ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಬಾಕಿ ಇರುವ ಗ್ರಾಹಕ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದ್ದು, ಗ್ರಾಹಕ ವ್ಯಾಜ್ಯಗಳನ್ನು ಲೋಕ್ ಅದಾಲತ್ ಮೂಲಕ ಶೀಘ್ರವಾಗಿ ಇತ್ಯರ್ಥ ಮಾಡಿಕೊಳ್ಳುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಅಧ್ಯಕ್ಷೆ ರೇಣುಕಾದೇವಿ ದೇಶಪಾಂಡೆ ತಿಳಿಸಿದ್ದಾರೆ.
ರಾಮನಗರದ ಜಿಲ್ಲಾ ಗ್ರಾಹಕರ ಆಯೋಗದ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಸಂದರ್ಭದಲ್ಲಿ ಮಾತನಾಡುತ್ತಾ, “ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಸೌಹಾರ್ದಯುತವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ” ಎಂದು ಹೇಳಿದರು.
ಶುಕ್ರವಾರ ನಡೆದ ಲೋಕ್ ಅದಾಲತ್‌ನಲ್ಲಿ 6 ವ್ಯಾಜ್ಯಗಳನ್ನು ವಿಚಾರಿಸಲಾಯಿತು. ಇದರಲ್ಲಿ 2 ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇನ್ನೆರಡು ವ್ಯಾಜ್ಯಗಳ ಸಂಧಾನಕ್ಕೆ ಕಕ್ಷಿದಾರರು ಸಮಯಾವಕಾಶ ಕೇಳಿದ್ದಾರೆ. ಉಳಿದ ೨ ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಗಿದೆ.
ಏನಿದು ಲೋಕ್ ಅದಾಲತ್?
ಲೋಕ್ ಅದಾಲತ್ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಮತ್ತು ಆಯಾ ರಾಜ್ಯಗಳ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ವಹಣೆಯಡಿ ವರ್ಷಪೂರ್ತಿ ಕಾರ್ಯ ನಿರ್ವಹಿಸುತ್ತದೆ. ನ್ಯಾಯಾಲಯದ ಹೊರಗೆ ವಾದ-ಪ್ರತಿವಾದವನ್ನು ಆಲಿಸಿ ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಪರಿಹರಿಸಿಕೊಡುತ್ತದೆ. ಇದನ್ನು ಜನತಾ ನ್ಯಾಯಾಲಯ ಎಂದೂ ಕರೆಯಲಾಗುತ್ತದೆ.
ಲೋಕ್ ಅದಾಲತ್ ಮೂಲಕ ವ್ಯಾಜ್ಯಗಳ ಇತ್ಯರ್ಥಕ್ಕೆ ಹೆಚ್ಚಿನ ಕಾಲಾವಕಾಶ ಬೇಡ ಮತ್ತು ಸಮಯದ ಉಳಿತಾಯವೂ ಆಗುತ್ತದೆ. ನ್ಯಾಯಾಲಯದಲ್ಲಿ ಬಗೆಹರಿಯಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುವಾಗ ಲೋಕ್ ಅದಾಲತ್ ಶೀಘ್ರವಾಗಿ ಮತ್ತು ಕಡಿಮೆ ಕಾನೂನು ವೆಚ್ಚದಲ್ಲಿ ಗ್ರಾಹಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸುತ್ತದೆ. ಇಲ್ಲಿ ಯಾವುದೇ ರೀತಿಯ ಕಾನೂನು ಶುಲ್ಕ ಇರುವುದಿಲ್ಲ ಜೊತೆಗೆ ಪ್ರಕರಣಗಳು ಒಂದೇ ದಿನದಲ್ಲಿ ಇತ್ಯರ್ಥಗೊಳ್ಳುತ್ತವೆ.
ಚೆಕ್ ಬೌನ್ಸ್, ಮೋಟಾರು ಅಪಘಾತ ಪರಿಹಾರ, ಕೌಟುಂಬಿಕ ವ್ಯಾಜ್ಯಗಳು, ಆಸ್ತಿ ವಿವಾದ ಮತ್ತು ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಇಲ್ಲಿ ಬಗೆಹರಿಸಲಾಗುತ್ತದೆ. ಇಲ್ಲಿ ನೀಡಲಾಗುವ ತೀರ್ಪು ಅಂತಿಮವಾಗಿದ್ದು, ಮೇಲ್ಮನವಿಗೆ ಅವಕಾಶ ಇರುವುದಿಲ್ಲ.





