ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಸೀಮ ಶೇಖ್ ಎಂಬಾತನನ್ನು ದೋಷಿ ಎಂದು ಘೋಷಿಸಿರುವ ಕಲಬುರಗಿ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯ (ಎಫ್‌ಟಿಎಸ್‌ಸಿ–1), ಆತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಧೀಶ ಎಸ್.ಎಲ್. ಚವ್ಹಾಣ ಅವರು ಪ್ರಕರಣದ ಸಾಕ್ಷ್ಯಾಧಾರಗಳು ಹಾಗೂ ಉಭಯ ಪಕ್ಷಗಳ ವಾದವನ್ನು ಪರಿಗಣಿಸಿ ತೀರ್ಪು ಪ್ರಕಟಿಸಿದ್ದಾರೆ.
ಪರಿಚಯ ಬೆಳೆಸಿ ದೌರ್ಜನ್ಯ ಎಸಗಿದ ಆರೋಪ
ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ. ಪ್ರಕರಣದ ಪ್ರಕಾರ, ಪಿಯುಸಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಗೆ ಆಟೋ ಚಾಲಕನಾಗಿದ್ದ ಆರೋಪಿಯ ಪರಿಚಯವಾಗಿತ್ತು. ಕಾಲೇಜಿಗೆ ತೆರಳುವ ಮತ್ತು ಹಿಂದಿರುಗುವ ಸಂದರ್ಭದಲ್ಲಿ ಆತನ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಂದಿಗೆ ಆರೋಪಿ ಪರಿಚಯ ಬೆಳೆಸಿಕೊಂಡು, ಬಳಿಕ ಮೊಬೈಲ್ ಸಂಖ್ಯೆ ಪಡೆದು ಸಂಪರ್ಕದಲ್ಲಿದ್ದ ಎಂದು ತನಿಖೆಯಿಂದ ತಿಳಿದು ಬಂದಿತ್ತು.
ಮದುವೆಯಾಗುವುದಾಗಿ ನಂಬಿಸಿ ಬಾಲಕಿಯನ್ನು ರಹಮತ್ ನಗರದ ತನ್ನ ನಿವಾಸಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. 2025ರ ಮಾರ್ಚ್ 15ರಂದು ಮತ್ತೊಮ್ಮೆ ಬಾಲಕಿಯನ್ನು ತನ್ನ ನಿವಾಸಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ ಆರೋಪವೂ ಪ್ರಕರಣದಲ್ಲಿತ್ತು.
This video cannot be played in your browser. Open the video directly

ಬಳಿಕ ಬಾಲಕಿಗೆ ಮಾತ್ರೆ ನೀಡಿದ್ದಲ್ಲದೆ, ಆಕೆ ಆರೋಪಿಯ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ದಾಖಲಾಗಿತ್ತು.
ಸಾಕ್ಷ್ಯಾಧಾರಗಳ ಆಧಾರದಲ್ಲಿ ದೋಷ ಸಾಬೀತು
ಘಟನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಸುಶೀಲಕುಮಾರ್ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು. ಬಳಿಕ ಸಬ್ ಅರ್ಬನ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ. ರಾಜಣ್ಣ ಅವರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಸಿಇಸಿ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ: ಎಸ್‌ಐಆರ್ ಸ್ಥಗಿತಕ್ಕೆ ಸಿಪಿಐ ಒತ್ತಾಯ
ವಿಚಾರಣೆ ವೇಳೆ ಹಾಜರುಪಡಿಸಲಾದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಯನ್ನು ದೋಷಿ ಎಂದು ಘೋಷಿಸಿದೆ. ಪೋಕ್ಸೋ ಕಾಯ್ದೆಯ ಕಲಂ 6ರ ಅನ್ವಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿದೆ.
₹5 ಲಕ್ಷ ಪರಿಹಾರಕ್ಕೆ ಆದೇಶ
ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ₹5 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು.





