“ಅಕ್ಟೋಬರ್ ಮೊದಲ ವಾರದೊಳಗೆ ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಸಂಯೋಜಕರನ್ನಾಗಿ ಆಯ್ಕೆ ಮಾಡಿಕೊಳ್ಳದಿದ್ದರೆ ರಾಜ್ಯದ್ಯಂತ ಹೋರಾಟ ಅನಿವಾರ್ಯ” ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಉನ್ನತ ಶಿಕ್ಷಣ ಇಲಾಖೆ ಶೈಕ್ಷಣಿಕ ಸಮಾಜಕರ ನೇಮಕಾತಿ ಸಂಬಂಧ ೨೦೨೬-೨೭ ನೇ ಸಾಲಿಗೆ ಸುತ್ತೋಲೆ ಹೊರಡಿಸಿತ್ತು. ಕಾಲೇಜುಗಳು ಆರಂಭವಾಗಿ ಎರಡು ಮೂರು ತಿಂಗಳಾದರೂ ಇಲ್ಲಿವರೆಗೆ ಶೈಕ್ಷಣಿಕ ಸಂಯೋಜಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿಲ್ಲ. ಅರ್ಹತೆ ಇಲ್ಲದ ಸುಮಾರು ೧೫-೨೦ ವರ್ಷಗಳಿಂದ ಸೇವೆ ಸಲ್ಲಿಸಿದ ಹಿರಿಯ ಅತಿಥಿ ಉಪನ್ಯಾಸಕರು ಕಳೆದ ಎರಡು ವರ್ಷಗಳಿಂದ ಕೆಲಸ ಇಲ್ಲದೆ ಬದುಕುವ ಉತ್ಸಾಹವನ್ನೇ ಕಳೆದುಕೊಂಡಿದ್ದಾರೆ. ಇಲಾಖೆ ಕಡಿಮೆ ವೇತನಕ್ಕೆ ಇಷ್ಟು ವರ್ಷಗಳ ಕಾಲ ದುಡಿಸಿಕೊಂಡು ಈಗ ಹಿರಿಯ ಅತಿಥಿ ಉಪನ್ಯಾಸಕರ ಜೀವನದ ಜೊತೆ ಆಟವಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸೆಪ್ಟೆಂಬರ್ ಎರಡನೇ ವಾರದೊಳಗೆ ಶೈಕ್ಷಣಿಕ ಸಂಯೋಜಕ ಹುದ್ದೆಗಳಿಗೆ ನಾನ್ ಯುಜಿಸಿ ಅತಿಥಿ ಉಪನ್ಯಾಸಕರನ್ನು ಆಯ್ಕೆಗೊಳಿಸುವುದಾಗಿ ತಿಳಿಸಿದ್ದ ಉನ್ನತ ಶಿಕ್ಷಣ ಇಲಾಖೆ ಸೆಪ್ಟೆಂಬರ್ ಮುಗಿಯುತ್ತಾ ಬಂದರೂ ಮೌನವಾಗಿದೆ. ಆಯುಕ್ತರು ಕೂಡಲೇ ಶೈಕ್ಷಣಿಕ ಸಂಯೋಜಕರ ಆಯ್ಕೆ ಪ್ರಕ್ರಿಯೆ ದಿನ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.




