ಒಮ್ಮೆ ರಾಜಾಶ್ರಯ ಪಡೆದಿದ್ದ ಪಾರಂಪರಿಕ ಕುಲಕಸುಬುಗಳಲ್ಲಿ ಒಂದಾಗಿದ್ದ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ವೃತ್ತಿ ಇಂದು ಹಲವು ಸವಾಲುಗಳ ನಡುವೆ ಸಿಲುಕಿದೆ. ಹೆಚ್ಚುತ್ತಿರುವ ಚಿನ್ನದ ಬೆಲೆ, ವ್ಯಾಪಾರ-ವಹಿವಾಟಿನ ಕುಸಿತ, ಕಾರ್ಪೊರೇಟ್ ಮಾದರಿಯ ಜ್ಯುವೆಲ್ಲರಿ ಸಂಸ್ಥೆಗಳ ಬೆಳವಣಿಗೆ, ಬಂಡವಾಳದ ಕೊರತೆ ಹಾಗೂ ಸರ್ಕಾರದ ನಿರ್ದಿಷ್ಟ ಸೌಲಭ್ಯಗಳ ಅಭಾವದಿಂದ ಸಾಂಪ್ರದಾಯಿಕ ಅಕ್ಕಸಾಲಿಗರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಪಾರಂಪರಿಕ ವೃತ್ತಿಯ ಉಳಿವಿಗಾಗಿ ಸಂಘಟಿತ ಹೋರಾಟಕ್ಕೆ ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಮುಂದಾಗಿದೆ.

ವೃತ್ತಿಬಾಂಧವರನ್ನು ಸಂಘಟಿಸುವುದು, ಸಾಂಪ್ರದಾಯಿಕ ಕುಲಕಸುಬನ್ನು ಉಳಿಸಿ ಬೆಳೆಸುವುದು ಹಾಗೂ ಕೆಲಸಗಾರರ ಹಿತಾಸಕ್ತಿಗಾಗಿ ಧ್ವನಿ ಎತ್ತುವ ಉದ್ದೇಶದಿಂದ 2001ರಲ್ಲಿ ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಸ್ಥಾಪನೆಯಾಯಿತು. ಕಳೆದ 25 ವರ್ಷಗಳಲ್ಲಿ ಸಂಘವು ವೃತ್ತಿ ಕೌಶಲ್ಯ ತರಬೇತಿ, ಅಶಕ್ತರಿಗೆ ಸಹಾಯಧನ, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ವೃತ್ತಿಬಾಂಧವರಿಗೆ ಕಾನೂನಾತ್ಮಕ ಸಮಸ್ಯೆಗಳು ಎದುರಾದಾಗಲೂ ಸಂಘವು ಅವರ ಪರವಾಗಿ ಹೋರಾಟ ನಡೆಸಿದೆ.
ಸಂಘ ಇದೀಗ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ 2027ರ ಜನವರಿ 3ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಚಿನ್ನ-ಬೆಳ್ಳಿ ಕೆಲಸಗಾರರ ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಿದೆ. ಪಾರಂಪರಿಕ ಚಿನ್ನ-ಬೆಳ್ಳಿ ಕೆಲಸಗಾರರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವುದು, ವೃತ್ತಿಗೆ ಅಗತ್ಯವಾದ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ಅಳಿವಿನಂಚಿನಲ್ಲಿರುವ ಕುಲಕಸುಬನ್ನು ಉಳಿಸುವ ಕುರಿತು ಸರ್ಕಾರದ ಗಮನ ಸೆಳೆಯುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ.
ಆರೋಗ್ಯ ಭದ್ರತೆ, ಕಡಿಮೆ ಬಡ್ಡಿಯ ಸಾಲಕ್ಕೆ ಆಗ್ರಹ
ಈ ದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ ಮಾರಾಳಿ, ಚಿನ್ನ-ಬೆಳ್ಳಿ ಕೆಲಸಗಾರರ ಕುಲಕಸುಬು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದೆ ಎಂದು ಹೇಳಿದರು.
