ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ಹಾಗೂ ವಿವಿಧ ಜಾತ್ಯಾತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಪದಾಧಿಕಾರಿಗಳು ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ಘೋಷಣೆಗಳನ್ನು ಕೂಗಿ, ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡ ಮಾರೆಪ್ಪ ಹರವಿ, ದೇಶದಲ್ಲಿ ಜಾರಿಗೊಳ್ಳುತ್ತಿರುವ ಎಸ್‌ಐಆರ್ ಪ್ರಕ್ರಿಯೆಯು ಜನವಿರೋಧಿಯಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಈವರೆಗೆ ಜಾಥಾ, ಪ್ರತಿಭಟನೆ ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಚುನಾವಣಾ ಆಯೋಗದ ಗಮನ ಸೆಳೆಯಲು ಪ್ರಯತ್ನಿಸಿದ್ದರೂ ಯಾವುದೇ ಸಮರ್ಪಕ ಪ್ರತಿಕ್ರಿಯೆ ದೊರೆತಿಲ್ಲ. ಚುನಾವಣಾ ಆಯೋಗದ ಈ ಮೌನವು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಸರ್ವಾಧಿಕಾರಿ ಧೋರಣೆಗೆ ಎಡೆ ಮಾಡಿಕೊಡುವಂತಾಗಿದೆ ಎಂದು ಅವರು ಟೀಕಿಸಿದರು
ಪಶ್ಚಿಮ ಬಂಗಾಳದಲ್ಲಿ ಸುಮಾರು 90 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ.ಕರ್ನಾಟಕವು ಬಸವಣ್ಣ, ಸೂಫಿ ಸಂತರ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರ ನಾಡಾಗಿದ್ದು, ಇಲ್ಲಿ ಯಾವುದೇ ನಾಗರಿಕ ಮತದಾನದ ಹಕ್ಕಿನಿಂದ ವಂಚಿತರಾಗಬಾರದು.
ಎಸ್‌ಐಆರ್ ಪ್ರಕ್ರಿಯೆಯಿಂದ ಬಡವರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ. ರಾಜ್ಯದಲ್ಲಿ ಒಂದೇ ಒಂದು ಮತದಾರರು ಮತದಾನದಿಂದ ಹೊರಗುಳಿಯಬಾರದು ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಟ್ಟಿ ಪಟ್ಟಣದ ಕಾಕಾನಗರ ವಾರ್ಡ್ ಅಭಿವೃದ್ಧಿಗೆ ಆಗ್ರಹಿಸಿ ಪಂ.ಪಂಚಾಯತ್ ಮುಂದೆ ಪ್ರತಿಭಟನೆ
ಪ್ರತಿಭಟನೆಯಲ್ಲಿ ಜಮಾತ್ ಇಸ್ಲಾಂ ಹಿಂದ್ ಮುಖಂಡರು ಅಸಿಮುದ್ದೀನ್ ಅಖ್ತರ್, ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕರು ಶರಣು ಮುದ್ದಮಗುಡ್ಡಿ, ಆಂಜನೇಯ ಕುರುಬದೊಡ್ಡಿ, ಅಕ್ಬರ್ ಸಾಬ್, ಕಾಂಗ್ರೆಸ್ ಮುಖಂಡ ಫೈಸಲ್ ಇನ್ನಿತರರು ಉಪಸ್ಥಿತರಿದ್ದರು.




