇಶದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜರಾಮ್ ಟ್ರೇಡರ್ಸ್ ಗೋದಾಮಿಗೆ ಬೆಂಕಿ: ₹30 ಲಕ್ಷ ಮೌಲ್ಯದ ಸಾಮಗ್ರಿ ಭಸ್ಮ
ಈ ಅವಧಿಯಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಸಾರ್ವಜನಿಕರು ಶಾಂತಿ ಕಾಪಾಡಿ, ಯಾವುದೇ ವದಂತಿಗಳಿಗೆ ಕಿವಿಗೊಡದೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.