ಪಾರಂಪರಿಕವಾಗಿ ಈ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿರುವ ಕೆಲಸಗಾರರಿಗೆ ಸರ್ಕಾರದಿಂದ ನಿರ್ದಿಷ್ಟ ಆರ್ಥಿಕ ನೆರವು ಹಾಗೂ ಸೌಲಭ್ಯಗಳು ದೊರೆಯದಿದ್ದರೆ ಕುಲಕಸುಬು ಮತ್ತಷ್ಟು ಅವನತಿಯತ್ತ ಸಾಗುವ ಆತಂಕವಿದೆ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಸೇರಿಸಲಾಗಿದ್ದರೂ, ಚಿನ್ನ-ಬೆಳ್ಳಿ ಕೆಲಸಗಾರರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ದೊರೆಯುತ್ತಿಲ್ಲ. ವಿಶೇಷವಾಗಿ ಆರೋಗ್ಯ ಭದ್ರತೆಯ ಕೊರತೆ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದರು.
ವೃತ್ತಿಯ ಸಂದರ್ಭದಲ್ಲಿ ಬಳಸಲಾಗುತ್ತಿದ್ದ ಕೆಲವು ರಾಸಾಯನಿಕ ಪದಾರ್ಥಗಳಿಂದಾಗಿ ಹಲವು ಕೆಲಸಗಾರರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮರ್ಪಕ ಆರೋಗ್ಯ ವಿಮೆ ಹಾಗೂ ಚಿಕಿತ್ಸಾ ಭದ್ರತೆ ಅಗತ್ಯವಾಗಿದೆ. ಕೆಲಸಗಾರರ ಆರೋಗ್ಯ ರಕ್ಷಣೆಗೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ರವಿಚಂದ್ರ ಆಚಾರ್ ಮಾರಾಳಿ ಆಗ್ರಹಿಸಿದರು.
ಚಿನ್ನದ ಬೆಲೆ ಏರಿಕೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಬೆಳವಣಿಗೆಯಿಂದ ಸಾಂಪ್ರದಾಯಿಕ ಕೆಲಸಗಾರರಿಗೆ ಅಗತ್ಯವಾದ ವರ್ಕಿಂಗ್ ಕ್ಯಾಪಿಟಲ್ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಕೆಲಸಗಾರನಿಗೂ ಕನಿಷ್ಠ ₹10 ಲಕ್ಷದವರೆಗೆ ಸಬ್ಸಿಡಿ ಸಾಲ ಅಥವಾ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಇದರಿಂದ ಕೆಲಸಗಾರರು ಸ್ವತಂತ್ರವಾಗಿ ತಮ್ಮ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ನೀಡಲಾಗುವ ಸಾರ್ವಜನಿಕ ಸಲಹೆಗಳು ದೇಶದ ಆರ್ಥಿಕ ದೃಷ್ಟಿಯಿಂದ ಇರಬಹುದು. ಆದರೆ ಚಿನ್ನ-ಬೆಳ್ಳಿ ಕೆಲಸವನ್ನೇ ಜೀವನಾಧಾರವಾಗಿಸಿಕೊಂಡಿರುವ ಸಾವಿರಾರು ಕುಟುಂಬಗಳ ಬದುಕಿನ ಮೇಲೂ ಇದರ ಪರಿಣಾಮ ಬೀರುತ್ತದೆ. ಹೀಗಾಗಿ ಆರ್ಥಿಕ ನೀತಿಗಳನ್ನು ರೂಪಿಸುವಾಗ ಪಾರಂಪರಿಕ ವೃತ್ತಿಗಳ ಮೇಲೆ ಬೀರುವ ಪರಿಣಾಮವನ್ನೂ ಸರ್ಕಾರ ಪರಿಗಣಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಚಿನ್ನ-ಬೆಳ್ಳಿ ಕೆಲಸಗಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸುವ ಉದ್ದೇಶದಿಂದ ಜನವರಿ 3ರಂದು ರಾಜ್ಯಮಟ್ಟದ ಸಮಾವೇಶ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಪ್ರಮುಖ ಸಚಿವರನ್ನು ಸಮಾವೇಶಕ್ಕೆ ಆಹ್ವಾನಿಸಿ, ಕೆಲಸಗಾರರ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದು ರವಿಚಂದ್ರ ಆಚಾರ್ ಮಾರಾಳಿ ಹೇಳಿದರು.
ಕಾರ್ಪೊರೇಟ್ ಜ್ಯುವೆಲ್ಲರಿ ಬೆಳವಣಿಗೆ: ಸ್ಥಳೀಯ ಕೆಲಸಗಾರರಿಗೆ ಹೊಡೆತ
ಈ ದಿನ.ಕಾಮ್ ಜೊತೆ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಕಿಶೋರ್ ಆಚಾರ್ಯ, 2001ರಲ್ಲಿ ಚಿನ್ನ-ಬೆಳ್ಳಿ ಕೆಲಸಗಾರರ ಸಮಸ್ಯೆಗಳಿಗೆ ಸಂಘಟಿತ ಧ್ವನಿ ನೀಡುವ ಉದ್ದೇಶದಿಂದ ಸಂಘ ಸ್ಥಾಪಿಸಲಾಯಿತು. ಆರಂಭದಲ್ಲಿ ಕೆಲಸದ ಸಮಸ್ಯೆ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಚಾರಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಕೆಲಸಗಾರರು ಎದುರಿಸುತ್ತಿದ್ದರು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹಿರಿಯ ವೃತ್ತಿಬಾಂಧವರು ಸಂಘವನ್ನು ರೂಪಿಸಿದರು ಎಂದು ಹೇಳಿದರು.
ಸಂಘ ಸ್ಥಾಪನೆಯ ಬಳಿಕ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗಿದೆ. ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳಿಗಾಗಿ ಸಚಿವರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ಮೂಲಕ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವೃತ್ತಿಯ ಮೇಲಿನ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಕೋವಿಡ್ ನಂತರ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ವ್ಯಾಪಾರ-ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಇದರ ನೇರ ಪರಿಣಾಮ ಸ್ಥಳೀಯ ಚಿನ್ನ-ಬೆಳ್ಳಿ ಕೆಲಸಗಾರರ ಮೇಲೆ ಬಿದ್ದಿದೆ. ಉಡುಪಿಯಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಕಾರ್ಪೊರೇಟ್ ಮಟ್ಟದ ಜ್ಯುವೆಲ್ಲರಿ ಸಂಸ್ಥೆಗಳು ಹಾಗೂ ಶೋರೂಮ್‌ಗಳು ಹೆಚ್ಚಾಗಿದ್ದು, ಸಾಂಪ್ರದಾಯಿಕ ಸ್ಥಳೀಯ ಕೆಲಸಗಾರರಿಗೆ ಕೆಲಸದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಕಿಶೋರ್ ಆಚಾರ್ಯ ಹೇಳಿದರು.
ಆಧುನಿಕ ಯಂತ್ರೋಪಕರಣಗಳಿಗೆ ದೊಡ್ಡ ಪ್ರಮಾಣದ ಬಂಡವಾಳದ ಅಗತ್ಯವಿದೆ. ₹50 ಲಕ್ಷದಿಂದ ₹1 ಕೋಟಿವರೆಗೆ ಹೂಡಿಕೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಸಣ್ಣ ಪ್ರಮಾಣದ ಪಾರಂಪರಿಕ ಕೆಲಸಗಾರರು ಖರೀದಿಸುವುದು ಕಷ್ಟ. ದೊಡ್ಡ ಬಂಡವಾಳ ಹೊಂದಿರುವ ಸಂಸ್ಥೆಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಣ್ಣ ಕೆಲಸಗಾರರು ಸ್ಪರ್ಧಿಸಲು ಸಾಧ್ಯವಾಗದೆ ವೃತ್ತಿಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿವರಿಸಿದರು.
ಚಿನ್ನ-ಬೆಳ್ಳಿ ಕೆಲಸಗಾರರು ಅಸಂಘಟಿತ ಕಾರ್ಮಿಕ ವಲಯದಲ್ಲಿದ್ದರೂ, ತಮಗೆ ಅಗತ್ಯವಿರುವ ಕೆಲವು ನಿರ್ದಿಷ್ಟ ಸೌಲಭ್ಯಗಳನ್ನು ಒದಗಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಭರವಸೆಗಳು ದೊರೆತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಸೌಲಭ್ಯಗಳು ಲಭಿಸಿಲ್ಲ ಎಂದು ಅವರು ಹೇಳಿದರು.

25 ಸಾವಿರಕ್ಕೂ ಅಧಿಕ ವೃತ್ತಿಬಾಂಧವರ ಸಮಾವೇಶದ ಗುರಿ
ಸಂಘದ 25ನೇ ವರ್ಷದ ಸಂಭ್ರಮವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಪಾರಂಪರಿಕ ವೃತ್ತಿಯ ಭವಿಷ್ಯದ ಕುರಿತು ಸರ್ಕಾರದ ಗಮನ ಸೆಳೆಯುವ ವೇದಿಕೆಯಾಗಿ ಬಳಸಿಕೊಳ್ಳಲು ಸಂಘ ನಿರ್ಧರಿಸಿದೆ. ಇದರ ಭಾಗವಾಗಿ ಜನವರಿ 3ರಂದು ರಾಜ್ಯಮಟ್ಟದ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಯುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿನ್ನ-ಬೆಳ್ಳಿ ಕೆಲಸಗಾರರನ್ನು ಒಗ್ಗೂಡಿಸುವ ಉದ್ದೇಶ ಹೊಂದಲಾಗಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವಂತೆ ಮಾಡುವ ಗುರಿಯನ್ನು ಸಂಘ ಹೊಂದಿದೆ. ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯದ ಸಚಿವರು ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳನ್ನು ಸಮಾವೇಶಕ್ಕೆ ಆಹ್ವಾನಿಸುವ ಉದ್ದೇಶವಿದೆ.
ಸಮಾವೇಶದ ಮೂಲಕ ಚಿನ್ನ-ಬೆಳ್ಳಿ ಕೆಲಸಗಾರರಿಗೆ ಆರೋಗ್ಯ ವಿಮೆ, ಕಡಿಮೆ ಬಡ್ಡಿದರದ ಸಾಲ, ಆರ್ಥಿಕ ನೆರವು, ವೃತ್ತಿ ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಸಾಂಪ್ರದಾಯಿಕ ಕುಲಕಸುಬು ಮುಂದಿನ ಪೀಳಿಗೆಗೂ ಉಳಿಯಬೇಕಾದರೆ ಸರ್ಕಾರದ ನೀತಿ-ಬೆಂಬಲ ಅತ್ಯಗತ್ಯ ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ.
ರಜತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಜೊತೆಗೆ ಸಂಘದ 25 ವರ್ಷಗಳ ಪಯಣ, ಸಾಧನೆ ಹಾಗೂ ವೃತ್ತಿಬಾಂಧವರ ಹೋರಾಟವನ್ನು ದಾಖಲಿಸುವ ‘ಸ್ಮರಣ ಸಂಚಿಕೆ’ಯನ್ನೂ ಹೊರತರಲು ಸಂಘ ಯೋಜಿಸಿದೆ.
ಅಕ್ಕಸಾಲಿಗರ ಕೈಚಳಕದಲ್ಲಿ ರೂಪುಗೊಳ್ಳುವ ಚಿನ್ನ-ಬೆಳ್ಳಿಯ ಆಭರಣಗಳು ಕೇವಲ ವ್ಯಾಪಾರದ ವಸ್ತುಗಳಲ್ಲ; ಅವು ಶತಮಾನಗಳ ಪಾರಂಪರಿಕ ಕೌಶಲ್ಯ ಮತ್ತು ಬದುಕಿನ ಭಾಗ. ಈ ಕೌಶಲ್ಯ ಮುಂದಿನ ಪೀಳಿಗೆಗೂ ಉಳಿಯಬೇಕಾದರೆ ವೃತ್ತಿಬಾಂಧವರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ರಜತ ಮಹೋತ್ಸವದ ಸಮಾವೇಶ ಮಹತ್ವ ಪಡೆದುಕೊಂಡಿದೆ.






